ಮಂಗಳೂರು | ನಕಲಿ ಚಿನ್ನಾಭರಣ ಅಡವಿಟ್ಟು ವಂಚನೆ; ಆರು ಮಂದಿಯ ಬಂಧನ, ಒಬ್ಬ ಪರಾರಿ : ನಕಲಿ ಚಿನ್ನ ತಯಾರಿಸಿ ಅಸಲಿ ಹಾಲ್ ಮಾರ್ಕ್ ಹಾಕುತ್ತಿದ್ದ ಖತರ್ನಾಕ್ ಗಳು!

Nov 27, 2025 - 19:02
Nov 27, 2025 - 19:03
 0  1.2k
ಮಂಗಳೂರು | ನಕಲಿ ಚಿನ್ನಾಭರಣ ಅಡವಿಟ್ಟು ವಂಚನೆ; ಆರು ಮಂದಿಯ ಬಂಧನ, ಒಬ್ಬ ಪರಾರಿ  : ನಕಲಿ ಚಿನ್ನ ತಯಾರಿಸಿ ಅಸಲಿ ಹಾಲ್ ಮಾರ್ಕ್ ಹಾಕುತ್ತಿದ್ದ ಖತರ್ನಾಕ್ ಗಳು!

ಉಳ್ಳಾಲ: ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ಲಕ್ಷಾಂತರ ರೂಪಾಯಿ ವಂಚಿಸಿದ್ದ ಆರು ಮಂದಿಯನ್ನು ಉಳ್ಳಾಲ ಠಾಣೆ ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ತೊಕ್ಕೊಟ್ಟಿನ ಹಣಕಾಸು ಸಂಸ್ಥೆಯೊಂದರಲ್ಲಿ ನಡೆದ ಈ ವಂಚನೆ ಪ್ರಕರಣ ಹೊರಬಂದ ಹಿನ್ನೆಲೆಯಲ್ಲಿ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದಾರೆ.

ನ. 22ರಂದು ಸಂಜೆ 5 ಗಂಟೆ ವೇಳೆಗೆ ಹೆಜಮಾಡಿಯ ನೌಫಾಲ್ ಮತ್ತು ಮಂಚಿಲದ ಝಹೀಮ್ ಅಹ್ಮದ್ ಎಂಬವರು ಕೊಣಾಜೆ–ವಿವಿ ರಸ್ತೆಯಲ್ಲಿರುವ ಹಣಕಾಸು ಸಂಸ್ಥೆಗೆ ಭೇಟಿ ನೀಡಿ 41 ಗ್ರಾಂ ತೂಕದ ಎರಡು ಚೈನ್‌ಗಳನ್ನು ಅಡವಿಟ್ಟು ಸಾಲ ಕೇಳಿದ್ದರು. ಸಂಸ್ಥೆಯ ಮಾಲಕ ದಿನೇಶ್ ರೈ ಮತ್ತು ಸಿಬ್ಬಂದಿ ನಿಕೇಶ್ ಪರಿಶೀಲಿಸಿದಾಗ ಆಭರಣಗಳ ಮೇಲೆ 916 ಶುದ್ಧತೆ ಗುರುತು ಕಂಡುಬಂದಿತ್ತು. ಓರೆ ಕಲ್ಲು ಪರೀಕ್ಷೆಯಲ್ಲೂ ಚಿನ್ನವೆಂದು ತೋರುತ್ತಿದ್ದ ಕಾರಣ, ಝಹೀಮ್ ಹೆಸರಿನಲ್ಲಿ ₹3.55 ಲಕ್ಷ ಸಾಲ ಮಂಜೂರಾಗಿತ್ತು.

ಇದರ ಎರಡು ದಿನಗಳ ನಂತರ, ನ. 24ರಂದು ಉಳ್ಳಾಲ ಮೇಲಂಗಡಿಯ ಇಮ್ತಿಯಾಝ್ ಎಂಬಾತ ಇದೇ ಸಂಸ್ಥೆಗೆ ಬಂದು 55 ಗ್ರಾಂ ತೂಕದ ಎರಡು ಚೈನ್ ಮತ್ತು ಬ್ರಾಸ್‌ಲೇಟ್ ಅಡವಿಟ್ಟು ₹4.80 ಲಕ್ಷ ಸಾಲ ಕೇಳಿದ್ದ. ಆತ ತಂದಿದ್ದ ಆಭರಣಗಳ ಮೇಲೂ 916 ಗುರುತು ಕಂಡುಬಂದಿದ್ದು, ದುಬೈ ಚಿನ್ನವೆಂದು ತಿಳಿಸಿದ್ದಾನೆ ಎಂದು ಹೇಳಲಾಗಿದೆ.

ಎರಡು ದಿನಗಳಲ್ಲಿ ಇದೇ ರೀತಿಯ ಆಭರಣಗಳು ಅಡವಿಡಲು ಬರತೊಡಗಿದ ಹಿನ್ನೆಲೆಯಲ್ಲಿ ದಿನೇಶ್ ರೈ ಅನುಮಾನಗೊಂಡು, ಎರಡೂ ದಿನ ಅಡವಿಟ್ಟಿದ್ದ ಆಭರಣಗಳನ್ನು ಮಂಗಳೂರಿನ ಚಿನ್ನದ ಕೆಲಸ ಮಾಡುವ ಉದಯ್ ಆಚಾರ್ಯ ಅವರ ಬಳಿ ಪರೀಕ್ಷೆಗೆ ಕೊಂಡೊಯ್ದರು. ಆಸಿಡ್ ಪರೀಕ್ಷೆಯಲ್ಲಿ ಆಭರಣಗಳಿಂದ ನೊರೆ ಹೊರಹೊಮ್ಮಿ ನಕಲಿ ಚಿನ್ನವೆಂದು ದೃಢಪಟ್ಟಿತು!

ತಕ್ಷಣ ಅವರು ದೂರು ದಾಖಲಿಸಿದ್ದು, ಉಳ್ಳಾಲ ಪೊಲೀಸರು ವಿಚಾರಣೆ ನಡೆಸಿ ಮಂಚಿಲದ ಝಹೀಮ್, ಹರೇಕಳದ ಇಸ್ಮಾಯಿಲ್, ಮುಹಮ್ಮದ್ ಮಿಸ್ಬಾ, ಕಾಟಿಪಳ್ಳದ ಉಮರ್ ಫಾರೂಕ್, ಉಳ್ಳಾಲ ಮೇಲಂಗಡಿಯ ಇಮ್ತಿಯಾಝ್ ಮತ್ತು ಮಹಾರಾಷ್ಟ್ರ ಮೂಲದ ವಿಕ್ರಮ್ ಎಂಬ ಆರು ಮಂದಿಯನ್ನು ಬಂಧಿಸಿದ್ದಾರೆ. ನೌಫಾಲ್ ಪರಾರಿಯಾಗಿದ್ದು, ಆತನಿಗಾಗಿ ಶೋಧ ಮುಂದುವರಿದಿದೆ.

ಈ ಪೈಕಿ ವಿಕ್ರಂ ನಕಲಿ ಚಿನ್ನ ತಮ್ಮದಾಗಿಸಿ ಅಸಲಿ ಎಂಬಂತೆ ಹಾಲ್ ಮಾರ್ಕ್ ಹಾಕಿ ಕೊಡುತ್ತಿದ್ದ ಎನ್ನಲಾಗಿದೆ. ಈತನ ವಿರುದ್ಧ ಮಹಾರಾಷ್ಟ್ರದಲ್ಲೂ ಇದೇ ರೀತಿಯ ಪ್ರಕರಣಗಳು ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ.

ಬಂಧಿತರಿಂದ ಆರು ಮೊಬೈಲ್ ಫೋನ್‌ಗಳು, ₹47,000 ನಗದು ಮತ್ತು 9 ಕ್ಯಾರೆಟ್ ತೂಕದ 141 ಗ್ರಾಂ ನಕಲಿ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಹಿಂದಿರುವ ಜಾಲ ಪತ್ತೆಗಾಗಿ ತನಿಖೆಯನ್ನು ವಿಸ್ತರಿಸಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 2
Angry Angry 0
Sad Sad 0
Wow Wow 0