ಮಹಾರಾಷ್ಟ್ರ | ಒಂದು ಲಕ್ಷ ರೂ. ಸಾಲ ಬಡ್ಡಿ ಸಮೇತ ಆಗಿದ್ದು 74 ಲಕ್ಷ! : ಕಿಡ್ನಿ ಮಾರಿದರೂ ಸಾಲ ಮುಗಿಯಲಿಲ್ಲ!

Dec 17, 2025 - 18:42
Dec 17, 2025 - 19:03
 0  673
ಮಹಾರಾಷ್ಟ್ರ | ಒಂದು ಲಕ್ಷ ರೂ. ಸಾಲ ಬಡ್ಡಿ ಸಮೇತ ಆಗಿದ್ದು 74 ಲಕ್ಷ!  :  ಕಿಡ್ನಿ ಮಾರಿದರೂ ಸಾಲ ಮುಗಿಯಲಿಲ್ಲ!

ಚಂದ್ರಾಪುರ್ (ಮಹಾರಾಷ್ಟ್ರ): ದಿನಕ್ಕೆ ₹10,000 ಬಡ್ಡಿ ದರದಲ್ಲಿ ಪಡೆದಿದ್ದ ₹1 ಲಕ್ಷ ಸಾಲವು ₹74 ಲಕ್ಷಕ್ಕೆ ಹಿಗ್ಗಿದ ಪರಿಣಾಮ, ರೈತನೊಬ್ಬ ವಿದೇಶಕ್ಕೆ ತೆರಳಿ ತನ್ನ ಕಿಡ್ನಿಯನ್ನು ಮಾರಾಟ ಮಾಡಬೇಕಾದ ದಾರುಣ ಘಟನೆ ಮಹಾರಾಷ್ಟ್ರದ ಚಂದ್ರಾಪುರ್ ಜಿಲ್ಲೆಯಲ್ಲಿ ವರದಿಯಾಗಿದೆ.

ಚಂದ್ರಾಪುರ್ ಜಿಲ್ಲೆಯ ರೈತ ರೋಶನ್ ಸದಾಶಿವ್ ಕುಡೆ ಅವರು ನಿರಂತರ ಕೃಷಿ ನಷ್ಟದಿಂದ ಸಂಕಷ್ಟಕ್ಕೆ ಒಳಗಾಗಿ, ಜೀವನೋಪಾಯಕ್ಕಾಗಿ ಹೈನುಗಾರಿಕೆ ಉದ್ಯಮ ಆರಂಭಿಸುವ ಉದ್ದೇಶದಿಂದ ವಿವಿಧ ಸಾಲಗಾರರಿಂದ ಒಟ್ಟು ₹1 ಲಕ್ಷ ಸಾಲ ಪಡೆದಿದ್ದರು. ಆದರೆ ಉದ್ಯಮ ಆರಂಭಿಸುವ ಮೊದಲುವೇ ಖರೀದಿಸಿದ್ದ ಜಾನುವಾರುಗಳು ಮೃತಪಟ್ಟಿದ್ದು, ಜಮೀನಿನಲ್ಲಿ ಬೆಳೆದ ಬೆಳೆ ಸಂಪೂರ್ಣವಾಗಿ ವಿಫಲವಾಗಿದೆ.

ಇದರಿಂದ ಸಾಲದ ಹೊರೆ ದಿನೇದಿನೇ ಹೆಚ್ಚುತ್ತಾ ಹೋಗಿದ್ದು, ಸಾಲಗಾರರು ಕುಡೆ ಮತ್ತು ಅವರ ಕುಟುಂಬಕ್ಕೆ ನಿರಂತರ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಸಾಲ ತೀರಿಸಲು ಕುಡೆ ಅವರು ತಮ್ಮ ಜಮೀನು, ಟ್ರ್ಯಾಕ್ಟರ್ ಹಾಗೂ ಮೌಲ್ಯವಾದ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡಿದರೂ, ಸಾಲ ಸಂಪೂರ್ಣ ತೀರಿಸಲು ಸಾಧ್ಯವಾಗಿಲ್ಲ.

ಅಂತಿಮವಾಗಿ ಆರ್ಥಿಕವಾಗಿ ಸಂಪೂರ್ಣ ಕುಸಿದ ಸ್ಥಿತಿಯಲ್ಲಿ, ಏಜೆಂಟ್‌ಗಳ ಮೂಲಕ ಕೋಲ್ಕತ್ತಾಗೆ ತೆರಳಿದ ಕುಡೆ ಅವರು ವೈದ್ಯಕೀಯ ಪರೀಕ್ಷೆಗಳ ಬಳಿಕ ಕಾಂಬೋಡಿಯಾಕ್ಕೆ ಕರೆದೊಯ್ಯಲ್ಪಟ್ಟಿದ್ದು, ಅಲ್ಲಿ ₹8 ಲಕ್ಷ ಮೊತ್ತಕ್ಕೆ ತಮ್ಮ ಕಿಡ್ನಿಯನ್ನು ಮಾರಾಟ ಮಾಡಬೇಕಾಯಿತು ಎಂದು ತಿಳಿದು ಬಂದಿದೆ.

ಈ ಸಂಬಂಧ ಸ್ಥಳೀಯ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ. ಇದರಿಂದ ತಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ ಎಂದು ಕುಡೆ ಅಳಲು ತೋಡಿಕೊಂಡಿದ್ದಾರೆ. ತಮಗೆ ನ್ಯಾಯ ದೊರೆಯದಿದ್ದಲ್ಲಿ, ಕುಟುಂಬದ ಸದಸ್ಯರೊಂದಿಗೆ ಮುಂಬೈನ ರಾಜ್ಯ ಸರ್ಕಾರದ ಪ್ರಧಾನ ಕಚೇರಿ ಎದುರು ಆತ್ಮಾಹುತಿ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಈ ಪ್ರಕರಣದಲ್ಲಿ ಕಿರುಕುಳ ನೀಡಿದ ಸಾಲಗಾರರನ್ನು ಕಿಶೋರ್ ಬವಾಂಕುಲೆ, ಪ್ರದೀಪ್ ಬವಾಂಕುಲೆ, ಸಂಜಯ್ ಬಲ್ಲಾರ್‌ಪುರೆ ಹಾಗೂ ಲಕ್ಷ್ಮಣ್ ಬೋರ್ಕರ್ ಅವರನ್ನು ಗುರುತಿಸಲಾಗಿದ್ದು, ಅವರು ಬ್ರಹ್ಮಪುರಿ ಪಟ್ಟಣದ ನಿವಾಸಿಗಳಾಗಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 1
Sad Sad 3
Wow Wow 0