ಕರೂರಿನಲ್ಲಿ ನಟ ವಿಜಯ್ ಅವರ ಟಿವಿಕೆ ರ್‍ಯಾಲಿಯಲ್ಲಿ ಭೀಕರ ಕಾಲ್ತುಳಿತ: ಮೃತಪಟ್ಟವರ ಸಂಖ್ಯೆ 39ಕ್ಕೆ ಏರಿಕೆ
admincoorgdaily
ಕರೂರು: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಹಾಗೂ ನಟ-ರಾಜಕಾರಣಿ ವಿಜಯ್ ಅವರ ಪ್ರಚಾರ ರ್‍ಯಾಲಿಯಲ್ಲಿ ಶನಿವಾರ ಸಂಭವಿಸಿದ ಕಾಲ್ತುಳಿತದಲ್ಲಿ 39 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ 16 ಮಹಿಳೆಯರು ಮತ್ತು 10 ಮಕ್ಕಳು ಸೇರಿದ್ದಾರೆ. ಸುಮಾರು 51 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಧಿಕಾರಿಗಳ ಪ್ರಕಾರ, 10,000 ಮಂದಿಗೆ ಅನುಮತಿ ನೀಡಲಾಗಿದ್ದರೂ, ಸ್ಥಳದಲ್ಲಿ ಕನಿಷ್ಠ 50,000 ಮಂದಿ ಹಾಜರಾಗಿದ್ದರು. ಜನಸಂದಣಿ ನಿಯಂತ್ರಣ ತಪ್ಪಿ ಜನಜಂಗುಳಿ ಉಂಟಾಗಿ ಹಲವರು ಪ್ರಜ್ಞೆ ಕಳೆದುಕೊಂಡರು. ತುರ್ತು ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತಕ್ಷಣ ಕರೂರಿಗೆ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದರು. “ಇದು ರಾಜ್ಯದ ರಾಜಕೀಯ ಇತಿಹಾಸದಲ್ಲೇ ಅತಿದೊಡ್ಡ ದುರಂತ. ಇಂತಹ ಘಟನೆ ಮರುಕಳಿಸಬಾರದು” ಎಂದು ಸಿಎಂ ಸ್ಟಾಲಿನ್ ಹೇಳಿದರು. ಸರ್ಕಾರದಿಂದ ಮೃತರ ಕುಟುಂಬಗಳಿಗೆ ₹10 ಲಕ್ಷ ಮತ್ತು ಗಾಯಾಳುಗಳಿಗೆ ₹1 ಲಕ್ಷ ಪರಿಹಾರ ಘೋಷಿಸಲಾಗಿದೆ. ಜೊತೆಗೆ ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಅರುಣಾ ಜಗದೀಶನ್ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಲಾಗಿದೆ.
ಕರೂರ್ ಜಿಲ್ಲಾ ಪೊಲೀಸರು ಟಿವಿಕೆ ಪ್ರಧಾನ ಕಾರ್ಯದರ್ಶಿ ಆನಂದ್ ಮತ್ತು ಜಂಟಿ ಪ್ರಧಾನ ಕಾರ್ಯದರ್ಶಿ ನಿರ್ಮಲ್ ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಎಡಿಜಿಪಿ ಎಸ್. ಡೇವಿಡ್ಸನ್ ದೇವಶಿರ್ವತಂ ಪ್ರಾಥಮಿಕ ತನಿಖೆ ನಡೆಯುತ್ತಿದೆ ಎಂದು ತಿಳಿತಿಳಿಸಿದ್ದಾರೆ
ಘಟನೆಯ ನಂತರ ವಿಜಯ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಆಳವಾದ ಸಂತಾಪ ವ್ಯಕ್ತಪಡಿಸಿ, “ಕರೂರಿನಲ್ಲಿ ಪ್ರಾಣ ಕಳೆದುಕೊಂಡ ಸಹೋದರ-ಸಹೋದರಿಯರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಶೋಕಗಳು. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ” ಎಂದು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ದುರಂತವನ್ನು ತೀವ್ರ ದುಃಖಕರವೆಂದು ಕರೆದಿದ್ದು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿ, ಗಾಯಾಳುಗಳ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.
2026ರ ವಿಧಾನಸಭಾ ಚುನಾವಣೆಯ ಸಿದ್ಧತೆಯ ಭಾಗವಾಗಿ ವಿಜಯ್ ರಾಜ್ಯಾದ್ಯಂತ ನಡೆಸುತ್ತಿರುವ ಪ್ರಚಾರ ರ್‍ಯಾಲಿ, ಅನಾಹುತದಿಂದ ಶೋಕಾಚ್ಛಾದಿತ ವಾತಾವರಣಕ್ಕೆ ತಿರುಗಿದೆ.