ಸಿದ್ದಾಪುರದಲ್ಲಿ ಎಸ್‌.ಎನ್‌.ಡಿ.ಪಿ. ವನಿತಾ ಸಮಾವೇಶ

ಸಿದ್ದಾಪುರದಲ್ಲಿ ಎಸ್‌.ಎನ್‌.ಡಿ.ಪಿ. ವನಿತಾ ಸಮಾವೇಶ

ಸಿದ್ದಾಪುರದಲ್ಲಿ ಎಸ್‌.ಎನ್‌.ಡಿ.ಪಿ. ವನಿತಾ ಸಮಾವೇಶ ಸಿದ್ದಾಪುರ:- ಎಸ್‌.ಎನ್‌.ಡಿ.ಪಿ. ಕೊಡಗು ಯೂನಿಯನ್ ವತಿಯಿಂದ ವನಿತಾ ಸಮಾವೇಶವನ್ನು ಸಿದ್ದಾಪುರದ ಎಸ್‌ಎನ್‌ಡಿಪಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಮೈಸೂರು ಕೊಡಗು ಲೋಕಸಭಾ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಭಾರತೀಯ ಪಾರಂಪರಿಕ ಸಂಸ್ಕೃತಿ ಮತ್ತು ಸಮಾಜವನ್ನು ರಕ್ಷಿಸುವ ಮೂಲ ತತ್ವಗಳನ್ನು ಸಂಘಟನೆಗಳು ಉಳಿಸಿ ಬೆಳೆಸಬೇಕು ಎಂದು ಹೇಳಿದರು.

ಇಂತಹ ಸಮಾವೇಶಗಳು ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಾಗೂ ಅವರ ಸಾಧನೆಗಳನ್ನು ಗುರುತಿಸಲು ಮಹತ್ವದ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ ಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ಸಂಘಟನೆ ಮೂಲಕ ಶಕ್ತರಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದರು.

 ಪ್ರಸ್ತಾವಿಕವಾಗಿ ಮಾತನಾಡಿದ ಎಸ್‌.ಎನ್‌.ಡಿ.ಪಿ. ಕೊಡಗು ಯೂನಿಯನ್ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್, ವನಿತಾರನ್ನು ಒಗ್ಗೂಡಿಸಿ ಅವರಿಗೆ ಬಲ ತುಂಬುವ ಉದ್ದೇಶದಿಂದ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಸಂಘಟನೆಯಲ್ಲಿ ಒಟ್ಟು 18 ಸಾವಿರ ಸದಸ್ಯರಿದ್ದು, ಅದರಲ್ಲಿ 9 ಸಾವಿರ ಮಹಿಳೆಯರು ಸೇರಿದ್ದಾರೆ ಎಂದರು.

ಸಂಘಟನೆಯು ಪ್ರತಿವರ್ಷ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಸದಸ್ಯತ್ವ ಪಡೆದ ಕೊಡಗಿನ 48 ಮಾಜಿ ಸೈನಿಕರು ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದ 108 ಸದಸ್ಯರನ್ನು ಗುರುತಿಸಿ ಸನ್ಮಾನಿಸಲಾಗಿದೆ ಎಂದು ಹೇಳಿದರು. ಜೊತೆಗೆ 50 ವರ್ಷಕ್ಕಿಂತ ಮೇಲ್ಪಟ್ಟ ದಾಂಪತ್ಯ ಜೀವನ ನಡೆಸುತಿರವು ದಂಪತಿಗಳನ್ನು ಗೌರವಿಸಲಾಗಿದ್ದು, ಆರೋಗ್ಯ ಮತ್ತು ರಕ್ತದಾನ ಶಿಬಿರಗಳನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

 ಈ ಸಂದರ್ಭದಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಭಾಗಗಳ ಮಹಿಳಾ ನಾಯಕರನ್ನು ಆಯ್ಕೆ ಮಾಡುವ ಕಾರ್ಯಕ್ರಮವೂ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೀಶಾ ಸುರೇಂದ್ರನ್ ವಹಿಸಿದ್ದರು.

 ಉಪಾಧ್ಯಕ್ಷರಾಗಿ ಆರ್ ರಾಜನ್, ಕಾರ್ಯದರ್ಶಿಯಾಗಿ ಪ್ರೇಮಾನಂದ ಹಾಗೂ ನಿರ್ದೇಶಕರಾಗಿ ಮೋಹನ್ ದಾಸ್ ಮತ್ತು ಶಂಕರನಾರಾಯಣ ಪಾಲ್ಗೊಂಡರು. ಪ್ರಮುಖರಾದ ಸಜೀವ, ರಾಜಶೇಖರ್, ಗಿರೀಶ್, ಮೋಹನ್ ದಾಸ್ ಪಾಪಯ್ಯ, ನಾರಾಯಣ ಸೇರಿದಂತೆ ಎಸ್‌.ಎನ್‌.ಡಿ.ಪಿ. ಕೊಡಗು ಯೂನಿಯನ್ ವನಿತಾ ಯೂನಿಯನ್ ಸದಸ್ಯರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.

 ಸಮಾವೇಶಕ್ಕೂ ಮುನ್ನ ಸಿದ್ದಾಪುರ ಬಸ್ ನಿಲ್ದಾಣದಿಂದ ಎಸ್ ಎನ್ ಡಿ ಪಿ ಸಭಾಂಗಣದವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡ ಮಹಿಳೆಯರು ಸಂಸದರಾದ ಯದುವೀರ್ ಒಡೆಯರ್ ಅವರನ್ನು ಸ್ವಾಗತಿಸಿ ಚಂಡೆ ವಾದ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು