ನಾಪೋಕ್ಲು: ಎಕ್ಸೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕೋತ್ಸವದ ಸಂಭ್ರಮ; ಗ್ರಾಮೀಣ ಪ್ರದೇಶ ಶೈಕ್ಷಣಿಕವಾಗಿ ಮುಂದುವರೆದಿದೆ ; ಪಟ್ಟಡ ಧನು ಉತ್ತಯ್ಯ
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು: ದಶಕಗಳ ಹಿಂದೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೂನ್ಯ ಫಲಿತಾಂಶ ಪಡೆಯುತ್ತಿದ್ದ ಊರಿನಲ್ಲಿ ಇದೀಗ ಶೇಕಡಾ 100 ಫಲಿತಾಂಶ ಬರುತ್ತಿರುವುದು ಹೆಮ್ಮೆಯ ವಿಷಯ. ಶೈಕ್ಷಣಿಕವಾಗಿ ಹಿಂದುಳಿದಿದ್ದ ನಾಪೋಕ್ಲು ಪಟ್ಟಣದಲ್ಲಿ ಇದೀಗ ವಿವಿಧ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು ಗ್ರಾಮೀಣ ಪ್ರದೇಶ ಶೈಕ್ಷಣಿಕವಾಗಿ ಮುಂದುವರೆದಿದೆ ಎಂದು ಗೋಣಿಕೊಪ್ಪಲಿನ ಲಯನ್ಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಪಟ್ಟಡ ಧನು ಉತ್ತಯ್ಯ ಹೇಳಿದರು.
ನಾಪೋಕ್ಲು ಬಳಿಯ ಬೇತು ಗ್ರಾಮದ ಎಕ್ಸೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಗ್ರಾಮೀಣ ಪ್ರದೇಶದಲ್ಲಿ ಹಿಂದೆ ವಿದ್ಯಾರ್ಥಿಗಳಿಗೆ ಅವಕಾಶ ಇರಲಿಲ್ಲ .ಈಗ ವಿಫಲ ಅವಕಾಶ ಲಭಿಸಿದೆ. ಅದರ ಸದ್ಬಳಕೆ ಮಾಡಿಕೊಂಡು ಶಿಕ್ಷಣದಲ್ಲಿ ಮುಂದುವರಿಯಬೇಕು ಎಂದರು . ಸಿಕ್ಕ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳುವುದರಿಂದ ಧೈರ್ಯ ಹಾಗೂ ಆತ್ಮವಿಶ್ವಾಸ ಗಳಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ನೇತಾಜಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸಿ.ಎಸ್. ಸುರೇಶ್ ಅವರು ಮಾತನಾಡಿ ಎಕ್ಸೆಲ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಸಹಪಠ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುವುದರಿಂದ ಉತ್ತಮ ಪ್ರಜೆಗಳಾಗಿ ಮೂಡಿಬರಲು ಸಾಧ್ಯವಾಗುತ್ತಿದೆ ಎಂದರು. ಶಾಲೆಯ ನಿರ್ದೇಶಕಿ ಭವ್ಯ ಶರತ್ ಶಾಲಾ ವಾರ್ಷಿಕ ವರದಿ ವಾಚಿಸಿದರು.
ಶಾಲೆಯ ಅಧ್ಯಕ್ಷ ಕುಟ್ಟಂಜೆಟ್ಟಿರ.ಎಂ.ಮಾದಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಾಲೆಯ ನಿರ್ದೇಶಕರಾದ ಶರತ್ ,ವಿದ್ಯಾ ಸುರೇಶ್ ,ಮುಖ್ಯ ಶಿಕ್ಷಕ ತಮ್ಮಯ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದ ವಿದ್ಯಾರ್ಥಿಗಳಿಗೆ ಹಾಗೂ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿಜೇತರಾದವರಿಗೆ ಅತಿಥಿಗಳು ಬಹುಮಾನಗಳನ್ನು ವಿತರಿಸಿದರು.
ಬಳಿಕ ವಿದ್ಯಾರ್ಥಿಗಳಿಂದ ನಾಲ್ಕು ಗಂಟೆಗಳ ಕಾಲ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗುರನ್ನು ರಂಜಿಸಿತು. ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.