ಮೂರು ವರ್ಷ ಕೋಣೆಯಲ್ಲಿ ಕೂಡಿ ಹಾಕಿದ ಮನೆಕೆಲಸದವರು; ನಿವೃತ್ತ ರೈಲ್ವೆ ಉದ್ಯೋಗಿ ಮೃತ್ಯು! 

Dec 31, 2025 - 00:47
 0  422
ಮೂರು ವರ್ಷ ಕೋಣೆಯಲ್ಲಿ ಕೂಡಿ ಹಾಕಿದ ಮನೆಕೆಲಸದವರು; ನಿವೃತ್ತ ರೈಲ್ವೆ ಉದ್ಯೋಗಿ ಮೃತ್ಯು! 

ಲಕ್ನೊ: ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಮನೆಕೆಲಸ ಮಾಡುವ ದಂಪತಿ ನಿವೃತ್ತ ರೈಲ್ವೆ ಉದ್ಯೋಗಿ ಮತ್ತು ಅವರ ಮಾನಸಿಕ ಅಸ್ವಸ್ಥ ಮಗಳನ್ನು ಮೂರು ವರ್ಷಗಳ ಕಾಲ ಕೋಣೆಯಲ್ಲಿ ಕೂಡಿ ಹಾಕಿ, ಸಮರ್ಪಕ ಆಹಾರ ಹಾಗೂ ಆರೈಕೆ ನೀಡದೆ ಕಿರುಕುಳ ನೀಡಿದ ಪರಿಣಾಮವಾಗಿ ನಿವೃತ್ತ ಉದ್ಯೋಗಿ ಮೃತಪಟ್ಟಿದ್ದಾರೆ. ಮಗಳು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರನ್ನು ಓಂ ಪ್ರಕಾಶ್ ರಾಥೋಡ್ ಎಂದು ಗುರುತಿಸಲಾಗಿದೆ. ಅವರು ರೈಲ್ವೆ ಇಲಾಖೆಯಲ್ಲಿ ಕ್ಲರ್ಕ್ ಆಗಿ ನಿವೃತ್ತರಾಗಿದ್ದರು. ಸರಿಯಾದ ಆಹಾರ ಹಾಗೂ ಚಿಕಿತ್ಸೆ ದೊರಕದೆ ಸೋಮವಾರ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಪುತ್ರಿ ರಶ್ಮಿ ಅತೀವ ದುರ್ಬಲ ಸ್ಥಿತಿಯಲ್ಲಿ, ಮೈಮೇಲೆ ಬಟ್ಟೆಯಿಲ್ಲದೆ ಪತ್ತೆಯಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿವೃತ್ತಿಯ ನಂತರ ರಾಥೋಡ್ ಅವರು ಮಗಳೊಂದಿಗೆ ಮಹೋಬಾ ನಗರದಲ್ಲಿ ವಾಸವಾಗಿದ್ದರು. ಅವರ ಪತ್ನಿ ಒಂಬತ್ತು ವರ್ಷಗಳ ಹಿಂದೆ ನಿಧನರಾಗಿದ್ದರು. ತಂದೆ–ಮಗಳ ಆರೈಕೆಗೆ ರಾಮ್‌ಪ್ರಕಾಶ್ ಕುಶ್ವಾ ಮತ್ತು ಅವರ ಪತ್ನಿ ರಾಮ್‌ದೇವಿ ಅವರನ್ನು ಮನೆಕೆಲಸಕ್ಕೆ ನೇಮಿಸಲಾಗಿತ್ತು. ಆದರೆ ಆರೋಪದಂತೆ, ದಂಪತಿ ಇಡೀ ಮನೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು, ತಂದೆ–ಮಗಳನ್ನು ಕೋಣೆಯೊಳಗೆ ಬಂಧನದಲ್ಲಿಟ್ಟು, ಸಮರ್ಪಕ ಆಹಾರ ನೀಡದೆ, ಸಂಬಂಧಿಕರನ್ನು ಭೇಟಿಯಾಗಲು ಕೂಡ ಅವಕಾಶ ನೀಡಿರಲಿಲ್ಲ.

ಆಸ್ತಿ ದುರಾಸೆಯೇ ಈ ಕೃತ್ಯಕ್ಕೆ ಕಾರಣವಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0