ಕಾವೇರಿ ನದಿಯ ಸ್ವಚ್ಛತೆ, ಪಾವಿತ್ರ್ಯತೆ ಕಾಪಾಡಿ ಸಂರಕ್ಷಿಸುವ ಮತ್ತು ನದಿ ತೀರದ ಒತ್ತುವರಿ ತೆರವುಗೊಳಿಸಲು ಆಗ್ರಹಿಸಿ ಪ್ರತಿಭಟನೆ
admincoorgdaily

ಮಡಿಕೇರಿ: ಕಾವೇರಿ ನದಿಯ ಸ್ವಚ್ಛತೆ, ಪಾವಿತ್ರ್ಯತೆ ಕಾಪಾಡಿ ಸಂರಕ್ಷಿಸುವ ಮತ್ತು ನದಿ ತೀರದ ಒತ್ತುವರಿ ತೆರವುಗೊಳಿಸಲು ಆಗ್ರಹಿಸಿ ಕೊಡಗು ಅಭಿವೃದ್ಧಿ ಸಮಿತಿ ವತಿಯಿಂದ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಯುವ ರಕ್ಷಣಾ ವೇದಿಕೆ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭ ಕೊಡಗು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಸನ್ನ ಭಟ್ ಮಾತನಾಡಿ, ಜಿಲ್ಲೆಯ ವಿವಿಧ ಭಾಗಗಳಲ್ಲಿ ವಿಶೇಷವಾಗಿ ಕಾವೇರಿ ನದಿ ಹರಿಯುವ ಪ್ರದೇಶಗಳಲ್ಲಿ ಘನ ತ್ಯಾಜ್ಯ, ಪ್ಲಾಸ್ಟಿಕ್ ವಸ್ತುಗಳು, ಹೋಟೆಲ್ ಹಾಗೂ ವ್ಯಾಪಾರಿಕ ತ್ಯಾಜ್ಯ, ನದಿಗೆ ಹಾಗೂ ನದಿ ತೀರ ಪ್ರದೇಶಗಳಿಗೆ ಅಕ್ರಮವಾಗಿ ಎಸೆಯಲಾಗುತ್ತಿರುವುದು ಅತ್ಯಂತ ವಿಷಾದಕರ ವಿಷಯವಾಗಿದೆ. ಇದು ಪರಿಸರ, ಸಾರ್ವಜನಿಕ ಆರೋಗ್ಯ ಮತ್ತು ಭವಿಷ್ಯದ ನೀರಿನ ಭದ್ರತೆಗೆ ಗಂಭೀರ ಅಪಾಯವನ್ನುಂಟುಮಾಡುತ್ತಿದೆ.
ಈ ವಿಷಯಕ್ಕೆ ಸಂಬಂಧಿಸಿ ನಾವು ಈಗಾಗಲೇ ಒಮ್ಮೆ ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಮನವಿ ಸಲ್ಲಿಸಿದ್ದೇವೆ. ಆದರೆ ದುರದೃಷ್ಟವಶಾತ್, ಇಂದಿನವರೆಗೆ ಯಾವುದೇ ಪರಿಣಾಮಕಾರಿ ಹಾಗೂ ದೃಢವಾದ ಕ್ರಮ ಕೈಗೊಳ್ಳಲಾಗಿಲ್ಲ. ಅದರ ಹಿನ್ನೆಲೆ ಇಂದು ಮತ್ತೊಮ್ಮೆ ಪ್ರತಿಭಟಿಸಲಾಗುತ್ತಿದೆ ಎಂದು ತಿಳಿಸಿದರು.
ಕಾವೇರಿ ನದಿಗೆ ತ್ಯಾಜ್ಯ ಎಸೆಯುತ್ತಿರುವವರ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸಂಬಂಧಪಟ್ಟ ನಗರಸಭೆ / ಪುರಸಭೆ / ಪಂಚಾಯತ್ ಅಧಿಕಾರಿಗಳಿಗೆ ಸ್ಪಷ್ಟ ಹಾಗೂ ಕಟ್ಟುನಿಟ್ಟಾದ ನಿರ್ದೇಶನ ನೀಡಬೇಕು.
ನದಿ ತೀರ ಪ್ರದೇಶಗಳಲ್ಲಿ ನಿರಂತರ ಪರಿಶೀಲನೆ ಹಾಗೂ ನಿಗಾ ವ್ಯವಸ್ಥೆ ಜಾರಿಗೆ ತರಬೇಕು. ತಪ್ಪಿತಸ್ಥರ ಮೇಲೆ ಭಾರೀ ದಂಡ ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸುವ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕೊಡಗು ಅಭಿವೃದ್ಧಿ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಯುವ ರಕ್ಷಣಾ ವೇದಿಕೆಯ ಪದಾಧಿಕಾರಿಗಳಿದ್ದರು.