ಲಿಫ್ಟ್‌ ನೆಪದಲ್ಲಿ ಕೊಲೆ: 1 ಕೋಟಿ ರೂ. ವಿಮಾ ಹಣಕ್ಕಾಗಿ ತನ್ನದೇ ಸಾವು ರೂಪಿಸಿದ ಏಜೆಂಟ್

Dec 17, 2025 - 23:50
 0  790
ಲಿಫ್ಟ್‌ ನೆಪದಲ್ಲಿ ಕೊಲೆ: 1 ಕೋಟಿ ರೂ. ವಿಮಾ ಹಣಕ್ಕಾಗಿ ತನ್ನದೇ ಸಾವು ರೂಪಿಸಿದ ಏಜೆಂಟ್

ಮುಂಬೈ: 1 ಕೋಟಿ ರೂ. ಜೀವ ವಿಮಾ ಹಣ ಪಡೆಯುವ ಉದ್ದೇಶದಿಂದ ತನ್ನ ಸಾವನ್ನೇ ನಕಲಿ ರೂಪಿಸಲು ಯತ್ನಿಸಿದ ಬ್ಯಾಂಕ್ ವಸೂಲಾತಿ ಏಜೆಂಟ್, ಅಮಾಯಕ ವ್ಯಕ್ತಿಯೊಬ್ಬನನ್ನು ಲಿಫ್ಟ್‌ ಕೊಡುವ ನೆಪದಲ್ಲಿ ಕೊಂದು, ಶವವನ್ನು ಕಾರಿನೊಳಗೆ ಇಟ್ಟು ಬೆಂಕಿ ಹಚ್ಚಿದ್ದ ಘಟನೆ ಮಹಾರಾಷ್ಟ್ರದ ಲಾತೂರಿನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ್ ಚೌಹಾಣ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಲಾತೂರಿನ ಹೊರವಲಯದಲ್ಲಿ ಸುಟ್ಟು ಕರಕಲಾದ ಕಾರೊಂದು ಪತ್ತೆಯಾಗಿದ್ದು, ಅದರೊಳಗೆ ಗೋಣಿಚೀಲದಲ್ಲಿ ತುಂಬಿದ್ದ ಬೆಂದ ಶವ ಕಂಡುಬಂದಿತ್ತು. ಕಾರು ಗಣೇಶ್ ಚೌಹಾಣ್‌ಗೆ ಸೇರಿದ್ದರಿಂದ ಆರಂಭದಲ್ಲಿ ಆತನೇ ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿತ್ತು. ಆದರೆ ತನಿಖೆ ಮುಂದುವರಿದಂತೆ ಈ ಘಟನೆ ನಕಲಿ ಸಾವು ರೂಪಿಸಿದ ವಿಮಾ ವಂಚನೆ ಪ್ರಕರಣ ಎಂಬುದು ಬಹಿರಂಗವಾಗಿದೆ.

ಪೊಲೀಸರ ತನಿಖೆಯ ಪ್ರಕಾರ, ಗಣೇಶ್ ಚೌಹಾಣ್ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗೋವಿಂದ್ ಯಾದವ್ ಎಂಬ ವ್ಯಕ್ತಿಗೆ ಲಿಫ್ಟ್‌ ನೀಡಿದ್ದಾನೆ. ಮದ್ಯದ ಮತ್ತಿನಲ್ಲಿದ್ದ ಯಾದವ್‌ ನನ್ನು ಕಾರಿನಲ್ಲಿ ಕರೆದೊಯ್ದ ಆರೋಪಿ, ಮಾರ್ಗಮಧ್ಯೆ ಊಟ ನೀಡಿದ್ದು, ನಿದ್ರೆಗೆ ಜಾರಿದ ಬಳಿಕ ಕೊಲೆ ಮಾಡಿದ್ದಾನೆ. ನಂತರ ಶವವನ್ನು ಗೋಣಿಚೀಲದಲ್ಲಿ ತುಂಬಿ ಕಾರಿನೊಳಗೆ ಇಟ್ಟು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆಯ ಬಳಿಕ ಗಣೇಶ್ ಮನೆಗೆ ಮರಳಿರಲಿಲ್ಲ ಹಾಗೂ ಮೊಬೈಲ್‌ ಸಂಪರ್ಕವೂ ಕಡಿತಗೊಂಡಿದ್ದರಿಂದ ಆತ ಮೃತಪಟ್ಟಿದ್ದಾನೆ ಎಂಬ ಅನುಮಾನ ಬಲಗೊಂಡಿತ್ತು. ಆದರೆ ತನಿಖೆಯಲ್ಲಿ ಗಣೇಶ್‌ಗೆ ಯುವತಿಯೊಬ್ಬರೊಂದಿಗೆ ಆಪ್ತ ಸಂಬಂಧವಿರುವುದು ತಿಳಿದುಬಂದಿದೆ. ಘಟನೆ ನಂತರ ಆತ ಬೇರೆ ಮೊಬೈಲ್ ಸಂಖ್ಯೆಯಿಂದ ಆಕೆಗೆ ಸಂದೇಶ ಕಳುಹಿಸಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಯಿತು.

ಮೊಬೈಲ್ ಸಂಖ್ಯೆಯ ಸುಳಿವಿನ ಆಧಾರದಲ್ಲಿ ಪೊಲೀಸರು ಶೋಧ ನಡೆಸಿ ಕೊಲ್ಹಾಪುರದಲ್ಲಿ ಗಣೇಶ್ ಚೌಹಾಣ್‌ನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ, ಗೃಹಸಾಲ ತೀರಿಸಲು 1 ಕೋಟಿ ರೂ. ಜೀವ ವಿಮಾ ಹಣ ಪಡೆಯುವ ಉದ್ದೇಶದಿಂದ ಈ ನಕಲಿ ಸಾವು ರೂಪಿಸಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಈ ಕೃತ್ಯದಲ್ಲಿ ಅಮಾಯಕನೊಬ್ಬನ ಜೀವ ಬಲಿಯಾಗಿರುವುದು ತನಿಖೆಯಿಂದ ದೃಢಪಟ್ಟಿದೆ.

ಪ್ರಕರಣ ಸಂಬಂಧ ಕೊಲೆ, ವಂಚನೆ ಮತ್ತು ಸಾಕ್ಷ್ಯ ನಾಶ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 1
Angry Angry 0
Sad Sad 0
Wow Wow 0