ಇರುಳು ಕುರುಡು ಸಮಸ್ಯೆ: ಹಗಲಲ್ಲೇ ಬೀಗ ಹಾಕಿದ ಮನೆಗಳಿಗೆ ಕನ್ನ

Dec 23, 2025 - 21:02
 0  654
ಇರುಳು ಕುರುಡು ಸಮಸ್ಯೆ: ಹಗಲಲ್ಲೇ ಬೀಗ ಹಾಕಿದ ಮನೆಗಳಿಗೆ ಕನ್ನ

ಬೆಂಗಳೂರು, ಡಿ.23: ಇರುಳು ಕುರುಡು ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಹಗಲಿನಲ್ಲೇ ಬೀಗ ಹಾಕಿದ ಮನೆಗಳಿಗೆ ನುಗ್ಗಿ ಕಳ್ಳತನ ನಡೆಸುತ್ತಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಕಿರುತೆರೆ ನಟ ಪ್ರವೀಣ್ ಅವರ ಜೆ.ಪಿ.ನಗರದ ನಿವಾಸದಲ್ಲಿ ಕಳ್ಳತನ ನಡೆಸಿದ ಆರೋಪದಲ್ಲಿ ಮೊಹಮ್ಮದ್ ಖಾನ್ ಎಂಬಾತನನ್ನು ಬಂಧಿಸಲಾಗಿದೆ.

ಪೊಲೀಸರ ಪ್ರಕಾರ, ಆರೋಪಿ ರಾತ್ರಿ ವೇಳೆ ದೃಷ್ಟಿ ಸಮಸ್ಯೆ ಹೊಂದಿದ್ದರಿಂದ ಹಗಲಿನಲ್ಲೇ ಮನೆಮಂದಿ ಹೊರಗಿರುವ ಸಂದರ್ಭಗಳನ್ನು ಗಮನಿಸಿ ಕಳ್ಳತನ ಮಾಡುತ್ತಿದ್ದ. ಬೆಳಗಿನ ವೇಳೆಯಲ್ಲಿ ಬೀಗ ಹಾಕಿರುವ ಮನೆಗಳನ್ನೇ ಗುರಿಯಾಗಿಸಿಕೊಂಡು ಚಿನ್ನಾಭರಣ ಹಾಗೂ ನಗದು ದೋಚುತ್ತಿದ್ದನು.

ನಟ ಪ್ರವೀಣ್ ಮತ್ತು ಅವರ ಪತ್ನಿ ಶೂಟಿಂಗ್‌ಗೆ ತೆರಳಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿದ ಆರೋಪಿ ಸುಮಾರು ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾನೆ. ಈ ಸಂಬಂಧ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಚಾರಣೆ ವೇಳೆ ಆರೋಪಿ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಮನೆ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಒಟ್ಟು ಏಳು ಅಂತಾರಾಜ್ಯ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಆತನಿಂದ 46 ಲಕ್ಷ ರೂಪಾಯಿ ನಗದು, 65.28 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 1 ಕೆಜಿ 550 ಗ್ರಾಂ ಬೆಳ್ಳಿ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0