ರೋಟರಿ ಮಿಸ್ಟಿ ಹಿಲ್ಸ್ ನಿಂದ ಮಹಿಳಾ ಕೇಂದ್ರಿತ ರಕ್ತದಾನ ಶಿಬಿರ; ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಿ - ಡಾ. ರವಿ ಕರುಂಬಯ್ಯ ಮನವಿ

Feb 24, 2026 - 15:26
 0  186
ರೋಟರಿ ಮಿಸ್ಟಿ ಹಿಲ್ಸ್ ನಿಂದ ಮಹಿಳಾ ಕೇಂದ್ರಿತ ರಕ್ತದಾನ ಶಿಬಿರ;    ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಿ - ಡಾ. ರವಿ ಕರುಂಬಯ್ಯ ಮನವಿ

ಮಡಿಕೇರಿ ಫೆ.24 - ಜೀವ ಸಂರಕ್ಷಕವಾದ ರಕ್ತಕ್ಕೆ ಕೊಡಗಿನಲ್ಲಿ ದಿನಾ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸ್ವಯಂಪ್ರೇರಿತರಾಗಿ ಜನರು ರಕ್ತದಾನ ಮಾಡಲು ಮುಂದಾಗಬೇಕಾದ ಅತ್ಯಗತ್ಯವಿದೆ ಎಂದು ಜಿಲ್ಲಾ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ. ರವಿ ಕರುಂಬಯ್ಯ ಕರೆ ನೀಡಿದ್ದಾರೆ.

 ಮಾಸಿಕ 600 ಯೂನಿಟ್ ರಕ್ತದ ಅಗತ್ಯವಿದ್ದು ಇಷ್ಟೊಂದು ರಕ್ತ ಸಂಗ್ರಹವಾಗದ ಹಿನ್ನಲೆಯಲ್ಲಿ ರಕ್ತದ ಕೊರತೆ ಆಸ್ಪತ್ರೆಗಳಲ್ಲಿ ತೀವ್ರವಾಗಿದೆ ಎಂದೂ ಅವರು ಹೇಳಿದ್ದಾರೆ. ನಗರದ ರೋಟರಿ ಸಬಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಮಹಿಳೆಯರಿಗಾಗಿಯೇ ರಕ್ತದಾನ ಶಿಬಿರ ಆಯೋಜನಾ ಕಾಯ೯ಕ್ರಮದಲ್ಲಿ ರಕ್ತದಾನ ತಪ್ಪುಗ್ರಹಿಕೆ ಮತ್ತು ವಾಸ್ತವ ವಿಚಾರದ ಕುರಿತಾಗಿ ಅವರು ಮಾಹಿತಿ ನೀಡಿದರು.

 ಕೆಲವು ವಷ೯ಗಳ ಹಿಂದಿನವರೆಗೆ ಜಿಲ್ಲಾ ರಕ್ತನಿಧಿ ಕೇಂದ್ರಕ್ಕೆ 100 ಯೂನಿಟ್ ರಕ್ತ ಸಾಕಾಗುತ್ತಿತ್ತು, ಆದರೆ ಕೊಡಗು ವೈದ್ಯಕೀಯ ವಿಜ್ಞಾನಗಳ ಮಹಾಸಂಸ್ಥೆಯ ಜಿಲ್ಲಾಸ್ಪತ್ರೆ ವಿಸ್ತಾರಗೊಂಡು ಕೊಡಗು ಮಾತ್ರವಲ್ಲದೇ ಪರಜಿಲ್ಲೆಗಳ ರೋಗಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ದಾಖಲಾಗುತ್ತಿರುವುದರಿಂದಾಗಿ ರಕ್ತಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಹೀಗಾಗಿ ಪ್ರತೀ ತಿಂಗಳು 600 ಯೂನಿಟ್ ರಕ್ತದ ಅಗತ್ಯತೆಯಿದೆ. ವಾರದ ಮೂರು ದಿನಕ್ಕೊಂದು ಶಿಬಿರವನ್ನು ರಕ್ತನಿಧಿ ಕೇಂದ್ರದಿಂದ ಆಯೋಜಿಸಲೇಬೇಕಾದ ಅನಿವಾಯ೯ತೆಯಿದ್ದು ಕಳೆದ ವಷ೯ ಜಿಲ್ಲೆಯಲ್ಲಿ 100 ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.

ಮಹಿಳೆಯರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು. ಪ್ರಸ್ತುತ 100 ರಕ್ದದಾನಿಗಳಲ್ಲಿ ಕೇವಲ 5-6 ಮಹಿಳೆಯರು ಮಾತ್ರ ರಕ್ತನೀಡುತ್ತಿದ್ದಾರೆ. ಈ ಸಂಖ್ಯೆ ಹೆಚ್ಚಾಗಬೇಕೆಂದು ಡಾ. ರವಿಕರುಂಬಯ್ಯ ಮನವಿ ಮಾಡಿದರು. ಮೂಡನಂಬಿಕೆ, ತಪ್ಪುತಿಳುವಳಿಕೆಯನ್ನು ಬದಿಗಿಟ್ಟು ರಕ್ತದಾನ ಮಾಡುವ ಅಗತ್ಯವಿದೆ. ರಕ್ತದಾನ ಮಾಡುವುದರಿಂದ ದೇಹದಲ್ಲಿನ ಹಳೇ ರಕ್ತ ಕಣ್ಮರೆಯಾಗಿ ಹೊಸ ರಕ್ತಕಣಗಳು ಉತ್ಪತ್ತಿಯಾಗಿ ಆರೋಗ್ಯ ಸುಧಾರಣೆಯಾಗುತ್ತದೆ ಎಂದೂ ರವಿಕರುಂಬಯ್ಯ ನುಡಿದರು. ರಕ್ತದಾನ ಶಿಬಿರಗಳು ನಾಮಾಕಾವಸ್ತೆಯ ಬದಲಿಗೆ ಹೆಚ್ಚಿನ ರಕ್ತಸಂಗ್ರಹಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಬೇಕೆಂದೂ ಅವರು ಹೇಳಿದರು.

ಮಹಿಳಾ ಕೇಂದ್ರೀತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ನಗರಸಭೆಯ ಅಧ್ಯಕ್ಷೆ ಕಲಾವತಿ ಮಾತನಾಡಿ, ಮಹಿಳೆಯರಿಗಾಗಿಯೇ ರಕ್ತದಾನ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದರು. ರೋಟರಿ ಜಿಲ್ಲಾ ಯೋಜನೆಗಳ ಸಮಿತಿ ನಿದೇ೯ಶಕ ರತನ್ ತಮ್ಮಯ್ಯ ಮಾತನಾಡಿ, ಇಂಥ ಶಿಬಿರಗಳು ಮಹಿಳೆಯರು ರಕ್ತದಾನ ಮಾಡುವ ನಿಟ್ಟಿನಲ್ಲಿ ಪ್ರೇರಣೆಯಾಗುತ್ತದ ಎಂದರಲ್ಲದೇ, ಪುರುಷರಷ್ಟೇ ಸಂಖ್ಯೆಯಲ್ಲಿ ಮಹಿಳೆಯರೂ ಭವಿಷ್ಯದಲ್ಲಿ ರಕ್ತದಾನ ಮಾಡಬೇಕು.

ಈ ಶಿಬಿರ ಮಹಿಳೆಯರಲ್ಲಿ ರಕ್ತದಾನದ ಜಾಗ್ರತಿ ಮೂಡಿಸುವಂತಾಗಲಿ ಎಂದು ಹಾರೈಸಿದರು. ರೋಟರಿ ವಲಯ 6 ರ ಸಹಾಯಕ ಗವನ೯ರ್ ಧಿಲನ್ ಚಂಗಪ್ಪ ಮಾತನಾಡಿ, ರೋಟರಿ ಜಿಲ್ಲೆ 3181 ರ 10 ಯೋಜನೆಗಳ ಪೈಕಿ ರಕ್ತದಾನ ಶಿಬಿರವೂ ಮುಖ್ಯವಾಗಿದ್ದು, ಮಹಿಳೆಯರ ಆರೋಗ್ಯ ಸಂರಕ್ಷಣೆ ನಿಟ್ಟಿನಲ್ಲಿ ರೋಟರಿಯು ವಿವಿಧ ಯೋಜನೆ ಹಮ್ಮಿಕೊಂಡಿದೆ ಎಂದರು.

ರೋಟರಿ ಮಿಸ್ಟಿ ಹಿಲ್ಸ್ ನ ರಕ್ತದಾನ ಶಿಬಿರದ ಸಂಚಾಲಕಿ ರಶ್ಮಿದೀಪಾ ಮಾತನಾಡಿ, ಮಹಿಳೆಯರು ರಕ್ತದಾನ ಮಾಡುವಂತಿಲ್ಲ ಎಂಬ ತಪ್ಪು ಕಲ್ಪನೆಯಿದೆ. ಇಂಥ ತಪ್ಪು ಕಲ್ಪನೆ ಹೋಗಲಾಡಿಸಿ ವಾಸ್ತವತೆಯನ್ನು ಮನದಟ್ಟು ಮಾಡಲು ಈ ಶಿಬಿರ ಆಯೋಜಿಸಲಾಗಿದೆ. 22 ಮಹಿಳೆಯರು ರಕ್ತದಾನ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದರು. ರಕ್ತವನ್ನು ಕೖತಕವಾಗಿ ಉತ್ಪಾದಿಸಲು ಅಸಾಧ್ಯವಾದ ಹಿನ್ನಲೆಯಲ್ಲಿ ರಕ್ತ ಅಗತ್ಯವುಳ್ಳವರಿಗೆ ಮತ್ತೋವ೯ರು ರಕ್ತನೀಡಿ ಅವರ ಜೀವ ಉಳಿಸುವ ಶ್ರೇಷ್ಟ ಕಾಯ೯ಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.

ರೋಟರಿ ವಲಯ ಸೇನಾನಿ ಕಾಯ೯ಪ್ಪ ಶಿಬಿರದ ಅಗತ್ಯತೆ ಬಗ್ಗೆ ಮಾತನಾಡಿದರು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಸ್ವಾಗತಿಸಿ, ಕಾಯ೯ದಶಿ೯ ಬಿ.ಕೆ. ಕಾಯ೯ಪ್ಪ ವಂದಿಸಿದ ಕಾಯ೯ಕ್ರಮವನ್ನು ಮಿಸ್ಟಿ ಹಿಲ್ಸ್ ನಿದೇ೯ಶಕ ಅನಿಲ್ ಹೆಚ್.ಟಿ. ನಿರೂಪಿಸಿದರು.

ಮಡಿಕೇರಿ ಇನ್ನರ್ ವೀಲ್ ಕಾಯ೯ದಶಿ೯ ನಮಿತಾ ರೈ, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಕೊಡಗು ಸಂಚಾಲಕ ಅಂಕಾಚಾರಿ ವೇದಿಕೆಯಲ್ಲಿದ್ದರು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್, ಕೊಡಗು ರೆಡ್ ಕ್ರಾಸ್, ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಕಾಲೇಜು , ಇನ್ನರ್ ವೀಲ್ ಸಂಸ್ಥೆಗಳು ಈ ಮಹಿಳಾ ಕೇಂದ್ರಿತ ರಕ್ತದಾನ ಶಿಬಿರಕ್ಕೆ ಸಹಯೋಗ ನೀಡಿದ್ದವು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0