ಓಂಕಾರೇಶ್ವರ ಸಮುಚ್ಛಯ ದೇವಾಲಯಗಳ ಅಭಿವೃದ್ಧಿಗೆ ರೂ. ಕೋಟಿ ರೂ ಅನುದಾನ; ಶಾಸಕ ಡಾ.ಮಂತರ್ ಗೌಡ ಭರವಸೆ
ಮಡಿಕೇರಿ, ಏ. 1: ಓಂಕಾರೇಶ್ವರ ವ್ಯವಸ್ಥಾಪನಾ ಸಮಿತಿಯ ಉಸ್ತುವಾರಿಯಲ್ಲಿರುವ ಶ್ರೀ ಓಂಕಾರೇಶ್ವರ, ಶ್ರೀ ಆಂಜನೇಯ ಹಾಗೂ ಶ್ರೀ ಕೋಟೆ ಮಹಾಗಣಪತಿ ದೇವಾಲಯಗಳ ಅಭಿವೃದ್ಧಿಗೆ ಹಾಗೂ ಇತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಸಲುವಾಗಿ ಒಟ್ಟು ರೂ ೧ ಕೋಟಿ ಅನುದಾನವನ್ನು ಸರಕಾರದಿಂದ ಒದಗಿಸುವುದಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಭರವಸೆಯಿತ್ತಿದ್ದಾರೆ.
ಮಡಿಕೇರಿಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ ಹಾಗೂ ಸದಸ್ಯರುಗಳಾದ ಅಂಬೆಕಲ್ ಕುಶಾಲಪ್ಪ , ಪ್ರಕಾಶ್ ಆಚಾರ್ಯ ಮತ್ತು ಜಿ. ರಾಜೇಂದ್ರ ಇವರುಗಳು ಮಾಡಿದ ಮನವಿಗೆ ಸ್ಪಂದಿಸಿದ ಶಾಸಕರು ಈ ಭರವಸೆ ನೀಡಿದರು.
ಸರಕಾರದಿಂದ ತನಗೆ ಶಾಸಕರ ಅನುದಾನ ದೊರಕುವ ಮೂಲದಿಂದ ರೂ. 50 ಲಕ್ಷ ಹಾಗೂ ಮುಜರಾಯಿ ಇಲಾಖೆಯಿಂದ ಸಚಿವ ರಾಮಲಿಂಗಾ ರೆಡ್ಡಿ ಅವರ ಮೂಲಕ ರೂ. 50 ಲಕ್ಷ - ಹೀಗೆ ಒಟ್ಟು ರೂ. 1 ಕೋಟಿ ಒದಗಿಸುವುದಾಗಿ ಅವರು ಭರವಸೆಯಿತ್ತಿದ್ದಾರೆ. ಈಗಾಗಲೇ ಸಮಿತಿಯಿಂದ ಸುಮಾರು ರೂ. 36 ಲಕ್ಷದ ಅಭಿವೃದ್ಧಿ ಯೋಜನೆಯನ್ನು ಆಂಜನೇಯ ದೇವಾಲಯ ಆವರಣದಲ್ಲಿ ಕೈಗೊಂಡು ಅದು ಮುಕ್ತಾಯ ಹಂತದಲ್ಲಿದೆ.
ದೇವಾಲಯ ಸುತ್ತಲೂ ನೆಲ ಹಾಸು ಹಾಗೂ ಛಾವಣಿಯನ್ನು ನಿರ್ಮಿಸಲಾಗಿದೆ. ಆಂಜನೇಯ ದೇವಾಲಯದ ಹೊರ ಆವರಣವನ್ನು ವಿಸ್ತರಿಸಲಾಗಿದೆ. ಅಲ್ಲದೆ ದೇವಾಲಯ ಆವರಣದಲ್ಲಿ ನೂತನವಾಗಿ ನವಗ್ರಹಗಳನ್ನು ಪ್ರತಿಷ್ಠಾಪಿಸಲು ಕಾರ್ಯೋನ್ಮುಖವಾಗಿರುವುದಾಗಿ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ ತಿಳಿಸಿದ್ದಾರೆ. ಈಗಾಗಲೇ ನವಗ್ರಹ ಮೂರ್ತಿಗಳನ್ನು ಶಿಲ್ಪಿಗಳಿಂದ ನಿರ್ಮಿಸಿ ತರಿಸಲಾಗಿದ್ದು. ಏಪ್ರಿಲ್ 25 ರಂದು ಕ್ಷೇತ್ರ ತಂತ್ರಿಯವರಾದ ನೀಲೇಶ್ವರ ಶ್ರೀ ಪದ್ಮನಾಭ ತಂತ್ರ‍್ರಿಯವರು ಆಂಜನೇಯ ದೇಗುಲದ ಆವರಣದಲ್ಲಿ ಪ್ರತಿಷ್ಠಾಪನಾ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ.
ಈ ಸಮುಚ್ಛಯ ದೇವಾಲಯಗಳ ಅಭಿವೃದ್ಧಿಗೆ ಒಟ್ಟು ರೂ. 5 ಕೋಟಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು ಈ ಪೈಕಿ ಸರಕಾರದ ಮೂಲಕ ರೂ. 1 ಕೋಟಿಯನ್ನು ಶಾಸಕರು ಒದಗಿಸುವ ಭರವಸೆ ನೀಡಿದ್ದಾರೆ. ಇನ್ನುಳಿದಂತೆ ಕೈಗೊಳ್ಳಬೇಕಾದ ಬೃಹತ್ ಯೋಜನೆಗಳಿಗಾಗಿ ಕೊಡಗಿನ ಉದಾರ ದಾನಿಗಳಿಂದಲೂ ಹಣ ಸಂಗ್ರಹಿಸಲು ಸಹಕಾರ ಕೋರಲಾಗಿದೆ.
ಈ ಯೋಜನೆಗಳೆಂದರೆ, ದೇವಾಲಯಗಳ ಮುಂಭಾಗ ಮಹಾದ್ವಾರ ನಿರ್ಮಾಣ, ಓಂಕಾರೇಶ್ವರ ದೇವಾಲಯ ಒಳ ಆವರಣದಲ್ಲಿರುವ ಪೌಳಿಗಳ ದುರಸ್ತಿ, ಹೊರ ಆವರಣದಲ್ಲಿರುವ ಕಲ್ಯಾಣಿ ಕೆರೆ ದುರಸ್ತಿ ಮತ್ತು ನೂತನ ಗ್ರಿಲ್ ಅಳವಡಿಕೆ, ದೇವಾಲಯ ಹೊರ ಆವರಣದ ಸುತ್ತಲೂ ಕಲ್ಲಿನ ಹಾಸು ಅಳವಡಿಕೆ, ಓಂಕಾರ ಸದನದ ದ್ವಿತೀಯ ಅಂತಸ್ತು ನಿರ್ಮಾಣ, ಸಿಬ್ಬಂದಿಗಳಿಗೆ ವಾಸಿಸಲು ಅತ್ಯಗತ್ಯವಾದ ವಸತಿ ಗೃಹ ನಿರ್ಮಾಣ ಮೊದಲಾದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
ಅಲ್ಲದೆ, ಮಡಿಕೇರಿಯ ಐತಿಹಾಸಿಕ ಕೋಟೆ ಗಣಪತಿ ದೇವಾಲಯಕ್ಕೆ ನೂತನ ಮೇಲ್ಛಾವಣಿ ನಿರ್ಮಿಸಲು ಹಾಗೂ ನೆಲ ಭಾಗಕ್ಕೆ ಇಂಟರ್ ಲಾಕ್ ಅಳವಡಿಸಲು ಯೋಜಿಸಿದ್ದು ಈ ದೇವಾಲಯದ ಪರಿಧಿಯು ವಾಸ್ತು ಪುರಾತತ್ವ ಇಲಾಖೆಗೆ ಒಳಪಡುವುದರಿಂದ ಕಾರ್ಯ ನಿರ್ವಹಿಸಲು ಇಲಾಖೆಯಿಂದ ಅನುಮತಿ ಕೋರಲಾಗಿದೆ ಎಂದು ಅಧ್ಯಕ್ಷ ಚುಮ್ಮಿ ದೇವಯ್ಯ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.