ವಯಸ್ಸು ನಲವತ್ತಾದರೂ ಮದುವೆ ಮಾಡಲಿಲ್ಲವೆಂದು ತಾಯಿಯ ಕೊಲೆ ಯತ್ನ: ಚಿಕಿತ್ಸೆ ಫಲಿಸದೆ ಹೆತ್ತಮ್ಮ ಸಾವು

Apr 4, 2026 - 00:04
Apr 4, 2026 - 00:08
 0  918
ವಯಸ್ಸು ನಲವತ್ತಾದರೂ ಮದುವೆ ಮಾಡಲಿಲ್ಲವೆಂದು ತಾಯಿಯ ಕೊಲೆ ಯತ್ನ: ಚಿಕಿತ್ಸೆ ಫಲಿಸದೆ ಹೆತ್ತಮ್ಮ ಸಾವು
Photo credit: Etv Bharat ಫೋಟೋ; ಆರೋಪಿ ಮಗ &ಸಾವನ್ನಪ್ಪಿದ ತಾಯಿ

ಹಾಸನ: ವಯಸ್ಸು 40ವರ್ಷವಾದರೂ ಹೆತ್ತ ತಾಯಿ ತನಗೆ ಮದುವೆ ಮಾಡಲಿಲ್ಲ ಎಂಬ ಕಾರಣಕ್ಕೆ ಅಮ್ಮನ ಮೇಲೆ ಮಗ ಕಲ್ಲು ಎತ್ತು ಹಾಕಿ ಕೊಲೆಗೆ ಯತ್ನಿಸಿದ್ದ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮದುವೆ ವಿಚಾರಕ್ಕಾಗಿ ತಾಯಿ ಮತ್ತು ಮಗನ ನಡುವೆ ಮಾರ್ಚ್ 28ರಂದು ನಡೆದ ಗಲಾಟೆಯಲ್ಲಿ ಮಗ ಉಮಾ ಶಂಕರ್, ತಾಯಿಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೆ ಯತ್ನಿಸಿದ್ದ.

ಇದಾದ ಬಳಿಕ, ಆಕೆಯನ್ನು ಸ್ಥಳೀಯರು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿ ಗಂಗಮ್ಮ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದು, ಬುಧವಾರ(ಎ.1) ಸಂಜೆ ಸ್ವಗ್ರಾಮ ಶ್ರವಣಬೆಳಗೊಳದಲ್ಲಿ ಅಂತ್ಯಸಂಸ್ಕಾರ ನೆರವೇರಿತು.

ಇನ್ನು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲಾಗಿದ್ದ 307 ಪ್ರಕರಣವನ್ನು ಕೊಲೆ ಎಂಬುದಾಗಿ ಬದಲಾವಣೆ ಮಾಡಿದ್ದು 302 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಈಟಿವಿ ಭಾರತಕ್ಕೆ ಶ್ರವಣಬೆಳಗೊಳ ಪೊಲೀಸರು ಮಾಹಿತಿ ನೀಡಿದರು.

ಪ್ರಕರಣದ ಹಿನ್ನೆಲೆ: ಆರೋಪಿ ಉಮಾಶಂಕರ್ ಗಂಗಮ್ಮನ ಎರಡನೇ ಮಗ. ಮೊದಲ ಮಗ ಅಂತರ್ಜಾತಿ ವಿವಾಹವಾದ ಹಿನ್ನೆಲೆ ಕುಟುಂಬದಿಂದ ಪ್ರತ್ಯೇಕವಾಗಿದ್ದರು. ಮಗಳನ್ನು ಬೆಂಗಳೂರು ಮೂಲದ ವರನಿಗೆ ಕೊಟ್ಟು ಮದುವೆ ಮಾಡಿದ್ದರು. ಆದರೆ, ಎರಡನೇ ಮಗನಿಗೆ ಮದುವೆ ಮಾಡುವ ಪ್ರಯತ್ನದಲ್ಲಿದ್ದರು.

ಗಂಗಮ್ಮ ತನ್ನ ಮಗನಿಗೆ ಮದುವೆ ಮಾಡಲು ಸಾಕಷ್ಟು ಕಡೆ ವಧುವನ್ನು ನೋಡಲು ಮುಂದಾಗಿದ್ದರು. ಆದರೆ, ಕಳೆದ ವರ್ಷ ನಡೆದ ಕುಂಭಮೇಳಕ್ಕೆ ಉಮಾಶಂಕರ್ ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ತೆರಳಿ ವಾಪಸ್ ಬರುವಾಗ ಅಪಘಾತ ನಡೆದಿತ್ತು. ಇದರಿಂದಾಗಿ ಅವರ ಹೊಟ್ಟೆ ಮತ್ತು ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು.

ಹೀಗಾಗಿ, ಕಳೆದ 10 ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಉಮಾಶಂಕರ್ ಒಂದು ತಿಂಗಳಿನಿಂದ ಸರಿಯಾಗಿ ಔಷಧಿ ಮತ್ತು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ಹಾಗಾಗಿ, ಆತನಿಗೆ ಸ್ವಲ್ಪ ಬುದ್ಧಿ ಭ್ರಮಣೆಯಾದಂತೆ ಕಾಣುತ್ತಿದ್ದ. ಅಲ್ಲದೇ, ತನಗೆ ಮದುವೆ ಮಾಡಿಸುವಂತೆ ತಾಯಿ ಮತ್ತು ಸಂಬಂಧಿಕರನ್ನು ಪೀಡಿಸುತ್ತಿದ್ದ.

ಆದರೆ, ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಆತನಿಗೆ ವಧುವನ್ನು ಕೊಡಲು ಯಾರೂ ಮುಂದಾಗದ ಹಿನ್ನೆಲೆಯಲ್ಲಿ ಮನೆಯಲ್ಲಿ ಇದೇ ವಿಚಾರಕ್ಕೆ ತಾಯಿ ಮತ್ತು ಮಗನ ನಡುವೆ ಗಲಾಟೆ ನಡೆದಿರುವ ಬಗ್ಗೆ ಕುಟುಂಬಸ್ಥರು ತಿಳಿಸಿದ್ದರು.

ತಾಯಿ ತಲೆ ಮೇಲೆ ಕಲ್ಲು ಎತ್ತಾಕಿದ್ದ: ಮಾ. 28 ರಂದು ಮನೆಯಲ್ಲಿ ಕೆಲಸ ಮಾಡುತ್ತಿದ್ದ ತಾಯಿಯೊಂದಿಗೆ ಮದುವೆ ವಿಚಾರವಾಗಿ ಉಮಾಶಂಕರ್ ಗಲಾಟೆ ಮಾಡಿಕೊಂಡಿದ್ದ. ಈ ವೇಳೆ ತಾಯಿ-ಮಗನ ನಡುವೆ ತಳ್ಳಾಟ ನೂಕಾಟ ಉಂಟಾಗಿತ್ತು. ವಯಸ್ಸಾದ ಅಮ್ಮನನ್ನು ಬಲವಾಗಿ ತಳ್ಳಿದ್ದರಿಂದ ಮನೆಯ ಪಕ್ಕದಲ್ಲಿನ ಜಮೀನಿನ ಒಳಗೆ ತಾಯಿ ಬಿದ್ದಿದ್ದರು.

 ಇದೇ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಕಲ್ಲೊಂದನ್ನು ಎತ್ತಿ ಉಮಾಶಂಕರ್ ಏಕಾಏಕಿ ತಾಯಿಯ ತಲೆ ಮೇಲೆ ಎತ್ತಿ ಹಾಕಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದರು. ತಕ್ಷಣವೇ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಸಾವು - ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ತಾಯಿ ಗಂಗಮ್ಮ ಮೃತಪಟ್ಟ ಹಿನ್ನೆಲೆ ಬುಧವಾರ ಅಂತ್ಯಕ್ರಿಯೆ ನೆರವೇರಿತು.

What's Your Reaction?

Like Like 0
Dislike Dislike 2
Love Love 0
Funny Funny 0
Angry Angry 0
Sad Sad 2
Wow Wow 0