ಕೈಗಾರಿಕಾ ಪ್ರದೇಶದ ರಸ್ತೆ ಬದಿ ನಿಲ್ಲಿಸಿರುವ ಹಳೆಯ ವಾಹನಗಳನ್ನು ತೆರವುಗೊಳಿಸಿ: ಕೆ.ಬಿ.ಶಂಶುದ್ಧೀನ್

ಕೈಗಾರಿಕಾ ಪ್ರದೇಶದ ರಸ್ತೆ ಬದಿ ನಿಲ್ಲಿಸಿರುವ ಹಳೆಯ ವಾಹನಗಳನ್ನು ತೆರವುಗೊಳಿಸಿ: ಕೆ.ಬಿ.ಶಂಶುದ್ಧೀನ್

ಕುಶಾಲನಗರ,ಏ೨: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಕೈಗಾರಿಕಾ ಪ್ರದೇಶದ ರಸ್ತೆ ಬದಿಗಳಲ್ಲಿ ಹಲವಾರು ವರ್ಷಗಳಿಂದ ನಿಲ್ಲಿಸಿರುವ ಹಳೆಯ ವಾಹನಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಕೂಡುಮಂಗಳೂರು ಗ್ರಾ‌.ಪಂ ಮಾಜಿ ಸದಸ್ಯ ಕೆ.ಬಿ.ಶಂಶುದ್ಧೀನ್ ಆಗ್ರಹಿಸಿದ್ದಾರೆ.

ಕೈಗಾರಿಕಾ ಪ್ರದೇಶದ ರಸ್ತೆ ಬದಿಗಳಲ್ಲಿ ಲಾರಿ‌, ಬಸ್ಸು ಸೇರಿದಂತೆ ೧೦ ಕ್ಕೂ ಹೆಚ್ಚು ವಾಹನಗಳನ್ನು ನಿಲ್ಲಿಸಲಾಗಿದ್ದು, ಸಂಬಂಧಪಟ್ಟವರು ಕೂಡಲೇ ತೆರವುಗೊಳಿಸಬೇಕು. ಅಪಘಾತಕ್ಕೊಳಗಾದ ಹಾಗೂ‌ ರಿಪೇರಿಯಾದ ವಾಹನಗಳನ್ನು ಸಾಲುಸಾಲಾಗಿ ನಿಲ್ಲಿಸಲಾಗಿದೆ. ಇದರ ಬಗ್ಗೆ ಯಾರೂ ಕೂಡಾ ತಲೆಗೆಡಿಸಿಕೊಳ್ಳುತ್ತಿಲ್ಲ. ಹಳೆಯ ವಾಹನಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಅಲ್ಲದೇ ಗಾಂಜಾ ಹಾಗೂ ಮಧ್ಯ ಸೇವನೆಗೆ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆದ್ದರಿಂದ ಕೂಡಲೇ ಇಂತಹ ವಾಹನಗಳನ್ನು ಸಂಬಂಧಪಟ್ಟ ಮಾಲೀಕರು ತೆರವುಗೊಳಿಸಬೇಕು.

ಇಲ್ಲದಿದ್ದಲ್ಲಿ ಸಂಬಂಧಿಸಿದ ಇಲಾಖೆಯವರು ವಾಹನಗಳನ್ನು ಮುಟ್ಟುಹಾಕುವ ಕೆಲಸಕ್ಕೆ ಮುಂದಾಗಬೇಕು ಎಂದು ಕೆ.ಬಿ.ಶಂಶುದ್ಧೀನ್ ಆಗ್ರಹಿಸಿದ್ದಾರೆ. ರಸ್ತೆ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸಿರುವುದರಿಂದ ಬೀದಿ ದೀಪಗಳ ನಿರ್ವಹಣೆ, ಚರಂಡಿ ಸ್ವಚ್ಚತೆ ಸೇರಿದಂತೆ ಇನ್ನಿತರ ಕೆಲಸಗಳಿಗೆ ಅಡಚಣೆ ಕೂಡಾ ಉಂಟಾಗುತ್ತಿದೆ.‌ ಆದ್ದರಿಂದ ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಈ ಸಂದರ್ಭ ಸ್ಥಳೀಯರಾದ ಶಿವಣ್ಣ, ತಂಬಿ, ರಾಬಿನ್ ಹಾಗೂ ಇನ್ನಿತರರು ಇದ್ದರು.