ಕೋರ್ಟ್ ಗೆ ಹಾಜರಾಗಲು ಗ್ರಾಮಕ್ಕೆ ಬಂದಿದ್ದ ರೌಡಿಶೀಟರ್ ಹತ್ಯೆ

Dec 1, 2025 - 09:48
 0  1.4k
ಕೋರ್ಟ್ ಗೆ ಹಾಜರಾಗಲು ಗ್ರಾಮಕ್ಕೆ ಬಂದಿದ್ದ ರೌಡಿಶೀಟರ್ ಹತ್ಯೆ
Photo credit: Etv bharath

ಮಂಡ್ಯ: ಪಾಂಡವಪುರ ತಾಲೂಕಿನ ಅಮೃತಿ ಗ್ರಾಮದಲ್ಲಿ ಶನಿವಾರ ಮಧ್ಯರಾತ್ರಿ ರೌಡಿಶೀಟರ್‌ವೊಬ್ಬನನ್ನು ಹಳೆಯ ದ್ವೇಷದ ಹಿನ್ನಲೆಯಲ್ಲಿ ಸ್ನೇಹಿತರೇ ಸೇರಿ ಕೊಚ್ಚಿ ಹತ್ಯೆ ಮಾಡಿದ ಘಟನೆ ನಡೆದಿದೆ. ಲಕ್ಷ್ಮೀಸಾಗರ ಗ್ರಾಮದ ಮಹೇಶ್ (40) ಕೊಲೆಯಾಗಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ.

ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಮಹೇಶ್‌ ನನ್ನು ಮೇಲುಕೋಟೆ ಠಾಣೆಯಲ್ಲಿ ರೌಡಿಶೀಟರ್ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಗಡೀಪಾರು ಮಾಡಲು ಸಹ ಪೊಲೀಸರು ಯೋಚಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಮಹೇಶ್‌ ಬೆಂಗಳೂರು ನಗರದಲ್ಲಿ ಆಟೋ ಚಾಲನೆ ಮಾಡುತ್ತಾ ಜೀವನ ನಡೆಸುತ್ತಿದ್ದನು. ಕೋರ್ಟ್ ಹಾಜರಿಗಾಗಿ ಎರಡು ದಿನಗಳ ಹಿಂದೆ ಸ್ವಗ್ರಾಮಕ್ಕೆ ಬಂದಿದ್ದ ಎಂದು ತಿಳಿದು ಬಂದಿದೆ.

ಶನಿವಾರ ರಾತ್ರಿ ಜಕ್ಕನಹಳ್ಳಿಯಲ್ಲಿರುವ ಬಾರ್‌ನಲ್ಲಿ ಸ್ನೇಹಿತರಾದ ಮರಿಗೌಡ ಹಾಗೂ ಕಿರಣ್ ಜೊತೆಗೆ ಮದ್ಯಪಾನ ಮಾಡಿದ ಬಳಿಕ ಮೂವರೂ ಒಂದೇ ಬೈಕಿನಲ್ಲಿ ಮನೆ ಕಡೆ ಹೊರಟಿದ್ದರು. ಮಧ್ಯರಾತ್ರಿ 12.30ರ ಹೊತ್ತಿಗೆ ಕಾರಿನಲ್ಲಿ ಬಂದ ನಾಲ್ವರು ಏಕಾಏಕಿ ಬೈಕ್‌ ಅನ್ನು ಅಡ್ಡಗಟ್ಟಿ ಲಾಂಗ್ ಹಿಡಿದು ಮಹೇಶ್ ಮೇಲೆ ದಾಳಿ ನಡೆಸಿ ಸ್ಥಳದಲ್ಲೇ ಕೊಲೆಮಾಡಿದ್ದಾರೆ ಎನ್ನಲಾಗಿದೆ.

ಹತ್ಯೆಯಲ್ಲಿ ಭೀಮ, ರೋಹಿತ್, ಕೇಶವ ಮತ್ತು ಸಿದ್ದರಾಜು ಎಂಬವರು ಶಂಕಿತರು ಎಂದು ಪೊಲೀಸರು ತಿಳಿಸಿದ್ದಾರೆ. ಮಹೇಶ್ ಹಾಗೂ ಈ ನಾಲ್ವರ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿದ್ದು, ವೈಷಮ್ಯ ದಿನೇದಿನೇ ಗಾಢವಾಗಿತ್ತು ಎನ್ನಲಾಗಿದೆ. ಪ್ರತೀಕಾರದ ಕಿಡಿ ಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಶೋಧ ತೀವ್ರವಾಗಿದೆ.

What's Your Reaction?

Like Like 0
Dislike Dislike 1
Love Love 1
Funny Funny 0
Angry Angry 1
Sad Sad 1
Wow Wow 0