ಹನಿಮೂನ್‌ ನಿಂದ ಅರ್ಧದಲ್ಲೇ ವಾಪಸ್; ನವ ವಿವಾಹಿತೆ ಆತ್ಮಹತ್ಯೆ

Dec 26, 2025 - 18:33
 0  2k
ಹನಿಮೂನ್‌ ನಿಂದ ಅರ್ಧದಲ್ಲೇ ವಾಪಸ್; ನವ ವಿವಾಹಿತೆ ಆತ್ಮಹತ್ಯೆ
Photo credit: TV09

ಬೆಂಗಳೂರು: ಕೇವಲ 58 ದಿನಗಳ ಹಿಂದೆ ವಿವಾಹವಾಗಿದ್ದ ನವವಿವಾಹಿತೆ ಗಾನವಿ (26) ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಫಲಕಾರಿಯಾಗದೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ದಾಂಪತ್ಯದ ಆರಂಭಿಕ ದಿನಗಳಲ್ಲೇ ಕಲಹ ತೀವ್ರಗೊಂಡಿದ್ದು, ಮಾನಸಿಕ ಒತ್ತಡದಿಂದ ಬಳಲುತ್ತಿದ್ದ ಗಾನವಿ ಈ ಅತಿರೇಕದ ನಿರ್ಧಾರ ಕೈಗೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿವಾಹದ ಬಳಿಕ ಹನಿಮೂನ್‌ಗೆ ತೆರಳಿದ್ದ ದಂಪತಿ ಮಧ್ಯದಲ್ಲೇ ವಾಪಸ್ಸಾಗಿದ್ದರು. ಬಳಿಕ ದಾಂಪತ್ಯ ಜಗಳ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಗಾನವಿಯನ್ನು ಪೋಷಕರು ರಾಮಮೂರ್ತಿನಗರದ ಬಿ. ಚನ್ನಸಂದ್ರದಲ್ಲಿರುವ ತಮ್ಮ ಮನೆಗೆ ಕರೆತಂದಿದ್ದರು. ಅಲ್ಲಿ ವಾಸವಾಗಿದ್ದ ಅವಧಿಯಲ್ಲಿ ಆಕೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಬುಧವಾರ (ಡಿ.24) ಗಾನವಿ ತನ್ನ ಕೊಠಡಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದ ಆಕೆಯನ್ನು ಪೋಷಕರು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ತೀವ್ರ ಚಿಕಿತ್ಸೆ ನೀಡಿದರೂ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಉಳಿದಿತ್ತು. ನಂತರ ವೈದ್ಯರು ಗಾನವಿಯು ‘ಬ್ರೈನ್ ಡೆಡ್’ ಆಗಿರುವುದನ್ನು ದೃಢಪಡಿಸಿದ್ದರು. ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಆಕೆ ಕೊನೆಯುಸಿರೆಳೆದಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ. ಪತಿ ಸೂರಜ್ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರೆಸುತ್ತಿದ್ದಾರೆ.

What's Your Reaction?

Like Like 3
Dislike Dislike 0
Love Love 2
Funny Funny 2
Angry Angry 2
Sad Sad 6
Wow Wow 1