ಕಂದಾಯ ಸಚಿವರ ಹೇಳಿಕೆ ಖಂಡಿಸಿ ಬಾಳೆಲೆಯಲ್ಲಿ ಪ್ರತಿಭಟನೆ

ಕಂದಾಯ ಸಚಿವರ ಹೇಳಿಕೆ ಖಂಡಿಸಿ ಬಾಳೆಲೆಯಲ್ಲಿ ಪ್ರತಿಭಟನೆ

ಗೋಣಿಕೊಪ್ಪ: ಅಧಿವೇಶನದಲ್ಲಿ ಕಂದಾಯ ಸಚಿವರು ಪಟ್ಟೆದಾರ ಬ್ರಿಟಿಷರಿಗೆ ಸೈನಿಕರನ್ನು ಒದಗಿಸುವ ಏಜೆಂಟರು ಎಂಬ ಪದ ಬಳಸಿರುವುದನ್ನು ಖಂಡಿಸಿ ಬಾಳಲೆ ಗ್ರಾಮದ ಕೊಡವ ಸಮುದಾಯ ಮತ್ತು ಕೊಡವ ಸಮಾಜ ಬಾಳಲೆ ಹೋಬಳಿಯನ್ನು ಬಂದ್ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. 

ಅಧಿವೇಶನದಲ್ಲಿ ಜಮ್ಮಾ ಜಾಗದಲ್ಲಿ ಪಟ್ಟೆದಾರರ ಹೆಸರಿನಲ್ಲಿ ಇರುವ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ವಿದೇಯಕ ಮಂಡಿಸುವಾಗ ಪಟ್ಟೇದಾರ ಎಂದರೆ ಏಜೆಂಟ್ ಎಂಬ ಪದಬಳಕೆ ಔಚಿತ್ಯವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ಪ್ರತಿಭಟನೆಗಾರರು ಬಾಳಲೆ ಪಟ್ಟಣವನ್ನು ಒಂದು ಗಂಟೆಗಳ ಕಾಲ ಬಂದ್ ಮಾಡುವ ಮೂಲಕ ಪ್ರತಿಭಟನೆಗೆ ಮುಂದಾದರು.

ಬಾಳಲೆ ಕೊಡವ ಸಮಾಜದ ಅಧ್ಯಕ್ಷ ಮಲಚೀರ ಬೋಸ್, ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಕಂದಾಯ ಸಚಿವರು ಕೊಡಗಿನ ಪಟ್ಟ್ಟೆದಾರರ ಬಗ್ಗೆ ಮಾತನಾಡಿದ ವಿಚಾರವಾಗಿ ಮತ್ತೊಮ್ಮೆ ವಿಮರ್ಶೆ ಮಾಡಿಕೊಳ್ಳಲಿ. ಈ ಮಾತನ್ನು ಹಿಂಪಡೆಯುವ ಮೂಲಕ ಕೊಡಗಿನ ಜನರಲ್ಲಿ ಕ್ಷಮ ಕೇಳಬೇಕು ಎಂದು ಒತ್ತಾಯಿಸಿದರು.

  ಪಟ್ಟೆದಾರ ಎಂದರೆ ಕುಟುಂಬದ ಹಿರಿಯ ಎಂಬ ಗೌರವಪೂರ್ವಕವಾದ ವಾಕ್ಯವಾಗಿದೆ.

ಈ ಬಗ್ಗೆ ತಿಳಿದುಕೊಳ್ಳದೆ ಸಚಿವರು ಮಾತನಾಡಿದ್ದು ಕೊಡವರು ಜೀರ್ಣಿಸಿಕೊಳ್ಳಲಾಗದ ನೋವಿನ ವಿಚಾರವಾಗಿದೆ. ಉತ್ತಮ ಕಾರ್ಯವನ್ನು ಮಾಡಿ ಸಣ್ಣಹೇಳಿಕೆಯ ಮೂಲಕ ವಿವಾದವನ್ನು ಸಚಿವರ ಹುಟ್ಟು ಹಾಕಿದ್ದಾರೆ. ದೇಶದಲ್ಲಿ ಶಾಂತಿಪಾಲನೆ ಮಾಡುವ ಜನರನ್ನ ಹೀಗೆ ಏಜೆಂಟರು ಎಂದು ಹೇಳಿರುವುದು ತಪ್ಪು. ಇದಕ್ಕೆ ಸಚಿವರು ಕ್ಷಮೆ ಕೇಳಬೇಕು ಎಂದು ಹೇಳಿದರು.

ವಿರಾಜಪೇಟೆ ಬಿಜೆಪಿ ವಕ್ತಾರ ರಾಕೇಶ್ ದೇವಯ್ಯ ಮಾತನಾಡಿ, ಕೊಡವರಲ್ಲಿ ಅನಾಧಿಕಾಲದಿಂದಲು ಪಟ್ಟೆದಾರ ಪದ್ಧತಿ ಇದ್ದು, ಪಟ್ಟೆದಾರರನ್ನು ಪೂಜ್ಯ ಭಾವನೆಯಿಂದ ನೋಡಲಾಗುತಿದೆ. ಕೊಡವರ ಹಬ್ಬ ಹರಿದಿನಗಳಲ್ಲಿ, ಶುಭ ಸಂದರ್ಭಗಳಲ್ಲಿ ಆಯಾ ಕುಟುಂಬದ ಪಟ್ಟೆದಾರರಿಗೆ ಅತ್ಯಂತ ಗೌರವ ಸ್ಥಾನ ನೀಡುತ್ತಿದ್ದಾರೆ.

   ರಾಜ್ಯದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ಪಟ್ಟೆದಾರ ವ್ಯವಸ್ಥೆ ಬಗ್ಗೆ ಗೊತ್ತಿಲ್ಲದಿದ್ದರೂ ತಾವೇ ಕಲ್ಪನೆ ಮಾಡಿಕೊಂಡು ಪಟ್ಟೆದಾರರಿಗೆ ಅವಮಾನವಾಗುವ ರೀತಿ ಮಾತನಾಡುದರ ಮೂಲಕ ಸ್ವಾಭಿಮಾನದಿಂದ ಬದುಕುತಿರುವ ಹಾಗೂ ದೇಶದ ಸೈನ್ಯಕ್ಕೆ ತನ್ನದೇ ಅದ ಕೊಡುಗೆ ನೀಡುತ್ತಾ ಬಂದಿರುವ ಕೊಡವರನ್ನು ಸಣ್ಣತನದಲ್ಲಿ ಕಂಡಿದ್ದಾರೆ.ಸದನದಲ್ಲಿ ಸಚಿವರು ಮಾತನಾಡುವಾಗ ಉಪಸ್ಥಿತರಿದ್ದ ಕೊಡಗಿನ ಇಬ್ಬರು ಶಾಸಕರು ಸಚಿವರ ಬಳಸಿದ ಪದಕ್ಕೆ ಆಕ್ಷೇಪಣೆ ಸಲ್ಲಿಸದೆ ಇರುವುದನ್ನು ಸಹ ಕೊಡಗು ಬಿಜೆಪಿ ಖಂಡಿಸುತ್ತದೆ ಎಂದು ಹೇಳಿದರು.

ಬಾಳಲೆ ವಿಜಯಲಕ್ಷ್ಮಿ ವಿದ್ಯಾಸಂಸ್ಥೆಯ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಮಾತನಾಡಿ, ಸದನದಲ್ಲಿ ಬ್ರಿಟಿಷರ ಏಜೆಂಟರು ಎಂಬ ಪದ ಬಳಸುವುದರ ಮೂಲಕ ರಾಜ್ಯದ ಜನರ ಮುಂದೆ ಕೊಡವರಿಗೆ ಅವಮಾನ ಮಾಡಿರುತ್ತಾರೆ.

ಆದುದರಿಂದ, ಕಂದಾಯ ಸಚಿವರು ಕೂಡಲೇ ಕೊಡವರಲ್ಲಿ ಕ್ಷಮೆಯಾಚಿಸಬೇಕು ಎಂದರು. ಬಾಳಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ ಮಾತನಾಡಿ, ವಿಶ್ವದಲ್ಲೇ ಕೊಡವರ ಬಗ್ಗೆ ವಿಶೇಷವಾದ ಅಭಿಮಾನವಿದೆ. ಜವಾಬ್ದಾರಿತ ಸ್ಥಾನದಲ್ಲಿರುವವರು ಬೇಜವಾಬ್ದಾರಿ ಹೇಳಿಕೆಯನ್ನು ನೀಡುವ ಮೂಲಕ ಸಮಾಜದಲ್ಲಿ ಮತ್ತು ಸಮುದಾಯದಲ್ಲಿ ಶಾಂತಿ ಕದಡುವ ವ್ಯವಸ್ಥೆಯನ್ನು ಸೃಷ್ಟಿಸುವುದು ಒಳ್ಳೆಯ ಬೆಳವಣಿಗೆಯಲ್ಲ.

ಸಚಿವರು ಪೂರ್ಣವಾದ ಮಾಹಿತಿ ತಿಳಿದು ಮಾತನಾಡುವ ಬದಲು, ತಮ್ಮ ನೇರಕ್ಕೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇದು ಕೊಡವರಿಗೆ ಮಾಡಿದ ಅಪಮಾನ ಎಂದು ವಾದಿಸಿದರು. 

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುಮ್ಮಟೀರ ಕಿಲನ್ ಗಣಪತಿ ಮಾತನಾಡಿ, ಆದಿಪುರುಷ, ಗುರುಕಾರಣದಂತ ಇತಿಹಾಸವನ್ನು ಹೊಂದಿರುವ ಸಂಸ್ಕೃತಿಯಲ್ಲಿ ಪಟ್ಟ್ಟೆದಾರನಿಗೆ ತನ್ನದೇ ಆದ ಪ್ರಾಮುಖ್ಯತೆಯನ್ನು ಕೊಡವ ಸಮುದಾಯ ನೀಡುತ್ತಾ ಬಂದಿದೆ.

  ಈ ವಿಚಾರವನ್ನು ತಿಳಿದುಕೊಳ್ಳದ ಕಂದಾಯ ಸಚಿವರು ತಾವು ಆಡಿದ ಮಾತಿನಲ್ಲಿ ಕೊಡವ ಸಮುದಾಯವನ್ನು ಹೀನಾಯವಾಗಿ ಸಮಾಜಕ್ಕೆ ತೋರಿಸುವ ಪ್ರಯತ್ನ ನಡೆಸಿದ್ದಾರೆ.

ಈ ನುಡಿ ಮತ್ತು ನಡೆಗೆ ತೀವ್ರವಾದ ಖಂಡನೆ ಇದೆ ಎಂದು ಹೇಳಿದರು.

ಬಿಜೆಪಿ ಕೃಷಿ ಮೋರ್ಚದ ರಾಜ್ಯ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ ಮಾತನಾಡಿ, ಕೊಡವರನ್ನು ನಾನ ಕಾರಣಗಳಿಗಾಗಿ ಇದು ತೇಜೋವಧೆ ಮಾಡಿ ಕುಗ್ಗಿಸುವ ಪ್ರವೃತ್ತಿಯೊಂದು ಬೆಳೆದುಕೊಂಡು ಬರುತ್ತಿದೆ, ಇದನ್ನು ಪ್ರತಿಯೊಬ್ಬರು ಖಂಡಿಸಬೇಕಾಗಿದೆ. ಸಚಿವರ ಹೇಳಿಕೆ ಕೊಡವವರ ಸ್ವಾಭಿಮಾನದ ಬದುಕಿಗೆ ಧಕ್ಕೆ ತಂದಿದೆ. ಈ ವಿಚಾರವನ್ನು ಮತ್ತೆ ಪರಮರ್ಶಿಸಿ ಕ್ಷಮೆ ಕೇಳುವ ಮೂಲಕ ತಮ್ಮ ಅಚಾತುರ್ಯ ಮಾತುಗಳಿಂದ ಉಂಟಾದ ವಿವಾದವನ್ನು ಸಮನಗೊಳಿಸುವ ಪ್ರಯತ್ನಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಬಾಳಲೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಪೋಡಮಾಡ ಸುಕೇಶ್, ಅಡ್ಡೇಂಗಡ ಅಜಯ್, ಅರುಣ್, ರಾಕಿ ನಾಣಯ್ಯ, ಕಾಯಮಾಡ ರಾಜ, ಅರಮಣಮಾಡ ಸುಗುಣ ಗಣಪತಿ, ಚಂಗಪ್ಪ, ಸುಳ್ಳಿಮಾಡ ಸಂಪತ್, ಚಿಂಡಮಾಡ ಜಗನ್, ಮಂದೆಮಾಡ ಗಣಪತಿ, ಅಲೆಮಾಡ ಕರುಂಬಯ್ಯ, ಅದೇಂಗಡ ಚಂದ್ರ ಶೇಖರ್, ಗಾಣಂಗಡ ಮೋಹನ್, ಮುಕ್ಕಾಟೀರ ಕಾವೇರಪ್ಪ, ಹಾಗೂ ಬಾಳಲೆಯ ಗ್ರಾಮಸ್ಥರು ಪ್ರತಿಭಟನೆಯಲ್ಲಿದ್ದರು.