ಸಲ್ಮಾ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಅನೈತಿಕ ಸಂಬಂಧವೇ ಕೊಲೆಗೆ ಕಾರಣ 24 ಗಂಟೆಗಳಲ್ಲಿ ಸುಬ್ರಹ್ಮಣಿ, ಸೆಂಥಿಲ್ ಬಂಧನ

Oct 28, 2025 - 16:34
 0  1.5k
ಸಲ್ಮಾ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಅನೈತಿಕ ಸಂಬಂಧವೇ ಕೊಲೆಗೆ ಕಾರಣ   24 ಗಂಟೆಗಳಲ್ಲಿ ಸುಬ್ರಹ್ಮಣಿ, ಸೆಂಥಿಲ್ ಬಂಧನ

ಬೆಂಗಳೂರು, ಅ.28: ನಗರದ ತಿಲಕ್ ನಗರದಲ್ಲಿ ಯುವತಿ ಸಲ್ಮಾ ಹತ್ಯೆ ಪ್ರಕರಣಕ್ಕೆ ಕೇವಲ 24 ಗಂಟೆಗಳಲ್ಲಿ ತೆರೆ ಬಿದ್ದಿದೆ. ಘಟನೆಯ ಹಿಂದೆ ಅನೈತಿಕ ಸಂಬಂಧವೇ ಕಾರಣ ಎನ್ನುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಪೊಲೀಸರು ಆರೋಪಿಗಳಾದ ಸುಬ್ರಹ್ಮಣಿ ಮತ್ತು ಸೆಂಥಿಲ್ ಅವರನ್ನು ಬಂಧಿಸಿ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

 ಸಲ್ಮಾ ಮತ್ತು ಸುಬ್ರಹ್ಮಣಿ ನಡುವೆ ಅನೈತಿಕ ಸಂಬಂಧವಿತ್ತು. ಕಳೆದ ಶುಕ್ರವಾರ ರಾತ್ರಿ ಸುಬ್ರಹ್ಮಣಿ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ, ಸಲ್ಮಾ ತನ್ನ ಪರಿಚಿತ ಸೆಂಥಿಲ್ ಜೊತೆ ಅತಿಯಾಗಿ ಸಲುಗೆಯಿಂದ ವರ್ತಿಸಿದ್ದರಿಂದ ಸುಬ್ರಹ್ಮಣಿ ಕೋಪಗೊಂಡಿದ್ದ. ಕುಡಿತದ ಮತ್ತಿನಲ್ಲಿ ಆಕ್ರೋಶಗೊಂಡ ಆತ, ಮನೆಯಲ್ಲಿದ್ದ ರಾಗಿ ಮುದ್ದೆ ತಿರುಗಿಸುವ ಹಿಟ್ಟಿನ ಕೋಲಿನಿಂದ ಸಲ್ಮಾಳ ತಲೆಗೆ ಬಲವಾಗಿ ಹೊಡೆದಿದ್ದಾನೆ. ಹೊಡೆತದ ತೀವ್ರತೆಗೆ ಸಲ್ಮಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ನಂತರ ಆತಂಕಗೊಂಡ ಸುಬ್ರಹ್ಮಣಿ, ಮೃತದೇಹವನ್ನು ಮನೆಯಿಂದ ಸಾಗಿಸಲು ಸೆಂಥಿಲ್ ಸಹಾಯ ಪಡೆದಿದ್ದಾನೆ. ಇಬ್ಬರೂ ಶವವನ್ನು ಆಟೋದಲ್ಲಿಟ್ಟು ಬಳಿಕ ಪಾಂಡಿಚೇರಿಗೆ ಪರಾರಿಯಾಗುವ ಯೋಜನೆ ರೂಪಿಸಿದ್ದರು. ಮಧ್ಯರಾತ್ರಿಯೇ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಕಾಲ್ನಡಿಗೆಯಲ್ಲಿ ತೆರಳಿ, ಅಲ್ಲಿಂದ ತುಮಕೂರಿಗೆ ಬಸ್‌ ನಲ್ಲಿ ಪ್ರಯಾಣಿಸಿದ್ದರು.

ಇತ್ತ, ಮಹಿಳೆಯ ಶವ ಪತ್ತೆಯಾದ ಕೆಲವೇ ಹೊತ್ತಿನಲ್ಲಿ ತಿಲಕ್ ನಗರ ಪೊಲೀಸರು ತನಿಖೆ ಪ್ರಾರಂಭಿಸಿ, ತಾಂತ್ರಿಕ ಮಾಹಿತಿ ಹಾಗೂ ಸ್ಥಳೀಯ ಸುಳಿವುಗಳ ಆಧಾರದಲ್ಲಿ ಇಬ್ಬರ ಮೇಲೂ ಅನುಮಾನ ವ್ಯಕ್ತಪಡಿಸಿದ್ದರು. ಅವರ ಮೊಬೈಲ್ ಲೊಕೇಶನ್ ಆಧರಿಸಿ ತುಮಕೂರಿನಲ್ಲಿ ಪತ್ತೆಹಚ್ಚಿ, ಸ್ಥಳೀಯ ಪೊಲೀಸರ ಸಹಕಾರದಿಂದ ಬಂಧಿಸಲಾಯಿತು. ಬಂಧನದ ವೇಳೆ ಅವರ ಬಟ್ಟೆ ಮತ್ತು ಉಗುರಿನಲ್ಲಿ ರಕ್ತದ ಕಲೆ ಪತ್ತೆಯಾದ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದೃಢಪಟ್ಟಿದೆ ಎಂದು ತಿಳಿದು ಬಂದಿದೆ.

What's Your Reaction?

Like Like 5
Dislike Dislike 0
Love Love 2
Funny Funny 0
Angry Angry 0
Sad Sad 1
Wow Wow 0