ರಾಜಸ್ಥಾನ | 15 ಗ್ರಾಮಗಳಲ್ಲಿ ಸೊಸೆಯಂದಿರು - ಯುವತಿಯರಿಗೆ ಸ್ಮಾರ್ಟ್ ಫೋನ್ ಬಳಕೆಗೆ ನಿಷೇಧ

Dec 25, 2025 - 11:52
 0  511
ರಾಜಸ್ಥಾನ | 15 ಗ್ರಾಮಗಳಲ್ಲಿ ಸೊಸೆಯಂದಿರು - ಯುವತಿಯರಿಗೆ ಸ್ಮಾರ್ಟ್ ಫೋನ್ ಬಳಕೆಗೆ ನಿಷೇಧ

ಜೋಧಪುರ, ಡಿಸೆಂಬರ್ 23: ರಾಜಸ್ಥಾನದ ಜಾಲೋರ್ ಜಿಲ್ಲೆಯ ಒಂದು ಗ್ರಾಮ ಪಂಚಾಯತ್‌ ತನ್ನ ವ್ಯಾಪ್ತಿಯ 15 ಗ್ರಾಮಗಳ ಸೊಸೆಯಂದಿರು ಹಾಗೂ ಯುವತಿಯರು ಸ್ಮಾರ್ಟ್ ಫೋನ್‌ಗಳನ್ನು ಬಳಸುವುದನ್ನು ನಿಷೇಧಿಸುವ ನಿರ್ಣಯ ಕೈಗೊಂಡಿದೆ. ಈ ನಿರ್ಬಂಧವು ಜನವರಿ 26ರಿಂದ ಜಾರಿಗೆ ಬರಲಿದೆ.

ಗ್ರಾಮ ಪಂಚಾಯತ್‌ ತೀರ್ಮಾನದಂತೆ, ಮದುವೆ ಸೇರಿದಂತೆ ಸಾರ್ವಜನಿಕ ಸಮಾರಂಭಗಳು ಹಾಗೂ ನೆರೆಹೊರೆಯವರ ಮನೆಗಳಿಗೆ ಸ್ಮಾರ್ಟ್ ಮೊಬೈಲ್ ಫೋನ್‌ಗಳನ್ನು ಕೊಂಡೊಯ್ಯುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಸ್ಮಾರ್ಟ್‌ಫೋನ್‌ಗಳ ಬದಲು ಕೀಪ್ಯಾಡ್ ಫೋನ್‌ಗಳನ್ನು ಮಾತ್ರ ಬಳಸಲು ಅವಕಾಶ ನೀಡಲಾಗಿದೆ.

ಜಾಲೋರ್ ಜಿಲ್ಲೆಯ ಗಾಝಿಪುರ ಗ್ರಾಮದಲ್ಲಿ ರವಿವಾರ ನಡೆದ ಚೌಧರಿ ಸಮುದಾಯದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. 14 ಪತ್ತಿಗಳ (ಉಪವಿಭಾಗಗಳು) ಅಧ್ಯಕ್ಷ ಸುಜ್ಞಾರಾಮ ಚೌಧರಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗ್ರಾಮ ಪಂಚಾಯತ್‌ ಸದಸ್ಯರು ಮತ್ತು ಸಮುದಾಯದ ಹಿರಿಯರು ಚರ್ಚಿಸಿ ಈ ತೀರ್ಮಾನಕ್ಕೆ ಬಂದಿದ್ದಾರೆ ಎಂದು ತಿಳಿಸಲಾಗಿದೆ.

ವ್ಯಾಸಂಗಕ್ಕಾಗಿ ಮೊಬೈಲ್ ಅಗತ್ಯವಿರುವ ವಿದ್ಯಾರ್ಥಿನಿಯರಿಗೆ ಮನೆಗಳೊಳಗೆ ಮಾತ್ರ ಸ್ಮಾರ್ಟ್ ಫೋನ್ ಬಳಸಲು ಅವಕಾಶ ಇರಲಿದೆ. ಆದರೆ ಸಾಮಾಜಿಕ ಕಾರ್ಯಕ್ರಮಗಳು, ಮದುವೆಗಳು ಹಾಗೂ ಇತರರ ಮನೆಗಳಿಗೆ ಮೊಬೈಲ್ ಕೊಂಡೊಯ್ಯಲು ಅನುಮತಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಪಂಚಾಯತ್‌ ನಿರ್ಣಯದ ವಿರುದ್ಧ ವ್ಯಕ್ತವಾಗುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದ ಸುಜ್ಞಾರಾಮ ಚೌಧರಿ, ಮನೆಗಳಲ್ಲಿನ ಮಹಿಳೆಯರ ಮೊಬೈಲ್ ಫೋನ್‌ಗಳನ್ನು ಮಕ್ಕಳು ಹೆಚ್ಚಾಗಿ ಬಳಸುವುದರಿಂದ ಅವರ ಆರೋಗ್ಯ, ವಿಶೇಷವಾಗಿ ಕಣ್ಣುಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂಬ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ದಿನನಿತ್ಯದ ಕೆಲಸಗಳಲ್ಲಿ ಅಡಚಣೆ ಆಗದಂತೆ ಕೆಲ ಮಹಿಳೆಯರು ಮಕ್ಕಳ ಕೈಗೆ ಮೊಬೈಲ್ ನೀಡುತ್ತಿರುವುದೂ ನಿರ್ಧಾರದ ಹಿನ್ನೆಲೆಯಾಗಿದೆ ಎಂದು ಅವರು ವಿವರಿಸಿದರು.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0