ಮಂಡ್ಯ: ಮನೆಯೊಳಗೆ ಹರಿದಿದ್ದ ನಿಗೂಢ ರಕ್ತದ ರಹಸ್ಯ ಬಯಲು; ರಕ್ತ ಯಾರದ್ದು?

ಮಂಡ್ಯ: ಮನೆಯೊಳಗೆ ಹರಿದಿದ್ದ ನಿಗೂಢ ರಕ್ತದ ರಹಸ್ಯ ಬಯಲು; ರಕ್ತ ಯಾರದ್ದು?

ಮಂಡ್ಯ, ಡಿ 20: ಜಿಲ್ಲೆಯ ಮದ್ದೂರು ತಾಲ್ಲೂಕಿನ ಹೊಂಬಾಳೆಗೌಡನ ದೊಡ್ಡಿ ಗ್ರಾಮದಲ್ಲಿ ಕೆಲ ದಿನಗಳಿಂದ ಚರ್ಚೆಗೆ ಕಾರಣವಾಗಿದ್ದ ನಿಗೂಢ ರಕ್ತದ ಕಲೆಗಳ ಪ್ರಕರಣದ ಸತ್ಯಾಂಶ ಕೊನೆಗೂ ಬಹಿರಂಗವಾಗಿದೆ. ಎಫ್‌ಎಸ್‌ಎಲ್ (ವೈಜ್ಞಾನಿಕ ತನಿಖಾ ಪ್ರಯೋಗಾಲಯ) ವರದಿ ಪ್ರಕಾರ, ಮನೆಯೊಳಗೆ ಕಂಡುಬಂದ ರಕ್ತವು ಮನೆ ಮಾಲೀಕ ಸತೀಶ್ ಅವರದ್ದೇ ಎಂಬುದು ದೃಢಪಟ್ಟಿದೆ.

ಅಕ್ಟೋಬರ್ 28ರಂದು ಸತೀಶ್–ಸೌಮ್ಯ ದಂಪತಿಯ ಮನೆಯಲ್ಲಿ ಹಾಲ್‌, ಬಾತ್‌ರೂಮ್‌, ಟಿವಿ ಹಾಗೂ ಫ್ಯಾನ್‌ಗಳ ಮೇಲೂ ರಕ್ತದ ಕಲೆಗಳು ಕಾಣಿಸಿಕೊಂಡಿದ್ದವು. ಇದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆರಂಭದಲ್ಲಿ ಪ್ರಾಣಿಯ ರಕ್ತ ಇರಬಹುದೆಂಬ ಶಂಕೆ ವ್ಯಕ್ತವಾದರೂ, ಪ್ರಾಥಮಿಕ ಪರೀಕ್ಷೆಯಲ್ಲಿ ಅದು ಮಾನವ ರಕ್ತ ಎಂಬುದು ದೃಢವಾಗಿತ್ತು.

ಪ್ರಕರಣದ ಗಂಭೀರತೆಯನ್ನು ಗಮನಿಸಿ ಬೆಸಗರಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಎಫ್‌ಎಸ್‌ಎಲ್ ಹಾಗೂ ಶ್ವಾನದಳದ ಸಹಕಾರದಿಂದ ಸ್ಥಳ ಪರಿಶೀಲನೆ ನಡೆಸಿ ರಕ್ತದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಇದೀಗ ಲಭಿಸಿದ ವರದಿಯಲ್ಲಿ, ರಕ್ತವು ಸತೀಶ್ ಅವರದ್ದೇ ಎಂದು ಉಲ್ಲೇಖಿಸಲಾಗಿದೆ.

ಪೊಲೀಸ್ ತನಿಖೆಯ ಪ್ರಕಾರ, ಸತೀಶ್ ಅವರು ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ರಕ್ತ ತೆಳುಗೊಳಿಸುವ ಔಷಧಿಗಳನ್ನು ಸೇವಿಸುತ್ತಿದ್ದರು. ದೇಹದ ಮೇಲೆ ಉಂಟಾದ ಸಣ್ಣ ಗಾಯದಿಂದ ಅವರಿಗೆ ತಿಳಿಯದಂತೆಯೇ ರಕ್ತ ಚಿಮ್ಮಿ ಮನೆಯೊಳಗೆ ಹರಿದಿದೆ ಎಂದು ತಿಳಿದುಬಂದಿದೆ. ರಕ್ತದ ಕಲೆಗಳು ಮನೆಯ ವಿವಿಧ ಭಾಗಗಳಲ್ಲಿ ಕಂಡುಬಂದಿದ್ದರಿಂದ ದುಷ್ಕೃತ್ಯ ಅಥವಾ ಬೇರೆ ದುರುದ್ದೇಶವಿರಬಹುದೆಂಬ ಅನುಮಾನಗಳು ಮೂಡಿದ್ದವು. 

ಆದರೆ ಎಲ್ಲಾ ಆಯಾಮಗಳಲ್ಲಿ ನಡೆಸಿದ ತನಿಖೆಯ ಬಳಿಕ ಯಾವುದೇ ಅಪರಾಧ ಕೃತ್ಯ ನಡೆದಿಲ್ಲ ಎಂಬುದು ಸ್ಪಷ್ಟವಾಗಿದ್ದು, ಎಫ್‌ಎಸ್‌ಎಲ್ ವರದಿಯಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.