ಪುಲ್ವಾಮಾದಲ್ಲಿ ಗುಂಡು ಹಾರಿಸಿಕೊಂಡು ಕೊಡಗಿನ ಸಿ.ಆರ್.ಪಿ.ಎಫ್ ಯೋಧ ಆತ್ಮಹತ್ಯೆ
ಮಡಿಕೇರಿ, ಮೇ.4: ಪುಲ್ವಾಮಾದಲ್ಲಿ ಕರ್ತವ್ಯದಲ್ಲಿದ್ದ ಕೊಡಗಿನ ಸಿ.ಆರ್.ಪಿ.ಎಫ್. ಯೋಧರೋರ್ವರು ಕರ್ತವ್ಯದಲ್ಲಿದ್ದಾಗಲೇ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ತಾಲೂಕಿನ ಐಗೂರು ಗ್ರಾ.ಪಂ. ವ್ಯಾಪ್ತಿಯ ಯಡವಾರೆ ನಿವಾಸಿ ಕೀಜನ ಜೋಯಪ್ಪ ಹಾಗೂ ವಿಶಾಲಾಕ್ಷಿ ಅವರ ಪುತ್ರ. ಕೆ.ಜೆ. ನವೀನ (40) ಎಂಬವರೇ ಆತ್ಮಹತ್ಯೆಗೆ ಶರಣಾದವರು. ಪುಲ್ವಾಮಾದಲ್ಲಿ ಕರ್ತವ್ಯ ನಿರತರಾಗಿದ್ದ ನವೀನ್ ಅವರು ರಕ್ಷಣಾ ಕಾರ್ಯಕ್ಕೆ ನೀಡಿದ್ದ ರೈಫಲ್ ನಿಂದಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಮಾಹಿತಿಯನ್ನು ಸಿ.ಆರ್.ಪಿ.ಎಫ್. ಕೇಂದ್ರ ಕಚೇರಿ ವರದಿ - ಮಾಡಿದೆ.
ಪುಲ್ವಾಮಾದ ವಾಚ್ ಟವರ್ ನಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗಲೇ ಗುಂಡು ಹಾರಿಸಿಕೊಂಡಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಅಲ್ಲಿನ ಮೂಲಗಳು ತಿಳಿಸಿವೆ. ಕಳೆದ 20.03.2026ರಿಂದ 17.04.2026ರವರೆಗೆ ರಜೆ ಹಾಕಿ ಗ್ರಾಮಕ್ಕೆ ಬಂದಿದ್ದ ನವೀನ್ ಅವರು ರಜೆಯನ್ನು ಕಡಿತಗೊಳಿಸಿ 02.04.2026 ರಂದೇ (11 ದಿನಗಳು ರಜಾ ಅವಧಿ ಇದ್ದರೂ ಕಚೇರಿಯ ಆದೇಶದಂತೆ ಮುಂಚಿತವಾಗಿ) ಕರ್ತವ್ಯಕ್ಕೆ ಹಾಜರಾಗಿದ್ದರು.
ಸೋಮವಾರ ಮಧ್ಯಾಹ್ನ 2.05 ಕ್ಕೆ ಕರ್ತವ್ಯದ ಸಮಯದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನವೀನ್ ಅವರು 2007ರಲ್ಲಿ ಸಿ.ಆರ್.ಪಿ.ಎಫ್.ಗೆ ಆಯ್ಕೆಯಾಗಿ ದೇಶ ಸೇವೆಗೆ ತೆರಳಿದ್ದರು. ಘಟನೆಯ ಬಗ್ಗೆ ಸಿ.ಆರ್.ಪಿ.ಎಫ್. ಮುಖ್ಯ ಕಚೇರಿಯಿಂದ ನವೀನ್ ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಷೆ ಜಮ್ಮು ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ಅಲ್ಲಿಂದ ಬೆಂಗಳೂರಿನ ಯಲಹಂಕದಲ್ಲಿರುವ ಕಚೇರಿಗೆ ರವಾನಿಸಲು ಸಿದ್ಧತೆ ಕೈಗೊಂಡಿದ್ದಾರೆ. ಮೃತದೇಹ ತಾ.5 ರಂದು (ಇಂದು) ಸ್ವಗ್ರಾಮಕ್ಕೆ ಆಗಮಿಸುವ ನಿರೀಕ್ಷೆಯಿದೆ. ಮೃತರು ಪತ್ನಿ ಸುನೀತಾ, 11 ವರ್ಷದ ಪುತ್ರಿ ಹಮ್ಮಿ. 9 ವರ್ಷದ ಪುತ್ರ ಲವಿನ್ ಅವರುಗಳನ್ನು ಅಗಲಿದ್ದಾರೆ.