ನಾಪೋಕ್ಲು:ಅಕ್ರಮ ಮರಳು ಸಾಗಾಟ,ಟಿಪ್ಪರ್ ವಾಹನ ವಶಕ್ಕೆ: ಮಾಲೀಕನಿಗೆ ಬಿತ್ತು ದಂಡ

ನಾಪೋಕ್ಲು:ಅಕ್ರಮ ಮರಳು ಸಾಗಾಟ,ಟಿಪ್ಪರ್ ವಾಹನ ವಶಕ್ಕೆ:  ಮಾಲೀಕನಿಗೆ ಬಿತ್ತು ದಂಡ
ಪೊಲೀಸರ ಕಾರ್ಯಚರಣೆ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು : ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳುಸಾಗಟ ಮಾಡುತ್ತಿದ್ದ ಟಿಪ್ಪರ್ ವಾಹನವನ್ನು ಪೊಲೀಸರು ಮಾಲು ಸಹಿತ ವಶಕ್ಕೆ ಪಡೆದು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಿ ಭಾರಿ ದಂಡ ವಿಧಿಸಿದ ಘಟನೆ ನಡೆದಿದೆ.

ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಬೇತು ಗ್ರಾಮದ ಕಾರೆಕಾಡು ಬಳಿಯ ಕಾವೇರಿ ನದಿ ದಡದಿಂದ ಟಿಪ್ಪರ್ (KA12C5394 )ವಾಹನದಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ನಾಪೋಕ್ಲು ಠಾಣಾಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿಗಳು ಮಾಲು ಸಹಿತ ಟಿಪ್ಪರ್ ವಾಹನವನ್ನು ವಶಕ್ಕೆ ಪಡೆಡಿದ್ದಾರೆ.

 ಬಳಿಕ ಪ್ರಕರಣವನ್ನು ಜಿಲ್ಲಾಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಿ ವಾಹನದ ಮಾಲೀಕರಾದ ಡಿ.ಕೆ.ನಂದೀಶ್ ಎಂಬುವವರಿಗೆ ಸುಮಾರು 37,320ರೂಗಳ ದಂಡವನ್ನು ವಿಧಿಸಿ ಕ್ರಮಕೈಗೊಂಡಿದ್ದಾರೆ. ಕಾರೆಕಾಡುವಿನಿಂದ ಕಾವೇರಿ ನದಿ ದಡಕ್ಕೆ ಮರಳು ಸಾಗಾಟಕ್ಕೆ ತೆರಳುವ ರಸ್ತೆಗೆ ಅಡ್ಡಲಾಗಿ ಜೆಸಿಬಿ ಯಂತ್ರವನ್ನು ಬಳಸಿ ಟ್ರಂಚ್ (ಚೆರಂಡಿ )ತೆಗೆಸಿದ ಠಾಣಾಧಿಕಾರಿ ರಾಘವೇಂದ್ರ ಅವರು ಮರಳುಗಾರಿಕೆಗೆ ವಾಹನಗಳು ತೆರಳದಂತೆ ಕ್ರಮ ಕೈಗೊಂಡಿದ್ದಾರೆ. 

ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕೆಲವು ಭಾಗಗಳ ಕಾವೇರಿ ನದಿ ದಡದಿಂದ ಅಕ್ರಮವಾಗಿ ಮರಳು ದಂದೆ ನಡೆಸುತ್ತಿರುವ ಬಗ್ಗೆ ಮಾಹಿತಿ ತಿಳಿದರೆ ಸಾರ್ವಜನಿಕರು ನಾಪೋಕ್ಲು ಪೊಲೀಸ್ ಠಾಣೆ ಅಥವಾ ಸಂಬಂಧಪಟ್ಟ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮಾಹಿತಿ ನೀಡುವಂತೆ ಇಲಾಖೆ ತಿಳಿಸಿದೆ.