ವಿದ್ಯಾಸಂಸ್ಥೆಗೆ ನೀಡಿದ ಜಾಗವನ್ನು ಕಬಳಿಸಿಕೊಂಡು ಶಾದಿಮಹಲ್ ನಿರ್ಮಾಣಕ್ಕೆ ಮುಂದಾಗಲಾಗಿದ್ದು, ಜಾಗವನ್ನು ಅಕ್ರಮವಾಗಿ ವಕ್ಫ್‌ಗೆ ವರ್ಗಾಹಿಸಲಾಗಿದೆ; ಮನುಮುತ್ತಪ್ಪ ಆರೋಪ
admincoorgdaily

ಮಡಿಕೇರಿ: ವಿದ್ಯಾಸಂಸ್ಥೆಗೆ ನೀಡಿದ ಜಾಗವನ್ನು ಕಬಳಿಸಿಕೊಂಡು ಶಾದಿಮಹಲ್ ನಿರ್ಮಾಣಕ್ಕೆ ಮುಂದಾಗಲಾಗಿದ್ದು, ಜಾಗವನ್ನು ಅಕ್ರಮವಾಗಿ ವಕ್ಫ್‌ಗೆ ವರ್ಗಾಹಿಸಲಾಗಿದೆ ಎಂದು ಆರೋಪಿಸಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ, ಈ ಕುರಿತು ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಪೋಕ್ಲು ವಿದ್ಯಾಸಂಸ್ಥೆಗೆ ಚೆರಿಯಪರಂಬುವಿನ ಬೇತು ಎಂಬಲ್ಲಿ ವಿವಿಧ ಕುಟುಂಬಸ್ಥರು ಹಾಗೂ ಸರ್ಕಾರದಿಂದ ಒಟ್ಟು ೪೭.೫೨ ಎಕರೆಗಳಷ್ಟು ಜಾಗ ದೊರೆತ್ತಿದ್ದು, ಶಾಲಾ ಸುಪರ್ದಿಯಲ್ಲಿದೆ. ಆದರೆ, ಕೆಲವರು ನಕಲಿ ದಾಖಲೆಗಳನ್ನು ಹಾಗೂ ಹೊಸ ಸರ್ವೆ ನಂಬರ್ ಅನ್ನು ಸೃಷ್ಟಿಸಿ ವಿದ್ಯಾಸಂಸ್ಥೆಯ ಜಾಗವನ್ನು ಕಬಳಿಸಿದ್ದಾರೆ. ಈ ಶಾಲಾ ಜಾಗದಲ್ಲಿ ಶಾದಿಮಹಲ್ ನಿರ್ಮಾಣ ಕಾರ್ಯ ನಡೆಸಲು ಭೂಮಿಪೂಜೆ ನಡೆಸಲಾಗಿತ್ತು. ವಿದ್ಯಾಸಂಸ್ಥೆಗೆ ಸೇರಿದ ಜಾಗದಲ್ಲಿ ಮಸೀದಿ, ಖಬರಸ್ಥಾನಕ್ಕೆ ಹಾಗೂ ಶಾದಿಮಹಲ್ ನಿರ್ಮಾಣಕ್ಕೆ ಜಾಗ ನೀಡಲಾಗಿದೆ ಎಂದು ಆರೋಪಿಸಿದರು.
ವಿವಾದದ ಬಳಿಕ ಸರ್ವೆಗೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ನಮಗೆ ಸರ್ವೆಯ ಅಗತ್ಯವಿಲ್ಲ. ಅಕ್ರಮವಾಗಿ ದಾಖಲೆ ಸೃಷ್ಟಿಸಿದ ಕುರಿತು ತನಿಖೆ ಕೈಗೊಂಡು ಲೋಪಗಳನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸೂಕ್ತ ಕ್ರಮವಹಿಸದಿದ್ದಲ್ಲಿ ಸಾರ್ವಜನಿಕರು, ಸಂಘ, ಸಂಸ್ಥೆಗಳನ್ನು ಸೇರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಬಿಜೆಪಿ ವಕ್ತಾರ ತಳೂರು ಕಿಶೋರ್ ಕುಮಾರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರ ಬಿ.ಕೆ.ಅರುಣ್ ಕುಮಾರ್, ಮಾಧ್ಯಮ ಪ್ರಮುಖ ಸಜಿಲ್ ಕೃಷ್ಣನ್, ನಾಪೋಕ್ಲು ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಕರವಂಡ ಲವ ನಾಣಯ್ಯ ಹಾಜರಿದ್ದರು.