ಕೂಡುಮಂಗಳೂರು ಪ್ರೌಢಶಾಲೆಯಲ್ಲಿ ಎನ್.ಎಸ್.ಎಸ್. ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆ: ಸ್ವಾಮಿ ವಿವೇಕಾನಂದರ ಆದರ್ಶಗಳು ಯುವ ಜನಾಂಗಕ್ಕೆ ಸ್ಪೂರ್ತಿ

ಕೂಡುಮಂಗಳೂರು ಪ್ರೌಢಶಾಲೆಯಲ್ಲಿ ಎನ್.ಎಸ್.ಎಸ್. ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆ: ಸ್ವಾಮಿ ವಿವೇಕಾನಂದರ ಆದರ್ಶಗಳು ಯುವ ಜನಾಂಗಕ್ಕೆ ಸ್ಪೂರ್ತಿ

ಕುಶಾಲನಗರ, ಜ.12: ಕುಶಾಲನಗರದ ತಾಲ್ಲೂಕಿನ ಕೂಡುಮಂಗಳೂರು( ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ( ಜ.12 ರಂದು ) ಶಾಲೆಯ‌ ಎನ್.ಎಸ್.ಎಸ್. ಘಟಕ, ಸಮಾಜ ಸಂಘ, ವಿದ್ಯಾರ್ಥಿ ಸಂಘ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಶಾಲಾ ಘಟಕ, ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆ ಮತ್ತು ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ವತಿಯಿಂದ  ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನ: 2026 ವನ್ನು ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ  ಸ್ವಾಮಿ ವಿವೇಕಾನಂದ ಅವರ ಬದುಕು ಮತ್ತು ದೂರದೃಷ್ಠಿ ವ್ಯಕ್ತಿತ್ವ" ಕುರಿತು ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್,  

ತತ್ವಶಾಸ್ತ್ರ ಮತ್ತು ಇತಿಹಾಸದ ಬಗ್ಗೆ ಅಪಾರ ಜ್ಞಾನವನ್ನು ಪಡೆದು ವಿಶ್ವದ ಗಮನ ಸೆಳೆದ ಆಧ್ಯಾತ್ಮಿಕ ಚಿಂತಕರೂ ಆದ ಯುವ ಜನಾಂಗದ ಕಣ್ಮಣಿಯಾಗಿದ್ದ ಸ್ವಾಮಿ ವಿವೇಕಾನಂದರ ಆದರ್ಶಗಳು ಮತ್ತು ತತ್ವಗಳು ಭಾರತೀಯ ಯುವಕರ ವ್ಯಕ್ತಿತ್ವ ನಿರ್ಮಾಣಕ್ಕೆ ಅತ್ಯುತ್ತಮ ಮಾರ್ಗದರ್ಶಕವಾಗಿವೆ ಎಂದರು.

        ಸ್ವಾಮಿ ವಿವೇಕಾನಂದರ ಆದರ್ಶಗಳು ಯುವ ಜನಾಂಗಕ್ಕೆ ಸ್ಪೂರ್ತಿಯಾಗಿದ್ದು, ವಿದ್ಯಾರ್ಥಿಗಳು ವಿಶ್ವದ ಆಧ್ಯಾತ್ಮಿಕ ಗುರು ಎನಿಸಿರುವ ಸ್ವಾಮಿ ವಿವೇಕಾನಂದರ ಉದಾತ್ತ ವ್ಯಕ್ತಿತ್ವ, ಜೀವನ ಕ್ರಮ, ದೂರದೃಷ್ಠಿ ಹಾಗೂ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ರಾಷ್ಟ್ರದ ಸಮಗ್ರತೆ ಹಾಗೂ ಏಕತೆಯನ್ನು ಎತ್ತಿ ಹಿಡಿಯಬೇಕು ಎಂದರು.

ವಿವೇಕಾನಂದರ ಜೀವನ, ಚರಿತ್ರೆ, ಬದುಕು ಹಾಗೂ ಸಾಧನೆಯು ಜಾಗತಿಕ ಮಟ್ಟದಲ್ಲಿ ಭಾರತೀಯ ಸಂಸ್ಕೃತಿಯನ್ನು ಮೆರೆದಿದೆ ಎಂದು ಪ್ರೇಮಕುಮಾರ್ ಹೇಳಿದರು.

ಸ್ವಾಮಿ ವಿವೇಕಾನಂದರ ಜೀವನ ಕ್ರಮ ಕುರಿತು ಮಾಹಿತಿ ನೀಡಿದ ಸಮಾಜ ವಿಜ್ಞಾನ ಶಿಕ್ಷಕಿ ಎಸ್.ಎಂ.ಗೀತಾ, ಸ್ವಾಮಿ ವಿವೇಕಾನಂದರರು

ಯುವಜನತೆಗೆ ನೀಡಿದ ಅವರ ಕರೆ 'ಏಳಿ.. ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ' ಎಂಬುದು ಸರ್ವ ಕಾಲಕ್ಕೂ ನೆನೆಯುವ, ಯುವಕರನ್ನು ಉತ್ತಮ ಕೆಲಸಗಳಿಗೆ ತೊಡಗಿಸಲು ಬಡಿದೆಚ್ಚರಿಸುವ ವಾಕ್ಯವಾಗಿದೆ. ಹೀಗೆ ಅವರ ಇಂತಹ ಹಲವು ಕೊಡುಗೆಗಳಿಂದ ಅವರ ಸ್ಮರಣಾರ್ಥ, ಅವರ ಕೊಡುಗೆ, ಸೇವೆಗಳ ನೆನಪಿಗಾಗಿ, ಅವರಿಂದ ಯುವ ಜನಾಂಗ ಸದಾ ಸ್ಫೂರ್ತಿಯಾಗಿರಲು ಅವರ ಜನ್ಮ ದಿನವನ್ನು 'ರಾಷ್ಟ್ರೀಯ ಯುವ ದಿನ' ಎಂದು ಆಚರಣೆ ಮಾಡಲಾಗುತ್ತಿದೆ ಎಂದರು.

       ಯುವ ಜನಾಂಗದ ಕಣ್ಮಣಿಯಾದ ಹಾದಿ, ಯುವ ಜನತೆಗೆ ನೀಡಿದ ಸ್ಫೂರ್ತಿಯ ಕರೆಗಳಿಂದ ಅವರು ಇಂದಿಗೂ ಎಂದೆಂದಿಗೂ ಪ್ರಪಂಚದ ಆಧ್ಯಾತ್ಮಿಕ ಗುರು ಹಾಗೂ ಆದರ್ಶ ವ್ಯಕ್ತಿಯೇ ಆಗಿದ್ದಾರೆ ಎಂದು ಬಣ್ಣಿಸಿದರು.

ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ದಯಾನಂದ ಪ್ರಕಾಶ್, ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದರು.

ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಬಿ.ಎನ್.ಸುಜಾತ, ಬಿ.ಡಿ.ರಮ್ಯ, ಅನ್ಸಿಲಾ ರೇಖಾ, ಕೆ.ಟಿ.ಸೌಮ್ಯ,ಕಛೇರಿ ಸಿಬ್ಬಂದಿ ಎಂ.ಉಷಾ ಇದ್ದರು.ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ವಿವೇಕಾನಂದರ ಸಂದೇಶದ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.