State News

ಮದುವೆಯಾಗಿ ತಿಂಗಳು ಪೂರೈಸುವ ಮೊದಲೇ ನವ ವಿವಾಹಿತೆ ನಿಗೂಢ ಸಾವು

admincoorgdaily

ಮದುವೆಯಾಗಿ ತಿಂಗಳು ಪೂರೈಸುವ ಮೊದಲೇ ನವ ವಿವಾಹಿತೆ ನಿಗೂಢ ಸಾವು

ನೆಲಮಂಗಲ, ಡಿ. 25: ಮದುವೆಯಾಗಿ ಒಂದು ತಿಂಗಳು ಪೂರೈಸುವ ಮುನ್ನವೇ ನವವಿವಾಹಿತೆಯೊಬ್ಬರು ನಿಗೂಢವಾಗಿ ಮೃತಪಟ್ಟಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಮೃತ ಯುವತಿಯನ್ನು ಐಶ್ವರ್ಯ (26) ಎಂದು ಗುರುತಿಸಲಾಗಿದೆ. ಈ ಸಾವಿಗೆ ಪತಿಯೇ ಕಾರಣ ಎಂದು ಆರೋಪಿಸಿ ಮೃತಳ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಐಶ್ವರ್ಯ ಗೆ 27 ದಿನಗಳ ಹಿಂದಷ್ಟೇ ಲಿಖಿತ್ ಸಿಂಹ ಅವರೊಂದಿಗೆ ವಿವಾಹ ನಡೆದಿತ್ತು. ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಮದುವೆ ನಡೆದಿದ್ದರೂ, ಮದುವೆಯಾದ ಕೆಲವೇ ದಿನಗಳಲ್ಲಿ ಪತ್ನಿಗೆ ಕಿರುಕುಳ ನೀಡಲಾಗುತ್ತಿತ್ತು ಎಂದು ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ಬುಧವಾರ ಬೆಳಿಗ್ಗೆ ಕುಟುಂಬಸ್ಥರ ನಡುವೆ ರಾಜಿ ಪಂಚಾಯಿತಿ ಕೂಡ ನಡೆದಿತ್ತು ಎಂದು ತಿಳಿದುಬಂದಿದೆ.

ಪಂಚಾಯಿತಿಯ ಬಳಿಕವೂ ಐಶ್ವರ್ಯಳ ಮೇಲೆ ಮತ್ತೆ ಹಲ್ಲೆ ನಡೆದಿದೆ ಎಂದು ಪೋಷಕರು ದೂರಿದ್ದಾರೆ. ಬುಧವಾರ ಸಂಜೆ ಲಿಖಿತ್ ಅವರ ಸಂಬಂಧಿಕರು ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮನೆಗೆ ಆಗಮಿಸಿದ ವೇಳೆ, ನೇಣು ಬಿಗಿದ ಸ್ಥಿತಿಯಲ್ಲಿ ಐಶ್ವರ್ಯ ಅವರ ಮೃತದೇಹ ಪತ್ತೆಯಾಗಿದೆ.

ಬಾಗಿಲು ಒಡೆಯದೇ ಘಟನೆ ನಡೆದಿರುವುದು ಅನುಮಾನಕ್ಕೆ ಕಾರಣವಾಗಿದ್ದು, ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬ ಶಂಕೆಯನ್ನು ಪೋಷಕರು ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪತಿ ಲಿಖಿತ್ ಸಿಂಹ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.