Kodagu

ಕಟ್ಟಡದ ಹಿಂಭಾಗ ಸಿಲುಕಿದ್ದ ಜಿಂಕೆಯ ರಕ್ಷಣೆ

admincoorgdaily

ಕಟ್ಟಡದ ಹಿಂಭಾಗ ಸಿಲುಕಿದ್ದ ಜಿಂಕೆಯ ರಕ್ಷಣೆ

ಮಡಿಕೇರಿ,ಆ.13 ಆಹಾರ ಅರಸಿಕೊಂಡು ಪಟ್ಟಣಕ್ಕೆ ಬಂದಿದ್ದ ಜಿಂಕೆಯೊಂದನ್ನು ಸೆರೆ ಹಿಡಿದು ಅರಣ್ಯ ಬಿಟ್ಟಿರುವ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ. ಗೋಣಿಕೊಪ್ಪ ಮುಖ್ಯ ರಸ್ತೆಯ ಕಟ್ಟಡ ಒಂದರ ಹಿಂಭಾಗ ಬೆಳಗ್ಗಿನ ಜಾವ ಜಿಂಕೆ ಸಿಲುಕಿಕೊಂಡಿತ್ತು. ಮಾಕುಟ್ಟ ಅಭಯಾರಣ್ಯದಿಂದ ಆಹಾರ ಅರಸಿಕೊಂಡು ಬಂದು ಕಟ್ಟಡದ ಹಿಂದೆ ಸಿಲುಕಿದ್ದ ಜಿಂಕೆಯನ್ನು ಗಮನಿಸಿದ ಕಟ್ಟಡದ ಕಾವಲುಗಾರ ಈ ಕುರಿತು ವಿರಾಜಪೇಟೆ ವೃತ್ತ ನಿರೀಕ್ಷಕ ಅನುಪ್ ಮಾದಪ್ಪ ಅವರಿಗೆ ಮಾಹಿತಿ ನೀಡಿದ್ದರು.

ವಿರಾಜಪೇಟೆ ನಗರ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಅರಣ್ಯ ಇಲಾಖೆಯ ಗಮನಕ್ಕೆ ತಂದರು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ಮೂಲಕ ಜಿಂಕೆಯನ್ನು ಸುರಕ್ಷಿತವಾಗಿ ಸೆರೆಹಿಡಿದರು. ಬಳಿಕ ಚುಕ್ಕಿ ಜಿಂಕೆಯನ್ನು ಮಾಕುಟ್ಟ ಅರಣ್ಯಕ್ಕೆ ಬಿಡಲಾಯಿತು. ಅರಣ್ಯಾಧಿಕಾರಿಗಳಾದ ಶಿವರಾಮ್.ಕೆ.ವಿ, ರಾಘವ ಪಿಜೆ, ಶ್ರೀನಿವಾಸ್, ಲೋಕೇಶ್ ನಂದೀಶ ಎ.ಎಸ್, ಗಸ್ತು ಅರಣ್ಯ ಪಾಲಕರು, ಆರ್‍ಆರ್‍ಟಿ ಹಾಗೂ ಇಟಿಎಫ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.