"ಮಂತ್ರಿ,ಶಾಸಕರ ಜೊತೆ ಫೋಟೋ ತೆಗೆಸಿಕೊಂಡು 40 ಯುವಕರಿಗೆ ಕೊಳ್ಳಿ: ಮಡಿಕೇರಿ ಮೂಲದ ಅಪ್ಪ-ಮಗಳು ಮಾಡಿದ್ದೇನು ಗೊತ್ತೇ

Jun 15, 2026 - 08:01
 0  3k
"ಮಂತ್ರಿ,ಶಾಸಕರ  ಜೊತೆ ಫೋಟೋ ತೆಗೆಸಿಕೊಂಡು 40 ಯುವಕರಿಗೆ ಕೊಳ್ಳಿ: ಮಡಿಕೇರಿ ಮೂಲದ ಅಪ್ಪ-ಮಗಳು ಮಾಡಿದ್ದೇನು ಗೊತ್ತೇ

ಕೋವರ್‌ ಕೊಲ್ಲಿ ಇಂದ್ರೇಶ್‌

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ 40ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ನಂಬಿಸಿ ಕೋಟ್ಯಂತರ ರೂ. ವಂಚಿಸಿದ ತಂದೆ ಮತ್ತು ಮಗಳನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಡಿಕೇರಿ ನಗರ ಮೂಲದ ಪ್ರಸ್ತುತ ಆರ್‌.ಟಿ. ನಗರದ ಗಂಗೇನಹಳ್ಳಿ ನಿವಾಸಿ ಎಂ.ಎ.ಮನ್ಸೂರ್ ಅಹಮದ್ (75) ಮತ್ತು ಈತನ ಪುತ್ರಿ ಶಂಶಾದ್‌ ಬೇಗಂ (48) ಎಂದು ಗುರುತಿಸಲಾಗಿದೆ. ಎಂಬಿಎ ಪದವೀಧರೆ ಶಂಶದ್ ಬೇಗಂ , ಹಾಗೂ ಆಕೆಯ ತಂದೆ ಎಂಎ ಮನ್ಸೂರ್ ಅಹ್ಮದ್ ನಿರುದ್ಯೋಗಿಗಳಿಗೆ ಗಾಳ ಹಾಕುತಿದ್ದರು. ತಮಗೆ ಸರ್ಕಾರಿ ಅಧಿಕಾರಿಗಳು ಹಾಗೂ ಮಂತ್ರಿ , ಶಾಸಕರ ಜತೆ ಆಪ್ತವಾಗಿರುವುದಾಗಿ ಅವರ ಜತೆಗಿರುವ ಫೋಟೋಗಳನ್ನೂ ತೋರಿಸುತಿದ್ದರು. ನಂತರ ಹಣ ಪಡೆದು ಸಬೂಬು ಹೇಳಿಕೊಂಡು ವಂಚಿಸುತಿದ್ದರು.  

ಅಪ್ಪ ಮಗಳಿಂದ ಮೋಸ ಹೋಗಿದ್ದ ಉತ್ತರ ಕರ್ನಾಟಕದ ಯುವಕ ಸಂಗಮೇಶ್ ರಾಚಯ್ಯ ವಸ್ತ್ರದ್ ಎನ್ನುವ ಯುವಕ ನವೆಂಬರ್ 17ಕ್ಕೆ 2025ರಲ್ಲಿ ಸಿಸಿಬಿಗೆ ದೂರು ನೀಡಿದ್ದರು. ದೂರಿನಲ್ಲಿ ಆರೋಪಿಗಳು ತಮ್ಮ ಕಾಂಟ್ಯಾಕ್ಟ್ಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿಕೊಂಡಿದ್ದು ಉತ್ತರ ಕರ್ನಾಟಕದ ಸುಮಾರು 40 ಉದ್ಯೋಗಾಕಾಂಕ್ಷಿಗಳನ್ನು ವಂಚಿಸಿದ್ದು, 5.3 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಪಡೆದುಕೊಂಡಿದ್ದಾರೆ. ರೈಲ್ವೇ, ಆದಾಯ ತೆರಿಗೆ, ಆರೋಗ್ಯ ಇಲಾಖೆಗಳಲ್ಲಿ ಕೆಲಸ ಕೊಡಿಸೋದಾಗಿ ಭರವಸೆ ಕೊಟ್ಟಿದ್ದರು. ಸ್ವತಃ ತಾನೇ 20 ಕ್ಕೂ ಅಧಿಕ ಅಭ್ಯರ್ಥಿಗಳನ್ನು ಪರಿಚಯ ಮಾಡಿಕೊಟ್ಟಿದ್ದೆ , ಅವರೆಲ್ಲರಿಂದಲೂ ಹಣ ಪಡೆದುಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಿದ್ದರು.

 

ದೂರಿನ ನಂತರ ಸಿಸಿಬಿ ತನಿಖೆ ನಡೆಸಿ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದಾಗ ಆರೋಪಿಗಳು 2023ರಿಂದ 2025ರ ತನಕ ನಡೆದ ಹಣದ ವ್ಯವಹಾರ ನಡೆಸಿದ್ದು ಎಲ್ಲಾ ಹಣದ ವ್ಯವಹಾರ ಆನ್ಲೈನ್ ಆಗಿತ್ತು. ವಿಜಯಪುರದ ದೂರುದಾರನಿಗೆ ಒಬ್ಬನಿಗೇ ಉನ್ನತ ಉದ್ಯೋಗದ ಆಮಿಷ ಒಡ್ಡಿ 2.5 ಕೋಟಿ ಪಡೆದು ಸಬೂಬು ಹೇಳಿಕೊಂಡು ತಿರುಗುತಿದ್ದರು. ಆತ ಸಂಬಂಧಿಕರಿಂದ ಹಣ ಪಡೆದು ಕೊಟ್ಟಿದ್ದ.

ಅಲ್ಲದೆ ಅಪ್ಪ ಮಗಳು ಸೇರಿ ನಕಲಿ ಅಪಾಯಿಂಟ್ಮೆಂಟ್ ಲೆಟರ್ ಕಳಿಸಿ, ಬೆಂಗಳೂರು, ಮುಂಬೈ, ಕೊಲ್ಕತ್ತಾಗಳಲ್ಲಿ ನಕಲಿ ಟ್ರೈನಿಂಗ್ ಸೆಂಟರ್ ಸೆಟಪ್ ಮಾಡುತ್ತಿದ್ದರು.ಕೆಲವರಿಗೆ 4 ತಿಂಗಳ ಸಂಬಳವನ್ನೂ ನೀಡಿದ್ದಾರೆ ಎನ್ನಲಾಗಿದೆ. ಪ್ರತಿಯೊಬ್ಬರಿಂದ 5ರಿಂದ 10 ಲಕ್ಷ ಪಡೆದಿದ್ದರು ಎನ್ನಲಾಗಿದೆ.

  ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳ ಬಂಧಿಸಲಾಗಿದೆ. ಆರೋಪಿಗಳ ಜಾಲ ದೊಡ್ಡದಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ವಂಚನೆಗೊಳಗಾದವರ ಪೈಕಿ ಶೇ.90ರಷ್ಟು ಮಂದಿ ಉತ್ತರ ಕರ್ನಾಟದವರಾಗಿದ್ದಾರೆ. ರಾಜ್ಯದಲ್ಲಿ ಹೆಚ್ಚಾಗಿ ಸರ್ಕಾರಿ ಉದ್ಯೋಗ ಪಡೆಯಲು ಉತ್ತರ ಕರ್ನಾಟಕದವರು ಆಸಕ್ತಿ ಹೊಂದಿರುತ್ತಾರೆ. ಹೀಗಾಗಿ ಆರೋಪಿಗಳು ಆ ಭಾಗ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿಕೊಂಡು ವಂಚಿಸಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು. ನಕಲಿ ನೇಮಕಾತಿ ಪತ್ರ ನೀಡಿದ ಬಳಿಕ ತಮ್ಮ ಸಹವರ್ತಿಗಳ ಜತೆ ಸೇರಿಕೊಂಡು ಮುಂಬೈ, ಬೆಂಗಳೂರು ಮತ್ತು ಕೋಲ್ಕತಾದಲ್ಲಿ ನಕಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ, ಅಲ್ಲಿಗೆ ಸಂಬಳ ರಹಿತ ತರಬೇತಿಗೆ ಕಳುಹಿಸುತ್ತಿದ್ದರು ಎಂಬುದು ಗೊತ್ತಾಗಿದೆ. ಹೊರ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆ ತರಲಾಗಿದೆ. ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.  

ತನಿಖೆಯ ನಂತರ, ಇಬ್ಬರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಂಚನೆಯಲ್ಲಿ ಭಾಗಿಯಾಗಿರಬಹುದಾದ ಇತರರನ್ನು ಸಹ ಪೊಲೀಸರು ಹುಡುಕುತ್ತಿದ್ದಾರೆ. ಸುಲಿಗೆ ಮಾಡಲಾದ ಹಣವನ್ನು ಪತ್ತೆಹಚ್ಚಲು ಮತ್ತು ವಸೂಲಿ ಮಾಡಲು ತನಿಖೆ ಮುಂದುವರೆದಿದೆ. ಇವರ ಹಿಂದೆ ದೇಶಾದ್ಯಂತ ಹರಡಿರುವ ದೊಡ್ಡ ಜಾಲವೇ ಇದ್ದು ಅದರ ರೂವಾರಿಗಳ ಪತ್ತೆಗೆ ಪೋಲೀಸರು ಮುಂದಾಗಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 1
Angry Angry 1
Sad Sad 0
Wow Wow 0