ದುಬಾರೆ ಮೀಸಲು ಅರಣ್ಯದಲ್ಲಿ ಕಳ್ಳಬೇಟೆಗೆ ಯತ್ನ ಮೂವರು ವಶಕ್ಕೆ

Aug 25, 2026 - 10:24
 0  821
ದುಬಾರೆ ಮೀಸಲು ಅರಣ್ಯದಲ್ಲಿ ಕಳ್ಳಬೇಟೆಗೆ ಯತ್ನ ಮೂವರು ವಶಕ್ಕೆ

ಸಿದ್ದಾಪುರ:- ಮಾಲ್ದಾರೆ ಸಮೀಪದ ದುಬಾರೆ ಮೀಸಲು ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಕಳ್ಳಬೇಟೆಗೆ ಸಿದ್ಧತೆ ನಡೆಸಿದ್ದ ಆರೋಪದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಮೂವರನ್ನು ವಶಕ್ಕೆ ಪಡೆದಿದ್ದಾರೆ ಈ ವೇಳೆ ಇಬ್ಬರು ಆರೋಪಿಗಳು ಬಂದೂಕಿನೊಂದಿಗೆ ಅರಣ್ಯದೊಳಗೆ ಪರಾರಿಯಾಗಿದ್ದು ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಘಟನೆ ಆ.23ರಂದು ನಡೆದಿದೆ.

 ಮಾಲ್ದಾರೆ ಗಸ್ತಿನ ದೊಡ್ಡಹಡ್ಡು ಭಾಗದಲ್ಲಿ ಕಳ್ಳಬೇಟೆಗೆ ಸಿದ್ಧತೆ ನಡೆಸಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮಾಲ್ದಾರೆ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಈ ವೇಳೆ ಮೀಸಲು ಅರಣ್ಯದೊಳಗೆ ಅಪರಿಚಿತ ಕಾರೊಂದು ನಿಂತಿರುವುದು ಕಂಡುಬಂದಿದ್ದು, ಕಾರಿನಲ್ಲಿ ಯಾರೂ ಇಲ್ಲದ ಹಿನ್ನೆಲೆಯಲ್ಲಿ ಸುತ್ತಮುತ್ತ ಶೋಧ ನಡೆಸಿದಾಗ ಹೊಸದಾಗಿ ಮೂಡಿದ್ದ ಚಪ್ಪಲಿ ಹೆಜ್ಜೆ ಗುರುತುಗಳು ಪತ್ತೆಯಾಗಿವೆ ಹೆಜ್ಜೆ ಗುರುತುಗಳನ್ನು ಹಿಂಬಾಲಿಸಿಕೊಂಡು ಅರಣ್ಯದೊಳಗೆ ಸಾಗಿದ ಸಿಬ್ಬಂದಿಗೆ ವ್ಯಕ್ತಿಗಳು ಮಾತನಾಡುತ್ತಿರುವ ಶಬ್ದ ಕೇಳಿಬಂದಿದೆ ಸಿಬ್ಬಂದಿಯನ್ನು ಕಂಡ ಕೂಡಲೇ ಆರೋಪಿಗಳು ಓಡಲು ಯತ್ನಿಸಿದ್ದು, ಬೆನ್ನಟ್ಟಿದ ಅರಣ್ಯ ಸಿಬ್ಬಂದಿ ಮೂವರನ್ನು ವಶಕ್ಕೆ ಪಡೆದಿದ್ದಾರೆ ಇನ್ನಿಬ್ಬರು ಬಂದೂಕಿನೊಂದಿಗೆ ಅರಣ್ಯದೊಳಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ವಶಕ್ಕೆ ಪಡೆದವರ ಬಳಿಯಿದ್ದ ಮೂರು ಬ್ಯಾಗ್‌ಗಳು ಹಾಗೂ ಪ್ಲಾಸ್ಟಿಕ್ ಚೀಲಗಳನ್ನು ಪರಿಶೀಲಿಸಿದಾಗ ಬಟ್ಟೆ, ಅರಣ್ಯದಲ್ಲಿ ವಾಸ್ತವ್ಯಕ್ಕೆ ಬಳಸುವ ಅಡುಗೆ ಸಾಮಗ್ರಿಗಳು, ಚಾಕು, ಲೋಹ ಶೋಧಕ ಸಾಧನ, ಗಾಂಜಾ ರೀತಿಯ ಸೊಪ್ಪು ಹಾಗೂ ಸಿಡಿಮದ್ದು ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ. ಜಿಲಾಟಿನ್ ಕಡ್ಡಿಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

 ವಶಕ್ಕೆ ಪಡೆದವರನ್ನು ಕೇರಳದ ತ್ರಿಶೂರ್ ಜಿಲ್ಲೆಯ ತೋಮಸ್, ಸುರೇಶ್ ಹಾಗೂ ಕೊಂಡಗೇರಿ ಗ್ರಾಮದ ಮೊಹಮ್ಮದ್ ಹನೀಫ್ ಎಂದು ಗುರುತಿಸಲಾಗಿದೆ. ನೌಷದ್.ಎ.ಎಂ. ಕೊಂಡಂಗೇರಿ, ಅಶ್ರಫ್, ಕಣ್ಣೂರು ಕೇರಳ ರಾಜ್ಯ, ಇವರು ಪರಾರಿಯಾಗಿದ್ದಾರೆ ಆರೋಪಿಗಳ ಮೊಬೈಲ್‌ಗಳನ್ನು ಪರಿಶೀಲಿಸಿದಾಗ ಬಂದೂಕಿನೊಂದಿಗೆ ವ್ಯಕ್ತಿಯೊಬ್ಬರು ನಿಂತಿರುವ ಫೋಟೋ ಸೇರಿದಂತೆ ಮೀಸಲು ಅರಣ್ಯದೊಳಗೆ ತೆಗೆದಿರುವ ಹಲವು ಚಿತ್ರಗಳು ಪತ್ತೆಯಾಗಿವೆ.

 ವಾಟ್ಸ್‌ಆಪ್‌ನಲ್ಲಿ ಆನೆದಂತಕ್ಕೆ ಸಂಬಂಧಿಸಿದ ವಿಡಿಯೋವೊಂದು ಪತ್ತೆಯಾಗಿದ್ದು, ಅದನ್ನು ಕೇರಳದ ವ್ಯಕ್ತಿಯೊಬ್ಬರಿಗೆ ಕಳುಹಿಸಿರುವುದಾಗಿ ವಿಚಾರಣೆ ವೇಳೆ ತಿಳಿಸಿರುವುದಾಗಿ ಅರಣ್ಯ ಇಲಾಖೆ ಮೂಲಗಳು ಹೇಳಿವೆ ಆರೋಪಿಗಳು ಕಳ್ಳಬೇಟೆ ಉದ್ದೇಶದಿಂದ ಅರಣ್ಯ ಪ್ರದೇಶಕ್ಕೆ ಬಂದಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ, ಅವರ ಬಳಿಯಿದ್ದ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ. ಕರ್ನಾಟಕ ಅರಣ್ಯ ಕಾಯ್ದೆ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಸಿದ್ದಾಪುರ ಠಾಣೆಗೆ ಅರಣ್ಯಾಧಿಕಾರಿಯಿಂದ ದೂರು:

 ಜಿಲಾಟಿನ್ ಕಡ್ಡಿಗಳು ಹಾಗೂ ಗಾಂಜಾ ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿದ್ದಾಪುರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಸ್ಫೋಟಕ ವಸ್ತು ಹಾಗೂ ಮಾದಕ ದ್ರವ್ಯಕ್ಕೆ ಸಂಬಂಧಿಸಿದ ಅಂಶಗಳಿರುವುದರಿಂದ ಮುಂದಿನ ಕಾನೂನು ಕ್ರಮಕ್ಕಾಗಿ ವಲಯ ಅರಣ್ಯಾಧಿಕಾರಿ ರಕ್ಷಿತ್ ಅವರು ಖುದ್ದಾಗಿ ಸಿದ್ದಾಪುರ ಪೊಲೀಸ್ ಠಾಣೆಗೆ ತೆರಳಿ ಠಾಣಾಧಿಕಾರಿ ಮಂಜುನಾಥ್ ಅವರಿಗೆ ದೂರು ನೀಡಿದ್ದಾರೆ ಪ್ರಕರಣದ ಮುಂದಿನ ತನಿಖೆಯನ್ನು ಮಡಿಕೇರಿ ಡಿಎಫ್‌ಒ ಅಭಿಷೇಕ್ ಹಾಗೂ ಎಸಿಎಫ್ ನವೀನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಮುಂದುವರಿಸಲಿದ್ದಾರೆ.

 ಬಂದೂಕಿನೊಂದಿಗೆ ಅರಣ್ಯದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೂ ಶೋಧ ಕಾರ್ಯ ನಡೆಯುತ್ತಿದೆ. ಕಾರ್ಯಾಚರಣೆಯಲ್ಲಿ ಮಾಲ್ದಾರೆ ಗಸ್ತಿನ ಡಿಆರ್‌ಎಫ್‌ಒ ಹಂಸ, ಬೀಟ್ ಫಾರೆಸ್ಟರ್ ಚಂದ್ರಶೇಖರ್, ಅಜಯ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1