ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ರಾಜಾಸೀಟು ಅಭಿವೃದ್ಧಿ ಸಮಿತಿ ಸಭೆ
ಮಡಿಕೇರಿ ಮಾ.11:-ರಾಜಾಸೀಟು ಬಳಿಯ ಕೂರ್ಗ್ ವಿಲೇಜ್‍ನ್ನು ಬಳಸಿಕೊಳ್ಳುವಲ್ಲಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ರಾಜಾಸೀಟು ಅಭಿವೃದ್ಧಿ ಸಂಬಂಧ ನಡೆದ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ರಾಜಾಸೀಟು ಅಭಿವೃದ್ಧಿ ಸಮಿತಿ ಸದಸ್ಯರಾದ ಮೋಂತಿ ಗಣೇಶ್, ಅಂಬೆಕಲ್ಲು ನವೀನ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಶಶಿಧರ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಕೆ.ಟಿ.ಪ್ರಭು, ನಗರಸಭೆ ಪೌರಾಯುಕ್ತರಾದ ಎಚ್.ಆರ್.ರಮೇಶ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಸಚಿನ್, ಇತರರು ಪಾಲ್ಗೊಂಡು ಹಲವು ಮಾಹಿತಿ ನೀಡಿದರು.
ಕೂರ್ಗ್ ವಿಲೇಜ್‍ನ್ನು ಆಕರ್ಷಣೀಯಗೊಳಿಸಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ರಾಜಾಸೀಟು ಬಳಿ ಇರುವ ಟಿಕೆಟ್ ಕೌಂಟರ್‍ನ್ನು ಕೂರ್ಗ್ ವಿಲೇಜ್‍ಗೆ ಸ್ಥಳಾಂತರಿಸಿದರೆ ಹೇಗೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ಸಲಹೆ ಮಾಡಿದರು.
‘ಕೂರ್ಗ್ ವಿಲೇಜ್‍ನ್ನು ಅಭಿವೃದ್ಧಿ ಪಡಿಸಿ ಸ್ಥಳೀಯ ಸ್ವಸಹಾಯ ಗುಂಪುಗಳಿಗೆ ಅವಕಾಶ ಕಲ್ಪಿಸಲು ಉದ್ದೇಶವಾಗಿತ್ತು, ಆದರೆ ಯಾರೂ ಸಹ ಮುಂದೆ ಬರಲಿಲ್ಲ, ಆದ್ದರಿಂದ ಈಗಾಗಲೇ ಸ್ಥಳೀಯವಾಗಿ ವ್ಯಾಪಾರ ಮಾಡುತ್ತಿರುವವರಿಗೆ ಹಾಗೂ ಆಸಕ್ತರಿಗೆ ಬಾಡಿಗೆ ಆಧಾರದಲ್ಲಿ ಅವಕಾಶ ಮಾಡಲು ಮುಂದಾಗಲಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಎಚ್.ಶಶಿಧರ್ ಅವರು ಮಾಹಿತಿ ನೀಡಿದರು.’
ಮೋಂತಿ ಗಣೇಶ್ ಅವರು ಮಾತನಾಡಿ ಕೂರ್ಗ್ ವಿಲೇಜ್‍ನ್ನು ಅಭಿವೃದ್ಧಿ ಪಡಿಸವುದರ ಜೊತೆಗೆ ನಗರದ ನೆಹರು ಮಂಟಪಕ್ಕೆ ಇನ್ನಷ್ಟು ಕಾಯಕಲ್ಪ ಕಲ್ಪಿಸಬೇಕು. ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಅವರು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಟಿಕೆಟ್ ಕೌಂಟರ್ ನಿರ್ಮಾಣ ಹಾಗೂ ಮತ್ತಿತರ ಸೌಲಭ್ಯ ಸಂಬಂದ ಅಗತ್ಯ ಕ್ರಮವಹಿಸುವಂತೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಿಗೆ ಸೂಚಿಸಿದರು.
ಮಾಹಿತಿ ಕೇಂದ್ರ, ಪ್ರವಾಸಿ ಮಿತ್ರ, ಆಹಾರ ಕೇಂದ್ರ, ಸಿಸಿಟಿವಿ ಕ್ಯಾಮರಾ ಅಳವಡಿಸುವುದು, ಸೋಲಾರ್ ಲೈಟ್ ಅಳವಡಿಕೆ, ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುವುದು, ಪುಟಾಣಿ ರೈಲು ನಿರ್ಮಾಣ, ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರು ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ವಾಹನ ನಿಲುಗಡೆ ಸಂಬಂಧಿಸಿದಂತೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಅವರು ಕಾವೇರಿ ಕಲಾಕ್ಷೇತ್ರದಲ್ಲಿ ಕಾಮಗಾರಿ ನಿರ್ಮಾಣ ಸಂಬಂಧ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತರಾದ ಎಚ್.ಆರ್.ರಮೇಶ್ ಅವರು ಕಾವೇರಿ ಕಲಾಕ್ಷೇತ್ರದ ಸ್ಥಳದಲ್ಲಿ ಬಹುಮಹಡಿ ವ್ಯವಸ್ಥೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ಇರಲಿದೆ. ಮೂರನೇ ಮಹಡಿಯಲ್ಲಿ ಕಲಾಭವನ ಮಾದರಿಯಲ್ಲಿ ಸಭಾಂಗಣ ನಿರ್ಮಿಸಲಾಗುತ್ತಿದೆ ಎಂದರು.
ಕಾವೇರಿ ಕಲಾಕ್ಷೇತ್ರದಲ್ಲಿ ನೂತನ ಕಟ್ಟಡ ನಿರ್ಮಾಣ ಸಂಬಂಧ ತಾಂತ್ರಿಕ ಬಿಡ್ಡಿಗೆ ಅನುಮೋದನೆಯಾಗಿದ್ದು, ಆರ್ಥಿಕ ಬಿಡ್ಡು ಅನುಮೋದನೆಗಾಗಿ ಪೌರಾಡಳಿತ ನಿರ್ದೇಶನಾಲಯಕ್ಕೆ ಸಲ್ಲಿಸಲಾಗಿದೆ ಎಂದು ಪೌರಾಯುಕ್ತರು ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಪಣೀಂದ್ರ, ಸಹಾಯಕ ನಿರ್ದೇಶಕರಾದ ಬಿ.ಎಸ್.ಮುತ್ತಪ್ಪ ಇತರರು ಇದ್ದರು.