3 ದಿನದ ನವಜಾತ ಶಿಶುವನ್ನು ರಸ್ತೆಬದಿಯಲ್ಲಿ ಬಿಟ್ಟು ಹೋದ ಪೋಷಕರು

Dec 18, 2025 - 17:58
Dec 19, 2025 - 09:30
 0  1.8k
3 ದಿನದ ನವಜಾತ ಶಿಶುವನ್ನು ರಸ್ತೆಬದಿಯಲ್ಲಿ ಬಿಟ್ಟು ಹೋದ ಪೋಷಕರು
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಡಿ.18: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಮೂರೇ ದಿನದ ನವಜಾತ ಗಂಡು ಶಿಶುವನ್ನು ರಸ್ತೆಬದಿಯಲ್ಲಿ ಬಿಟ್ಟು ಹೋಗಿರುವ ಮನಕಲಕುವ ಘಟನೆ ಸೋಮವಾರ ರಾತ್ರಿ ನಡೆದಿದೆ.

ಮೆಗ್ಗಾನ್ ಆಸ್ಪತ್ರೆಗೆ ತಮ್ಮ ಮಗನ ಚಿಕಿತ್ಸೆಗೆ ತೆರಳಿ ವಾಪಸ್ಸಾಗುತ್ತಿದ್ದ ಕುಶ ದೊಡ್ಡಪ್ಪ ಎಂಬವರು, ಸೋಮವಾರ ರಾತ್ರಿ ಸುಮಾರು 10.45ರ ವೇಳೆಗೆ ಮಲ್ಲಾಪುರ ಸಮೀಪ ವಾಹನ ನಿಲ್ಲಿಸಿದ್ದ ಸಂದರ್ಭದಲ್ಲಿ ರಸ್ತೆಬದಿಯಿಂದ ಶಿಶುವಿನ ಅಳುವ ಶಬ್ದ ಕೇಳಿಸಿಕೊಂಡಿದೆ. ಪರಿಶೀಲನೆ ನಡೆಸಿದಾಗ ಕಲ್ಲು ಮತ್ತು ಮುಳ್ಳಿನ ರಾಶಿಯ ನಡುವೆ ನವಜಾತ ಶಿಶು ಪತ್ತೆಯಾಗಿದೆ.

ಘಟನೆ ವಿಷಯ ತಿಳಿದ ಬಳಿಕ ಸ್ಥಳೀಯರು ಸುತ್ತಮುತ್ತಲಿನ ಮನೆಗಳಲ್ಲಿ ವಿಚಾರಣೆ ನಡೆಸಿದರೂ, ಶಿಶುವಿನ ಪೋಷಕರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪತ್ತೆಯಾದ ಶಿಶುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶಿಶುವಿನ ಪೋಷಕರ ಪತ್ತೆಗೆ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಸೇರಿದಂತೆ ವಿವಿಧ ಅಂಶಗಳ ಆಧಾರದಲ್ಲಿ ತನಿಖೆ ನಡೆಯುತ್ತಿದೆ. 

ನವಜಾತ ಶಿಶುಗಳನ್ನು ಅನಾಥವಾಗಿ ಬಿಟ್ಟು ಹೋಗುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ವರದಿಯಾಗುತ್ತಿದ್ದು, ಇದು ಸಮಾಜದ ಆತ್ಮಪರಿಶೀಲನೆಗೆ ಕಾರಣವಾಗಬೇಕಿದೆ ಎಂದು ಸಾಮಾಜಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

What's Your Reaction?

Like Like 1
Dislike Dislike 1
Love Love 1
Funny Funny 0
Angry Angry 0
Sad Sad 5
Wow Wow 0