ಮೂರು ಮಕ್ಕಳ ತಾಯಿಯನ್ನು ಕತ್ತು ಕೊಯ್ದು ಹತ್ಯೆ

Jan 15, 2026 - 23:45
Jan 16, 2026 - 00:01
 0  1.8k
ಮೂರು ಮಕ್ಕಳ ತಾಯಿಯನ್ನು ಕತ್ತು ಕೊಯ್ದು ಹತ್ಯೆ
Photo credit: TV09(ಬಂಧಿತ ಆರೋಪಿ& ಕೊಲೆಯಾದ ಮಹಿಳೆ)

ಬಳ್ಳಾರಿ, ಜ.15: ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಮೂರು ಮಕ್ಕಳ ತಾಯಿಯನ್ನು ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಪರಿಚಿತನಾಗಿದ್ದ ಯುವಕನೇ ಈ ಕೃತ್ಯ ಎಸಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮೃತ ಮಹಿಳೆ ಉಮಾ (32) ಕಳೆದ ಎಂಟು ವರ್ಷಗಳಿಂದ ಗಂಡನಿಂದ ದೂರವಾಗಿದ್ದು, ಮಕ್ಕಳೊಂದಿಗೆ ಹೊಸಪೇಟೆಯ ಚಾಪಲಗಡ್ಡ ಪ್ರದೇಶದಲ್ಲಿ ವಾಸವಾಗಿದ್ದರು. ಜೀವನೋಪಾಯಕ್ಕಾಗಿ ಅವರು ಹೊಸಪೇಟೆ ರೈಲ್ವೆ ನಿಲ್ದಾಣದ ಸ್ಟಾಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮೂವರು ಮಕ್ಕಳಲ್ಲಿ ಒಬ್ಬರು ತಂದೆಯೊಂದಿಗೆ ವಾಸವಾಗಿದ್ದು, ಉಳಿದ ಇಬ್ಬರನ್ನು ಉಮಾ ಅವರೇ ನೋಡಿಕೊಳ್ಳುತ್ತಿದ್ದರು.

ಪೊಲೀಸರ ಪ್ರಕಾರ, ರೈಲ್ವೆ ನಿಲ್ದಾಣದ ಬಳಿ ಕೆಲಸ ಮಾಡುತ್ತಿದ್ದ ಖಾಜಾ ಎಂಬ ಯುವಕನೊಂದಿಗೆ ಉಮಾಗೆ ಪರಿಚಯವಾಗಿದ್ದು, ಬಳಿಕ ಅವರ ನಡುವೆ ನಿಕಟ ಸಂಬಂಧ ಬೆಳೆದಿತ್ತು. ನಾಲ್ಕು ತಿಂಗಳ ಹಿಂದೆ ಕುಟುಂಬದವರಿಗೆ ತಿಳಿಯದೆ ಇಬ್ಬರು ಮದುವೆಯಾಗಿದ್ದರು ಎಂದು ತಿಳಿದುಬಂದಿದೆ. ಇತ್ತೀಚೆಗೆ ಹಣಕಾಸಿನ ವಿಚಾರ ಹಾಗೂ ಪರಸ್ಪರ ಅನುಮಾನದಿಂದ ಇಬ್ಬರ ನಡುವೆ ಕಲಹ ಉಂಟಾಗುತ್ತಿತ್ತು ಎನ್ನಲಾಗಿದೆ.

ಜನವರಿ 6ರಂದು ಬೆಳಗಿನ ಜಾವ ಉಮಾ ಅವರ ಮನೆ ಸಮೀಪದ ಮಹಡಿಯಲ್ಲಿ ಮಾತುಕತೆ ನಡೆಸುತ್ತಿದ್ದ ವೇಳೆ, ಖಾಜಾ ಹರಿತವಾದ ಆಯುಧದಿಂದ ಉಮಾ ಅವರ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲೇ ಉಮಾ ಮೃತಪಟ್ಟಿದ್ದಾರೆ.

ಬೆಳಿಗ್ಗೆ ಮನೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದಾಗ, ಪಕ್ಕದ ಮನೆಯ ಮಹಡಿಯಲ್ಲಿ ರಕ್ತದ ಮಡುವಿನಲ್ಲಿ ಉಮಾ ಅವರ ಮೃತದೇಹ ಪತ್ತೆಯಾಗಿದೆ. ಚಿತ್ತವಾಡ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಮೃತಳ ಮೊಬೈಲ್‌ ಕರೆ ವಿವರಗಳ ಆಧಾರದಲ್ಲಿ ಆರೋಪಿಯನ್ನು ಹೊಸಪೇಟೆ ನಗರದಲ್ಲೇ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಘಟನೆಯಿಂದ ಮೃತಳ ಮೂವರು ಮಕ್ಕಳು ಅಸಹಾಯ ಸ್ಥಿತಿಗೆ ತಲುಪಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

What's Your Reaction?

Like Like 1
Dislike Dislike 0
Love Love 1
Funny Funny 1
Angry Angry 0
Sad Sad 1
Wow Wow 0