Kodagu

ಅಂಬೇಡ್ಕರ್ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಸಾರ್ವಜನಿಕರು ದೇಣಿಗೆ ನೀಡಬೇಡಿ:ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಯೋಜಕ ಎಂ.ಎನ್ ರಾಜಪ್ಪ

admincoorgdaily

ಅಂಬೇಡ್ಕರ್ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಸಾರ್ವಜನಿಕರು ದೇಣಿಗೆ ನೀಡಬೇಡಿ:ದಲಿತ ಸಂಘರ್ಷ ಸಮಿತಿ ವಿಭಾಗೀಯ ಸಂಯೋಜಕ ಎಂ.ಎನ್ ರಾಜಪ್ಪ

 ಮಡಿಕೇರಿ: ಮಡಿಕೇರಿ ನಗರದ ಸುದರ್ಶನ್ ವೃತ್ತದ ಪಕ್ಕದಲ್ಲಿರುವ ನಾಲ್ಕು ಸೆಂಟ್ ಸರ್ಕಾರಿ ಜಾಗದಲ್ಲಿ ಸರ್ಕಾರದ ವತಿಯಿಂದ ಸುಮಾರು ೪೪ ಲಕ್ಷ ರೂಗಳ ವೆಚ್ಚದಲ್ಲಿ ಅಂಬೇಡ್ಕರ್ ಕಂಚಿನ ಪುತ್ಥಳಿ ನಿರ್ಮಾಣ ಮಾಡುತ್ತಿರುವುದು ಸಂತೋಷದ ಸುದ್ದಿಯಾಗಿದ್ದು, ಇದನ್ನು ದಲಿತ ಸಂಘರ್ಷ ಸಮಿತಿ ಸ್ವಾಗತಿಸುತ್ತದೆ ಎಂದು ಸಮಿತಿಯ ವಿಭಾಗೀಯ ಸಂಯೋಜಕ ಎಂ.ಎನ್.ರಾಜಪ್ಪ ತಿಳಿಸಿದ್ದಾರೆ.

ಡಿ.೫ ರಂದು ಮಡಿಕೇರಿ ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲಿ ಜನಪ್ರಿಯ ಶಾಸಕರಾದ ಡಾ.ಮಂತರಗೌಡರು ವಿದ್ಯುಕ್ತವಾಗಿ ಸಾರ್ವಜನಿಕರ ಸಮ್ಮುಖದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದ್ದಾರೆ. ಈ ಕಾಮಗಾರಿಯ ಕಂಚಿನ ಪುತ್ಥಳಿಗೆ ಮಡಿಕೇರಿ ನಗರಸಭೆಯಿಂದ ೨೦ ಲಕ್ಷ ರೂಪಾಯಿಗಳನ್ನು ಕಾಯ್ದಿರಿಸಲಾಗಿದೆ. ಉಳಿದ ೨೪ ಲಕ್ಷ ರೂಗಳನ್ನು ಶಾಸಕರು ಭರಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಕೆಲವರು ಪುತ್ಥಳಿ ನಿರ್ಮಾಣದ ಹೆಸರಿನಲ್ಲಿ ಸರ್ಕಾರಿ ನೌಕರರಿಂದ, ಅಧಿಕಾರಿಗಳಿಂದ ದೇಣಿಗೆ ಪಡೆಯಲು ಹೊರಟಿರುವುದು ಸರಿಯಲ್ಲ. ಸರ್ಕಾರವೇ ೪೪ ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತಿರುವಾಗ ನೌಕರರಿಂದ ದೇಣಿಗೆ ಪಡೆಯುವ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ಎಲ್ಲೂ ದಲಿತ ಸಂಘನೆಗಳು ಪುತ್ಥಳಿ ನಿರ್ಮಾಣಕ್ಕೆ ದೇಣಿಗೆ ಪಡೆದ ಉದಾಹರಣೆಯಿಲ್ಲ. ಇನ್ನುಮುಂದು ದೇಣಿಗೆ ಕೇಳಿದಲ್ಲಿ ನಿರ್ಭೀತಿಯಿಂದ ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ಸಮಾಜ ಕಲ್ಯಾಣ ಉಪನಿರ್ದೇಶಕರ ಗಮನಕ್ಕೆ ತರಬೇಕೆಂದು ಮನವಿ ಮಾಡಿದರು.

ಹುಬ್ಬಳ್ಳಿಯ ಇನಾಂ ವೀರಾಂಪುರದಲ್ಲಿ ನಡೆದ ಗರ್ಭಿಣಿಯೊಬ್ಬರ ಮರ್ಯಾದಾ ಹತ್ಯೆ ಪ್ರಕರಣ ಅತ್ಯಂತ ಖಂಡನೀಯ ಹಾಗೂ ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಇದು ಮಾನವೀಯತೆ ಮತ್ತು ಸಂವಿಧಾನದ ಮೌಲ್ಯಗಳ ಮೇಲೆ ನಡೆದ ಜಾತಿ ಭಯೋತ್ಪಾದನೆಯಾಗಿದೆ. ಅಂತರ್ಜಾತಿ ವಿವಾಹಗಳನ್ನು ಉತ್ತೇಜಿಸುವ ಸರ್ಕಾರ ಇಂತಹ ದಂಪತಿಗಳಿಗೆ ರಕ್ಷಣೆ ನೀಡಲು ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ನಡೆದ ಹಿಂದುಗಳ ಹತ್ಯೆ ಬಗ್ಗೆ ಕೇಸು ದಾಖಲಿಸಲು ಪ್ರತಿಭಟನೆ ನಡೆಸಿದ ಹಿಂದು ಸಂಘಟನೆಗಳು ಸ್ವಂತ ರಾಜ್ಯದಲ್ಲಿ (ಕರ್ನಾಟಕದಲ್ಲಿ) ದಲಿತ ಯುವಕ ಹಾಗೂ ಆತನ ಪತ್ನಿ ಗರ್ಭಿಣಿಯ ಮೇಲೆ ನಡೆದ ಈ ಅಮಾನುಷ ಕೃತ್ಯದ ಬಗ್ಗೆ ದನಿ ಎತ್ತದಿರುವುದು ವಿಷಾದನೀಯ. ಹಲ್ಲೆಗೊಳಗಾದ ವಿವೇಕಾನಂದ ಅವರ ಕುಟುಂಬಕ್ಕೆ ಸರ್ಕಾರವು ಸೂಕ್ತ ಭದ್ರತೆ ಒದಗಿಸಬೇಕೆಂದು ದಲಿತ ಸಂಘರ್ಷ ಸಮಿತಿ (ಸಂಯೋಜಕ) ರಾಜ್ಯ ಸಮಿತಿ ಸರ್ಕಾರವನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ರಾಜ್ಯ ಸಂಘಟನಾ ಸಂಯೋಜಕ ರಾಜಶೇಖರ್, ಪ್ರಮುಖರಾದ ಮಂಜುನಾಥ್, ಡಿಲೆಕ್ಸ್, ಚಂದ್ರಶೇಖರ್, ಪೊನ್ನಪ್ಪ, ಉಪಸ್ಥಿತರಿದ್ದರು.