ಪರಪ್ಪನ ಅಗ್ರಹಾರದಲ್ಲಿ ಬೀಡಿ–ಸಿಗರೇಟ್ ನಿಷೇಧಿಸಿದ್ದಕ್ಕೆ ಕೈದಿಗಳ ಧರಣಿ

Dec 2, 2025 - 18:42
 0  432
ಪರಪ್ಪನ ಅಗ್ರಹಾರದಲ್ಲಿ ಬೀಡಿ–ಸಿಗರೇಟ್ ನಿಷೇಧಿಸಿದ್ದಕ್ಕೆ ಕೈದಿಗಳ ಧರಣಿ

ಬೆಂಗಳೂರು, ಡಿ. 02:ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮವಾಗಿ ಸಿಗುತ್ತಿದ್ದ ಬೀಡಿ–ಸಿಗರೇಟ್ ಮಾರಾಟವನ್ನು ನಿಲ್ಲಿಸಿದ ಹಿನ್ನೆಲೆಯಲ್ಲಿ ಕೈದಿಗಳು ಕಳೆದ ಮೂರು ದಿನಗಳಿಂದ ಊಟ–ತಿಂಡಿ ನಿರಾಕರಿಸಿ ಧರಣಿ ನಡೆಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಜೈಲಿನೊಳಗಿನ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಮುಖ್ಯ ಅಧೀಕ್ಷಕ ಅಂಶುಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಇದರ ಪರಿಣಾಮವಾಗಿ ಜೈಲಿನಲ್ಲಿ ನಿಷೇಧಿತ ವಸ್ತುಗಳ ಮಾರಾಟಕ್ಕೆ ಪೂರ್ತಿಯಾಗಿ ತೆರೆ ಬಿದ್ದಿದೆ. ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಕೈದಿಗಳು “ಬೀಡಿ–ಸಿಗರೇಟ್ ಮಾರಾಟಕ್ಕೆ ಮರು ಅನುಮತಿ ನೀಡಬೇಕು” ಎಂದು ಒತ್ತಾಯಿಸುತ್ತಿದ್ದಾರೆ.

ಇತ್ತೀಚಿಗೆ ನಡೆದ ವಿಶೇಷ ಶೋಧ ಕಾರ್ಯಾಚರಣೆಯಲ್ಲಿ 50ಕ್ಕೂ ಹೆಚ್ಚು ಮೊಬೈಲ್‌ ಫೋನ್ ಹಾಗೂ ಅನೇಕ ಸಿಮ್ ಕಾರ್ಡ್‌ಗಳು ಪತ್ತೆಯಾಗಿದ್ದು, ಜೈಲು ಸಿಬ್ಬಂದಿಯೇ ನಿಷೇಧಿತ ವಸ್ತುಗಳನ್ನು ಒಳಕ್ಕೆ ತರಲು ಕಾರಣರಾಗಿದ್ದಾರೆಂಬ ಆರೋಪಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಆಡಳಿತ ನಿಯಮಾವಳಿ ಪ್ರಕಾರವೇ ಕ್ರಮ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದೆ.

ಜೈಲಿನೊಳಗೆ ಕೈದಿಗಳು ಮೊಬೈಲ್ ಬಳಸುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತುರ್ತು ಸಭೆ ನಡೆಸಿ ಇಬ್ಬರು ಜೈಲಿನಧಿಕಾರಿಗಳನ್ನು ಅಮಾನತು ಮಾಡಿದ್ದರು. ನಂತರ ಜೈಲು ಆಡಳಿತದಲ್ಲಿ ಬದಲಾವಣೆ ಮಾಡಿ ಅಂಶುಕುಮಾರ್ ಅವರನ್ನು ಮುಖ್ಯ ಅಧೀಕ್ಷಕರನ್ನಾಗಿ ನೇಮಿಸಲಾಗಿತ್ತು.

ರಾಜ್ಯಾದ್ಯಂತ ಕಾರಾಗೃಹಗಳ ಸುಧಾರಣೆಗಾಗಿ ಹೈಪವರ್ ಸಮಿತಿ ರಚನೆಯಾಗಿದ್ದು, ಎಡಿಜಿಪಿ ಹಿತೇಂದ್ರ ನೇತೃತ್ವದ ಸಮಿತಿ ದಿಲ್ಲಿಯ ತಿಹಾರ್ ಜೈಲು ಸೇರಿದಂತೆ ಅನೇಕ ಜೈಲುಗಳಿಗೆ ಭೇಟಿ ನೀಡಿ ಆಡಳಿತ, ತಂತ್ರಜ್ಞಾನ ಬಳಕೆ, ಪುನರ್ವಸತಿ ಕಾರ್ಯಕ್ರಮ ಸೇರಿದಂತೆ ವಿವಿಧ ಅಂಶಗಳನ್ನು ಪರಿಶೀಲಿಸಿದೆ. ಇದೇ ಸಮಿತಿ ಮಂಗಳೂರು ಮತ್ತು ಕಲಬುರಗಿ ಜೈಲುಗಳಿಗೂ ಭೇಟಿ ನೀಡಿ ಸಿಬ್ಬಂದಿ ಕೊರತೆ, ಅತಿಯಾಗಿರುವ ಕೈದಿ ಸಂಖ್ಯೆ ಹಾಗೂ ಭದ್ರತಾ ವ್ಯವಸ್ಥೆಗಳ ಪರಿಶೀಲನೆ ನಡೆಸಿದೆ.

ನಿಷೇಧಿತ ವಸ್ತುಗಳಿಗೆ ಯಾವುದೇ ರೀತಿಯ ಅನುಮತಿ ಸಾಧ್ಯವಿಲ್ಲವೆಂದು ಜೈಲು ಆಡಳಿತ ಸ್ಪಷ್ಟಪಡಿಸಿರುವ ನಡುವೆಯೇ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಧರಣಿ ಮೂರನೇ ದಿನಕ್ಕೆ ಮುಂದುವರಿದಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0