ಪಯ್ಯವೂರು ಶಿವ ದೇವಾಲಯದ ಊಟ್‍ಮಹೋತ್ಸವ; ಎತ್ತು ಪೋರಾಟ್‍ನೊಂದಿಗೆ ತೆರಳಿ ಅಕ್ಕಿ ಅಳೆಯುವ ಶಾಸ್ತ್ರ

Feb 12, 2026 - 10:06
 0  437
ಪಯ್ಯವೂರು ಶಿವ ದೇವಾಲಯದ ಊಟ್‍ಮಹೋತ್ಸವ; ಎತ್ತು ಪೋರಾಟ್‍ನೊಂದಿಗೆ ತೆರಳಿ ಅಕ್ಕಿ ಅಳೆಯುವ ಶಾಸ್ತ್ರ

✍️ ರಜಿತ ಕಾರ್ಯಪ್ಪ

ವಿರಾಜಪೇಟೆ: ಕೊಡಗು ನಿವಾಸಿಗಳು ಮತ್ತು ಮಲಯಾಳಿಗಳು ಜಂಟಿಯಾಗಿ ಕೇರಳದ ಪಯ್ಯಾವೂರಿನ ಶಿವ ದೇವಾಲಯದಲ್ಲಿ ಆಚರಿಸುವ ಹದಿಮೂರು ದಿನಗಳ ಪಯ್ಯವೂರು ಶಿವ ದೇವಾಲಯದ ಊಟ್‍ಮಹೋತ್ಸವವು ಕೊಡಗಿನಿಂದ ಮುಂಡಿಯೋಳಂಡ ಹಾಗೂ ಬೋವ್ವೇರಿಯಂಡ ಕುಟುಂಬಸ್ಥರ ಎತ್ತು ಪೋರಾಟ್‍ನೊಂದಿಗೆ ತೆರಳಿ ಅಕ್ಕಿ ಅಳೆಯುವ ಶಾಸ್ತ್ರದೊಂದಿಗೆ ಪ್ರಾರಂಭವಾಯಿತು.

ಪಟ್ಟಣದ ಪಳಸ್ಸಿ ಭಗವತಿ ದೇವಸ್ಥಾನದ ಆವರಣಕ್ಕೆ ಆಗಮಿಸಿದ ಕೊಡವರನ್ನು ಪಯ್ಯಾವೂರು ದೇವಸ್ವಂ ಕಾರ್ಯನಿರ್ವಾಹಕ ಅಧಿಕಾರಿ ಸಿ.ವಿ. ಅನೀಶ್, ವಿಶ್ವಸ್ಥ ಮಂಡಳಿ ಸದಸ್ಯ ಕೆ.ವಿ. ಉತ್ತಮರಾಜನ್, ಮತ್ತು ಆಚರಣೆ ಸಮಿತಿಯ ಪದಾಧಿಕಾರಿಗಳಾದ ಪಿ.ಸುಂದರನ್, ಫಲ್ಗುಣನ್ ಮೆಳೇದತ್, ಸಿ.ವಿ. ಮೋಹನನ್ ಮತ್ತು ಸಿ.ಪಿ. ವಿಜಯನ್ ಅವರು ಸ್ವಾಗತಿಸಿದರು.

  ಬುಧವಾರ ಸಂಜೆ ವಾಸವಪುರಂ ಮಹಾವಿಷ್ಣು ದೇವಸ್ಥಾನದಿಂದ ಸಹಸ್ರ ವಿಳಕ, ತಾಳ ಮೇಳದೊಂದಿಗೆ ಮೆರವಣಿಗೆ ನಡೆಯಿತು. ಬಳಿಕ ಕೊಮರಥಚ್ಚನ್ ಅವರ ಕಲಶಂಕುಳಿ ಪ್ರದರ್ಶನಗೊಂಡಿತ್ತು.

  ಕೇರಳದ ಪಯ್ಯಾವೂರ್ ಈಶ್ವರ ದೇವರಿಗೂ ಕೊಡಗಿಗೂ ಎಲ್ಲಿಲ್ಲದ ನಂಟು. ಪುರಾತನ ಕಾಲದಲ್ಲಿ ಕೇರಳದಲ್ಲಿ ಕ್ಷಾಮ ತರದೋರಿತು. ದೇವರ ನಿತ್ಯ ನೈವೇದ್ಯಕ್ಕೂ ಬರ ಬಂದ ಕಾಲ ಅಂದು. ಚೆಯ್ಯಂಡಾಣೆ ಸಮೀಪ ಪೆಬ್ಬಾಟ್ಟಾಣೆ ಮಂದ್ (ದೇವ ತೊಪ್ಪು ಮಂದ್)ನಲ್ಲಿ ಮುಂಡಿಯೋಳಂಡ ಹಾಗೂ ಬೋವ್ವೇರಿಯಂಡ ಕುಟುಂಬಸ್ಥರ ಹಿರಿಯರಿಗೆ ದೇವರು ಪ್ರತ್ಯಕ್ಷಗೊಂಡು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಪಯ್ಯವೂರ್ ಹಬ್ಬಕ್ಕೆ ನೈವೇದ್ಯಕ್ಕೆ ಅಕ್ಕಿಯನ್ನು ಸಮರ್ಪಿಸಬೇಕೆಂದು ಮನವಿ ಮಾಡಿದರಂತೆ. ಅದೇ ಪ್ರಕಾರ ಅಂದಿನಿಂದ ಮುಂಡಿಯೋಳಂಡ ಹಾಗೂ ಬೋವ್ವೇರಿಯಂಡ ಕುಟುಂಬಸ್ಥರು ಕೇರಳದ ಪಯ್ಯವೂರ್ ಕ್ಷೇತ್ರದಲ್ಲಿ ತಕ್ಕರಾಗಿದ್ದು ಮೊದಲಿಗೆ ಈ ಎರಡು ಕುಟುಂಬಸ್ಥರು ಎತ್ತು ಪೋರಾಟದೊಂದಿಗೆ ತೆರಳುತ್ತಾರೆ

   ಫೆ.10 ರಂದು ಎತ್ತು ಪೋರಾಟದೊಂದಿಗೆ ಚೇಲಾವರದ ಅರಣ್ಯದ ಕಾಡುದಾರಿಯ ಮುಖಾಂತರ ಸುಮಾರು 40ಕ್ಕೂ ಹೆಚ್ಚು ಕಿ.ಮಿ.ನಷ್ಟು ದೂರದ ಪಯ್ಯವೂರ್‍ಗೆ ಕಾಲ್ನಡಿಗೆಯಲ್ಲಿ ತೆರಳಿ ಫೆ.12 ರಂದು ಬೆಳಿಗ್ಗೆ ಅಕ್ಕಿ ಅರ್ಪಿಸುತ್ತಾರೆ. ನಂತರ ಅಕ್ಕಿ ಅಳ್‍ಪೋ ಶಾಸ್ತ್ರದ ಮೂಲಕ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡಿತ್ತು.

ಕೋಮರತಚ್ಚನ್ ಆಹ್ವಾನ

ವರ್ಷಕ್ಕೆ ಒಂದು ಬಾರಿ ಕೋಮರತಚ್ಚನ್ ಮುಂಡಿಯೋಳಂಡ ಹಾಗೂ ಬೊವ್ವೇರಿಯಂಡ ಕುಟುಂಬಸ್ಥರ ಮನೆಗೆ ತೆರಳಿ ನಂತರ ಕಡಿಯತ್‍ನಾಡಿನ ಮುಖ್ಯವಾದ 12 ಕುಟುಂಬಕ್ಕೆ ಹಾಗೂ ದೇವಸ್ಥಾನಗಳಿಗೆ ತೆರಳಿ ಆಹ್ವಾನ ನೀಡಿ ಇಂತಿರುಗಿ ಮುಂಡಿಯೋಳಂಡ ಕುಟುಂಬಸ್ಥರಿಗೆ ಕಂಡಿಪಣ ಹಾಗೂ ಬೊವ್ವೇರಿಯಂಡ ಕುಟುಂಬಸ್ಥರಿಗೆ ಕೌಂದಿಪಣ ನೀಡಿ ಕಾಡು ದಾರಿಯ ಮೂಲಕ ಕೇರಳದ ಪಯ್ಯವೂರ್ ತೆರಳುತ್ತಾರೆ.

 ಫೆ.18 ರಂದು ನಾಡಿಗೆ ಒಳಪಟ್ಟ ಭಕ್ತರು ಎತ್ತು ಪೋರಾಟದೊಂದಿಗೆ ಪಯ್ಯವೂರ್‍ಗೆ ಹೊರಟು 20,21,22 ರಂದು ಕ್ರಮವಾಗಿ ಎಂಟು, ಒಬ್ಬತ್ತು, ಹತ್ತು ಊಟ್ ಹಬ್ಬ ನಡೆಯುತ್ತದೆ. ನಂತರ ಆನೆಯ ಮೇಲೆ ದೇವರ ಪ್ರದಕ್ಷಿಣೆ ದೇವರಿಗೆ ತುಪ್ಪಾಭಿಷೇಕ ನಡೆದು ಹಬ್ಬಕ್ಕೆ ತೆರೆ ಎಳೆಯಲಾಗುತ್ತದೆ.

  ಕಡಿಯತ್ ನಾಡಿನಿಂದ ಬಂದ ಭಕ್ತಾದಿಗಳ ಅಕ್ಕಿಯನ್ನು ಮುಂಡಿಯೋಳಂಡ ಹಾಗೂ ಬೊವ್ವೇರಿಯಂಡ ಕುಟುಂಬಸ್ಥರು ಅಳತೆಮಾಡಿ ನೋಂದಾಯಿಸಿ ಕೊಳ್ಳುತ್ತಾರೆ. ಅದಕ್ಕೆ ಪ್ರತಿಪಲವಾಗಿ ಪ್ರಸಾದ ರೂಪದಲ್ಲಿ ಭಕ್ತಾದಿಗಳಿಗೆ ತೆಂಗಿನಕಾಯಿ ಕೊಡುವ ಪದ್ಧತಿ ಇಂದಿಗೆ ರೂಡಿಯಲ್ಲಿದೆ.

  ಹಬ್ಬದಲ್ಲಿ ಕೊಡಗಿನ ಕಡಿಯತ್ ನಾಡಿಗೆ ಒಳಪಟ್ಟ ಭಕ್ತರಿಂದ ದುಡಿಕೋಟ್ ಪಾಟ್, ಬೋಳಕಾಟ್ ಇರುತ್ತದೆ. ಮುಂಡಿಯೋಳಂಡ ಹಾಗೂ ಬೊವ್ವೇರಿಯಂಡ ಕುಟುಂಬದ ತಲಾ ಒಬ್ಬರನ್ನು ದೇವಸೋಮ್ ಬೋರ್ಡ್‍ನಲ್ಲಿ ಟ್ರಷ್ಟಿಗಳಾಗಿ ನೇಮಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0