ವಿರಕ್ತ ದೊಡ್ಡ ಮಠದಲ್ಲಿ ಪ್ರವಾದಿ ಮುಹಮ್ಮದ್ (ಸ) ಸೀರತ್ ಕೃತಿಗಳ ಬಿಡುಗಡೆ
ವಿರಾಜಪೇಟೆ:ಜಮಾಅತೆ ಇಸ್ಲಾಮಿ ಹಿಂದ್ ಸಂಸ್ಥೆಯು ಆಯೋಜಿಸುವ ಪ್ರತಿಯೊಂದು ಕಾರ್ಯಕ್ರಮಗಳು ಅತ್ಯಂತ ಜನಮುಖಿಯಾಗಿದ್ದು, ಸಾಮುದಾಯಿಕ ಕಳಕಳಿಯಿಂದ ಕೂಡಿರುತ್ತವೆ ಎಂದು ಅರಮೇರಿ ಕಳಂಚೇರಿ ಮಠದ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರು ಹೇಳಿದರು.
ಪ್ರವಾದಿ ಮುಹಮ್ಮದ್ ಅವರ ಜನ್ಮದಿನೋತ್ಸವದ ಅಂಗವಾಗಿ ಜಮಾಅತೆ ಇಸ್ಲಾಮಿ ಹಿಂದ್ ಕೊಡಗು ಜಿಲ್ಲಾ ಘಟಕದ ವತಿಯಿಂದ'ಸೀರತ್ ಅಭಿಯಾನ'ದ ಭಾಗವಾಗಿ ಹಮ್ಮಿಕೊಳ್ಳಲಾಗಿದ್ದ ವಿರಾಜಪೇಟೆಯ ವಿರಾಜಪೇಟೆಯ ಶ್ರೀ ವಿರಕ್ತ ದೊಡ್ಡಮಠದಲ್ಲಿ ಎರಡು ಪ್ರಮುಖ ಸಾಹಿತ್ಯ ಕೃತಿಗಳ ಬಿಡುಗಡೆ ಹಾಗೂ ಧಾರ್ಮಿಕ ಸೌಹಾರ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸ್ವಾಮಿಜಿಗಳು,
ಸಾಹಿತ್ಯದ ಮೂಲಕ ಪ್ರವಾದಿ ಮುಹಮ್ಮದ್ ಅವರ ಉನ್ನತ ಚಿಂತನೆಗಳು ಹಾಗೂ ಮಾನವೀಯ ಮೌಲ್ಯಗಳನ್ನು ಜನಮಾನಸಕ್ಕೆ ತಲುಪಿಸುವ ಮತ್ತು ಈ ವಿಚಾರಗಳು ಜನರ ನೆನಪಿನಲ್ಲಿ ಸದಾ ಉಳಿಯುವಂತೆ ಮಾಡುವ ಉದ್ದೇಶದಿಂದ ಕೃತಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿರುವುದು ಶ್ಲಾಘನೀಯ. ಇತ್ತೀಚೆಗಷ್ಟೇ ನಿರಾಶ್ರಿತರಿಗೆ ಮನೆ ಹಸ್ತಾಂತರ ಮಾಡುವಂತಹ ಉತ್ತಮ ಸಾಮಾಜಿಕ ಜಾಗೃತಿ ಕೆಲಸಗಳನ್ನು ನಾವು ಕಂಡಿದ್ದೇವೆ. ಶಾಂತಿ ಪ್ರಕಾಶನ ಸಂಸ್ಥೆಯು ಕಳೆದ ಹಲವಾರು ದಶಕಗಳಿಂದ ಕನ್ನಡ ಭಾಷೆಯಲ್ಲಿ ಪ್ರವಾದಿಯವರ ಉನ್ನತ ಚಿಂತನೆಗಳನ್ನು ನಿರಂತರವಾಗಿ ಪ್ರಕಟಿಸುವ ಮೂಲಕ ಜನರಿಗೆ ಅತ್ಯಂತ ಹತ್ತಿರವಾಗಿಸುವ ಮಹತ್ತರ ಕೆಲಸ ಮಾಡುತ್ತಿದೆ. ಜನರ ಮನಸ್ಸಿನಲ್ಲಿರುವ ಹಲವು ಸಂಶಯಗಳು ಮತ್ತು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಈ ಸಾಹಿತ್ಯಿಕ ಪ್ರಯತ್ನಗಳು ಸಹಕಾರಿಯಾಗಿವೆ ಎಂದರು.
ಈ ಪುಸ್ತಕದಲ್ಲಿ ಪ್ರವಾದಿಯವರ ಮೌಲ್ಯಯುತ ಜೀವನ ಸಂದೇಶಗಳನ್ನು ಹಾಗೂ ಚಿಂತನೆಗಳನ್ನು ಅತ್ಯಂತ ಸರಳವಾಗಿ ನೀಡಲಾಗಿದೆ.'ಸತ್ಕಾರ್ಯವನ್ನು ಕೇವಲ ಆರಂಭಿಸಿ ಮಧ್ಯದಲ್ಲೇ ಬಿಟ್ಟುಬಿಡುವುದಕ್ಕಿಂತ, ಅದನ್ನು ಪೂರ್ಣಗೊಳಿಸುವುದು ಉತ್ತಮ' ಎಂಬ ಪ್ರವಾದಿಯವರ ಒಂದೇ ಸಾಲಿನ ಮೌಲ್ಯಯುತ ಸಂದೇಶವನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶತಮಾನದ ಇತಿಹಾಸವಿರುವ ಶ್ರೀ ವಿರಕ್ತ ಮಠದಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಂತೋಷ ತಂದಿದ್ದು, ಇಂತಹ ಕೆಲಸಗಳಿಗೆ ಶ್ರೀಮಠವು ಯಾವಾಗಲೂ ಬೆಂಬಲವಾಗಿ ಇರಲಿದೆ ಎಂದರು.
ಉಪನ್ಯಾಸಕ ಅರ್ಜುನ್ ಮೌರ್ಯ ಅವರು, ಯಾವುದೇ ವ್ಯಕ್ತಿಯನ್ನು ಕೇವಲ ಬಾಹ್ಯವಾಗಿ ವೈಭವೀಕರಿಸದೆ, ಅವರ ಒಳಗಿರುವ ದೈವೀಕ ಗುಣಗಳನ್ನು ಹಾಗೂ ಅಂತರಂಗವನ್ನು ಅರಿಯಲು ಪುಸ್ತಕಗಳ ಓದು ಸಹಕಾರಿಯಾಗಿದೆ. ಜೀವನ ಕ್ರಮವನ್ನು ತಿದ್ದುವ ಒಳ್ಳೆಯ ಸಾತ್ವಿಕ ವಿಚಾರಗಳು ಹಾಗೂ ಮೌಲ್ಯಗಳು ಎಲ್ಲಿಂದ ಬಂದರೂ ಅದನ್ನು ನಾವೆಲ್ಲರೂ ಮುಕ್ತವಾಗಿ ಸ್ವೀಕರಿಸಬೇಕಾದ ಅಗತ್ಯ ಇಂದಿನ ಪ್ರಸ್ತುತ ಪರಿಸ್ಥಿತಿಯಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ಯೊಗೇಶ್ ಮಾಸ್ಟರ್ ಬರೆದ 'ಮಾನವ ಮನಸ್ಸಿನ ಕೃಷಿಕ, ಮನದೊಡೆಯ ಪ್ರವಾದಿ ಮುಹಮ್ಮದ್ ಹಾಗೂ ಅಬ್ದುಲ್ ಸಲಾಂ ಪುತ್ತಿಗೆ ಅವರು ಬರೆದ 'ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್ (ಸ)' ಎಂಬ ಎರಡು ಕೃತಿಗಳನ್ನು ಅರಮೇರಿ ಮಠದ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಕಾರ್ಯದರ್ಶಿ ಪಿ.ಕೆ. ಅಬ್ದುಲ್ ರೆಹಮಾನ್, ಪ್ರಮುಖರಾದ ಕೆ.ಟಿ. ಬಶೀರ್, ಗೋಣಿಕೊಪ್ಪ ಅಧ್ಯಕ್ಷ ತನ್ವೀರ್ ಅಹಮದ್, ಮೌಲಾನ ಸಗೀರ್ ಅಝಾರಿ, ಎ.ಎ. ಉಮ್ಮರ್, ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
