ಬುದ್ಧಿಮಾಂದ್ಯ ಬಾಲಕನ ಮೇಲೆ ಶಿಕ್ಷಕ ದಂಪತಿಯಿಂದ ಕಣ್ಣಿಗೆ ಖಾರದಪುಡಿ ಎರಚಿ ಹಲ್ಲೆ ಆರೋಪ

Dec 20, 2025 - 21:38
 0  678
ಬುದ್ಧಿಮಾಂದ್ಯ ಬಾಲಕನ ಮೇಲೆ ಶಿಕ್ಷಕ ದಂಪತಿಯಿಂದ ಕಣ್ಣಿಗೆ ಖಾರದಪುಡಿ ಎರಚಿ ಹಲ್ಲೆ ಆರೋಪ
Photo credit: TV09

ಬಾಗಲಕೋಟೆ, ಡಿ.20: ನಗರದ ನವನಗರದ 54ನೇ ಸೆಕ್ಟರ್‌ ನಲ್ಲಿರುವ ದಿವ್ಯ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ 16 ವರ್ಷದ ಬುದ್ಧಿಮಾಂದ್ಯ ಬಾಲಕನ ಮೇಲೆ ಶಿಕ್ಷಕ ದಂಪತಿ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಬೆಲ್ಟ್ ಹಾಗೂ ಪ್ಲಾಸ್ಟಿಕ್ ಪೈಪ್‌ನಿಂದ ಥಳಿಸಿ, ಕಣ್ಣಿಗೆ ಖಾರದಪುಡಿ ಎರಚಲಾಗಿದೆ ಎಂದು ಪೋಷಕರು ದೂರಿದ್ದಾರೆ. 

ಹಲ್ಲೆಗೆ ಒಳಗಾದ ಬಾಲಕ 16 ವರ್ಷದವನು ಎಂದು ಗುರುತಿಸಲಾಗಿದೆ. ಪೋಷಕರ ಪ್ರಕಾರ, ಮಹಾರಾಷ್ಟ್ರ ಮೂಲದ ಶಿಕ್ಷಕ ಅಕ್ಷಯ್ ಇಂಗಳಕರ್ ಮತ್ತು ಅವರ ಪತ್ನಿ ಮಾಲಿನಿ ಬಾಲಕನ ಮೇಲೆ ಹಿಂಸಾಚಾರ ನಡೆಸಿದ್ದಾರೆ. ಹಲ್ಲೆ ಪ್ರಶ್ನಿಸಲು ಬಂದ ಪೋಷಕರಿಗೆ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ. ಇದೇ ವೇಳೆ, ಇನ್ನೊಬ್ಬ ಶಿಕ್ಷಕನಿಂದಲೂ ಬಾಲಕನ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಘಟನೆ ತಿಳಿಯುತ್ತಿದ್ದಂತೆ ನವನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿತ ಶಿಕ್ಷಕ ದಂಪತಿಯನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ. ಶಾಲೆಯ ಎದುರು ಪೋಷಕರು ಜಮಾಯಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

“ಪ್ರತಿ ತಿಂಗಳು ಆರು ಸಾವಿರ ರೂ. ಶುಲ್ಕ ನೀಡುತ್ತಿದ್ದೇವೆ. ಮಕ್ಕಳಿಂದ ಶೌಚಾಲಯ ಮತ್ತು ಬಾತ್‌ರೂಮ್ ಸ್ವಚ್ಛಗೊಳಿಸುವ ಕೆಲಸ ಮಾಡಿಸುತ್ತಿದ್ದರು. ಒಪ್ಪದಿದ್ದಾಗ ಕಣ್ಣಿಗೆ ಖಾರದಪುಡಿ ಎರಚಿ, ಬೆಲ್ಟ್ ಹಾಗೂ ಪ್ಲಾಸ್ಟಿಕ್ ಪೈಪ್‌ನಿಂದ ಹೊಡೆದಿದ್ದಾರೆ. ನಮ್ಮ ಮಗ ಮಾತ್ರವಲ್ಲ, ಇತರ ಮಕ್ಕಳಿಗೂ ಹಲ್ಲೆ ನಡೆದಿದೆ. ಶಾಲೆಯ ಪರವಾನಗಿ ರದ್ದುಪಡಿಸಿ ಬಂದ್ ಮಾಡಬೇಕು", ಎಂದು ಬಾಲಕನ ತಾಯಿ ಪಾರ್ವತಿ ಆಗ್ರಹಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0