State News

ನನ್ನ ಕರ್ಕೊಂಡೋಗಿ ಮದುವೆಯಾಗು’ ಎಂದಿದ್ದ ಅಪ್ರಾಪ್ತೆಯ ನಿಗೂಢ ಸಾವು

admincoorgdaily

ನನ್ನ ಕರ್ಕೊಂಡೋಗಿ ಮದುವೆಯಾಗು’ ಎಂದಿದ್ದ ಅಪ್ರಾಪ್ತೆಯ ನಿಗೂಢ ಸಾವು

ನಂಜನಗೂಡು, ಜ.10: ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ ಅಪ್ರಾಪ್ತೆಯೊಬ್ಬಳು ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ನಂಜನಗೂಡಿನಲ್ಲಿ ಸಂಭವಿಸಿದ್ದು, ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಬಾಲಕಿಯ ಸಾವಿಗೆ ಪ್ರಿಯಕರನ ಪಾತ್ರವೋ ಅಥವಾ ಪೋಷಕರ ಒತ್ತಡವೋ ಎಂಬ ಕುರಿತು ಗೊಂದಲ ಮುಂದುವರಿದಿದೆ.

ಮೃತ ಬಾಲಕಿ ದಿವ್ಯಾ ಎಂದು ಗುರುತಿಸಲಾಗಿದ್ದು, ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಆಕೆ ಆದಿತ್ಯ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದ್ದು, ಇವರಿಬ್ಬರು ಚಾಮುಂಡಿಬೆಟ್ಟ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸುತ್ತಾಡಿದ್ದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

ಯುವಕನ ಕಿರುಕುಳದಿಂದ ಬೇಸತ್ತು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆರೋಪಗಳು ಒಂದೆಡೆ ಕೇಳಿಬರುತ್ತಿದ್ದರೆ, ಮತ್ತೊಂದೆಡೆ ಪೋಷಕರ ಒತ್ತಡವೇ ಸಾವಿಗೆ ಕಾರಣ ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ನಡುವೆ ದಿವ್ಯಾ ಮತ್ತು ಆದಿತ್ಯ ನಡುವಿನ ಸಂಭಾಷಣೆಯ ಆಡಿಯೋ ಕ್ಲಿಪ್‌ ಬಹಿರಂಗವಾಗಿದ್ದು, ಅದರಲ್ಲಿ ಬಾಲಕಿ ತನ್ನ ಭಯವನ್ನು ವ್ಯಕ್ತಪಡಿಸಿ, ತನ್ನನ್ನು ಕರ್ಕೊಂಡು ಹೋಗಿ ಮದುವೆಯಾಗುವಂತೆ ಕೇಳಿರುವುದು ದಾಖಲಾಗಿದೆ ಎಂದು ಹೇಳಲಾಗಿದೆ.

ಇತ್ತ, ಆದಿತ್ಯ ತನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದು, ತಾನು ಯಾವುದೇ ರೀತಿಯ ಕಿರುಕುಳ ನೀಡಿಲ್ಲ ಎಂದು ಹೇಳಿದ್ದಾನೆ. ಪ್ರಕರಣದ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದು, ಬಾಲಕಿಯ ಸಾವಿನ ನಿಖರ ಕಾರಣ ತನಿಖೆಯಿಂದಲೇ ಹೊರಬರಬೇಕಿದೆ ಎಂದು ತಿಳಿಸಿದ್ದಾರೆ.