ಕೂಡಿಗೆ ಡಯಟ್ ನಲ್ಲಿ ಶಿಕ್ಷಕ ವಿಕ್ರಾಂತ್ ಕೇಳ್ಕರ್ ರಚಿಸಿರುವ ಎಸ್.ಎಸ್.ಎಲ್.ಸಿ ಇಂಗ್ಲೀಷ್ ಕಲಿಕಾ ಪುಸ್ತಕ ಬಿಡುಗಡೆ
ಕುಶಾಲನಗರ, ಜ.28 : ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ (ಐಸಿಟಿ: ಇನಫರ್ಮೇಶನ್ ಅಂಡ್ ಕಮ್ಮೂನಿಕೇಶನ್ : Information and communication technology) ) ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರೂ ಆದ ಸೋಮವಾರಪೇಟೆ ತಾಲ್ಲೂಕು ಹಂಡ್ಲಿ ಸರ್ಕಾರಿ ಪ್ರೌಢಶಾಲೆಯ ಇಂಗ್ಲೀಷ್ ಭಾಷಾ ಶಿಕ್ಷಕ ವಿಕ್ರಾಂತ್ ಕೇಳ್ಕರ್ ಅವರು ಎಸ್ಸೆಸ್ಸೆಲ್ಸಿ ಇಂಗ್ಲೀಷ್ ಪರೀಕ್ಷೆಯ ಫಲಿತಾಂಶ ಅಭಿವೃದ್ಧಿಗಾಗಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಸರಳ ವಿಧಾನದಲ್ಲಿ ಸಿದ್ಧಪಡಿಸಿರುವ *ಇ- ಮೇಜಿನೇಟೆಡ್ ಲೆಸನ್ಸ್ ( I-mage-nated lessons* - *ಎಸ್ಸೆಸ್ಸೆಲ್ಸಿ ಇಂಗ್ಲೀಷ್ ಪಾಠಗಳು ನನ್ನ ಕಲ್ಪನೆಯಂತೆ*) ಎಂಬ ಆಂಗ್ಲಭಾಷಾ ಕಲಿಕಾ ಪುಸ್ತಕವನ್ನು ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ( ಡಯಟ್ ) ಯಲ್ಲಿ ಬುಧವಾರ ( ಜ.28 ರಂದು ) ಡಯಟ್ ಸಂಸ್ಥೆಯ ಪ್ರಾಂಶುಪಾಲರೂ ಆದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ( ಅಭಿವೃದ್ಧಿ ) ರಾಮಚಂದ್ರರಾಜೇ ಅರಸ್ ಬಿಡುಗಡೆಗೊಳಿಸಿದರು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಡಯಟ್ ಸಂಸ್ಥೆಯ ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್ , ಗ್ರಾಮಾಂತರ ಪ್ರದೇಶ ಹಾಗೂ ಕನ್ನಡ ಮಾಧ್ಯಮದ ಕೆಲವು ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆ ಎನಿಸಿರುವ ಇಂಗ್ಲೀಷ್ ಭಾಷಾ ಕಲಿಕೆಯನ್ನು ಹಿಂದುಳಿದ ವಿದ್ಯಾರ್ಥಿಯ ಕಲಿಕೆಯನ್ನು ಉತ್ತಮಪಡಿಸಲು ಹಂಡ್ಲಿ ಸರ್ಕಾರಿ ಪ್ರೌಢಶಾಲೆಯ ಇಂಗ್ಲೀಷ್ ಭಾಷಾ ಶಿಕ್ಷಕರಾದ ವಿಕ್ರಾಂತ್ ಕೇಳ್ಕರ್ ರವರು ಸಿದ್ಧಪಡಿಸಿರುವ ಈ ಪುಸ್ತಕವು ಕಲಿಕೆಯಲ್ಲಿ ಹಿಂದುಳಿದ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷಾ ಕಲಿಕೆಯಲ್ಲಿ ಆಗುತ್ತಿರುವ ಕ್ಲಿಷ್ಟತೆ ನಿವಾರಿಸಲು ಪಾಠಗಳು ಸುಲಭವಾಗಿ ಅರ್ಥವಾಗುವಂತೆ ಮಾಡಲು ಸಹಕಾರಿಯಾಗಿದೆ ಎಂದರು.
ಇಂಗ್ಲೀಷ್ ಭಾಷೆಯು ಕಬ್ಬಿಣದ ಕಡಲೆಯಲ್ಲ, ಇದು ಕೂಡ ಸರಳ ಕಲಿಕೆ ಎಂಬ ಮನೋಭಾವವನ್ನು ಮಕ್ಕಳಲ್ಲಿ ಪ್ರೇರೇಪಿಸಬೇಕು. ಇಂಗ್ಲೀಷ್ ಭಾಷೆಯನ್ನು ಸುಲಭ ಕಲಿಕೆ ಜೊತೆಗೆ, ಚಿತ್ರಗಳನ್ನು ವೀಕ್ಷಿಸುವ ಮೂಲಕ ಓದಿದ ಅಂಶಗಳನ್ನು ಹೆಚ್ಚು ಕಾಲ ನೆನಪಿಟ್ಟುಕೊಳ್ಳುವಲ್ಲಿಯೂ ಈ ಪುಸ್ತಕ ಮಹತ್ವದ ಕೆಲಸ ಮಾಡುತ್ತದೆ.
ಈ ಮೂಲಕ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆಯುವಲ್ಲಿಯೂ ಇದು ಬಹಳ ಸಹಕರಿಯಾಗಲಿದೆ ಎಂದರು. ನಿಧಾನಗತಿ ಕಲಿಕೆ ಇರುವ ವಿದ್ಯಾರ್ಥಿಗಳಿಗಂತೂ ಈ ಕೈಪಿಡಿಯು ದೊಡ್ಡ ವರದಾನವಾಗಲಿದೆ. ಶಿಕ್ಷಕರು ಬೋಧನೆ ಮಾಡುವಾಗಲೂ ಇದನ್ನು ಪೂರಕ ಸಂಪನ್ಮೂಲದಂತೆ ಬಳಸಿಕೊಂಡು ಇಂಗ್ಲೀಷ್ ಅನ್ನು ಸರಳವಾಗಿ ಕಲಿಸಿ ಮಕ್ಕಳಿಗೆ ಪಾಠ ಮಾಡಬಹುದಾಗಿದೆ. ವರ್ಣ ಚಿತ್ರಗಳ ಮೂಲಕ ಒಂದು ಸುಂದರ, ಆಕರ್ಷಕ ಮತ್ತು ಪ್ರಭಾವಶಾಲಿ ಪುಸ್ತಕವನ್ನು ಹೊರ ತಂದಿರುವುದು ಹೆಮ್ಮೆಯ ಸಂಗತಿ ಎಂದು ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್ ಹೇಳಿದರು.
ಪಠ್ಯಪುಸ್ತಕವನ್ನು ಚೆನ್ನಾಗಿ ಅಭ್ಯಾಸ ಮಾಡಿದರೆ ಹಾಗೂ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ವಿಶ್ಲೇಷಣಾತ್ಮಕವಾಗಿ ತಿಳಿದುಕೊಂಡಿದ್ದರೆ ವಿದ್ಯಾರ್ಥಿಗಳು ಇಂಗ್ಲೀಷ್ ವಿಷಯದಲ್ಲೂ ಗರಿಷ್ಠ ಅಂಕಗಳನ್ನು ಗಳಿಸಬಹುದು’ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಮಾತನಾಡಿ, ಸಂಪನ್ಮೂಲ ಶಿಕ್ಷಕ ವಿಕ್ರಾಂತ್ ಅವರು ತಮ್ಮ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳನ್ನು ಬಳಸಿಕೊಂಡು ಮಕ್ಕಳಿಗೆ ಇಂಗ್ಲೀಷ್ ಭಾಷೆಯನ್ನು ಸರಳವಾಗಿ ಕಲಿಯುವಂತೆ ತಯಾರಿಸಿರುವ ಈ ಕಲಿಕಾ ಕೈಪಿಡಿಯು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಸಹಕಾರಿಯಾಗಿದೆ. ಶಾಲಾ ಶಿಕ್ಷಕರು ಮಕ್ಕಳ ಕಲಿಕೆಗೆ ಈ ಕೈಪಿಡಿಯನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಪುಸ್ತಕ ರಚಿಸಿದ ಶಿಕ್ಷಕ ವಿಕ್ರಾಂತ್ ಕೇಳ್ಕರ್ ಮಾತನಾಡಿ, ತಾವು ಇಂಗ್ಲೀಷ್ ಬೋಧನೆಯ ಸಂದರ್ಭದಲ್ಲಿ ಮಕ್ಕಳು ಕಲಿಕೆಯಲ್ಲಿ ನಿಧಾನಗತಿಯಲ್ಲಿದ್ದುದನ್ನು ಗಮನಿಸಿ ಇಂತಹ ಮಕ್ಕಳು ಇಂಗ್ಲೀಷ್ ಭಾಷೆಯನ್ನು ಸರಳವಾಗಿ ಕಲಿತು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಆತ್ಮವಿಶ್ವಾಸ ಬೆಳೆಸುವ ದಿಸೆಯಲ್ಲಿ ವಿದ್ಯಾರ್ಥಿ ಕೇಂದ್ರೀತ ಪುಸ್ತಕವನ್ನು ಹೊರತರಲಾಗಿದೆ. ಈ ಪುಸ್ತಕವನ್ನು ಬಿಡುಗಡೆಗೊಳಿಸಲು ಡಯಟ್ ಸಂಸ್ಥೆಯಲ್ಲಿ ಅವಕಾಶ ಕಲ್ಪಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಎನ್.ವಿ.ಸ್ವಾಮಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ ಸದಾಶಿವಯ್ಯ ಎಸ್.ಪಲ್ಲೇದ್, ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್.ರತ್ನಕುಮಾರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಶಿಕ್ಷಕರ ಸಂಘಟನೆಯ ಪ್ರಮುಖರಾದ ಪೊನ್ನಚ್ಚನ ಶ್ರೀನಿವಾಸ್, ಯಶವಂತ್, ಪೂರ್ಣೇಶ್, ನಿವೃತ್ತ ಚಿತ್ರಕಲಾ ಶಿಕ್ಷಕ ಉ.ರಾ.ನಾಗೇಶ್, ಜಿಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಸರ್ಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರು ಪಾಲ್ಗೊಂಡಿದರು.