ಸೈನಿಕ ಶಾಲೆ ಕೊಡಗಿನ ಎನ್‌ಸಿಸಿ ಘಟಕದ ವತಿಯಿಂದ ಹಾರಂಗಿ ಜಲಾಶಯದ ಆವರಣದಲ್ಲಿ ಸ್ವಚ್ಛತಾ ಅಭಿಯಾನ

Nov 23, 2025 - 16:16
 0  242
ಸೈನಿಕ ಶಾಲೆ ಕೊಡಗಿನ ಎನ್‌ಸಿಸಿ ಘಟಕದ ವತಿಯಿಂದ ಹಾರಂಗಿ ಜಲಾಶಯದ ಆವರಣದಲ್ಲಿ ಸ್ವಚ್ಛತಾ ಅಭಿಯಾನ

ಕುಶಾಲನಗರ, ನ 23: ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ದಿನಾಚರಣೆಯ ಪ್ರಯುಕ್ತ, ಸೈನಿಕ ಶಾಲೆ ಕೊಡಗಿನ ಎನ್‌ಸಿಸಿ ಘಟಕವು ಕುಶಾಲನಗರದ ಸಮೀಪವಿರುವ ಹಾರಂಗಿ ಜಲಾಶಯದ ಆವರಣದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನವನ್ನು ಯಶಸ್ವಿಯಾಗಿ ಆಯೋಜಿಸಿತು.

 ಪರಿಸರ ಸಂರಕ್ಷಣೆ ಮತ್ತು ಜಲಾಶಯದ ಅಂದವನ್ನು ಹೆಚ್ಚಿಸುವ ಗುರಿಯೊಂದಿಗೆ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಸಾರ್ವಜನಿಕರಿಗೆ ಮಾದರಿಯಾದರು. ಪ್ರಸ್ತುತ ಅಭಿಯಾನದಲ್ಲಿ ಶಾಲೆಯ ಒಟ್ಟು 171 ಎನ್‌ಸಿಸಿ ವಿದ್ಯಾರ್ಥಿಗಳು ಮತ್ತು ಐವರು ಎನ್‌ಸಿಸಿ ಅಧಿಕಾರಿಗಳು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

 ಬೆಳಗಿನಿಂದಲೇ ಜಲಾಶಯದ ಆವರಣದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ಪ್ರವಾಸಿಗರ ಭೇಟಿಯಿಂದ ಸಂಗ್ರಹವಾಗಿದ್ದ ಎಲ್ಲ ರೀತಿಯ ತ್ಯಾಜ್ಯ ವಸ್ತುಗಳನ್ನು ಸ್ವಚ್ಛಗೊಳಿಸಿದರು. ಈ ಸಂದರ್ಭದಲ್ಲಿ ಹಾರಂಗಿ ಜಲಾಶಯ ಪ್ರದೇಶದಲ್ಲಿ ದೀರ್ಘಕಾಲದಿಂದ ಸಂಗ್ರಹವಾಗಿದ್ದ ಪ್ಲಾಸ್ಟಿಕ್ ಬಾಟಲಿಗಳು, ಪಾಲಿಥಿನ್ ಚೀಲಗಳು, ಕಾಗದ ಮತ್ತು ಇತರೆ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಲಾಯಿತು.

ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳು ವೈಜ್ಞಾನಿಕ ಕ್ರಮದಲ್ಲಿ ತ್ಯಾಜ್ಯವನ್ನು ಬೇರ್ಪಡಿಸಿ, ಅದನ್ನು ಸೂಕ್ತ ವಿಲೇವಾರಿಗಾಗಿ ವ್ಯವಸ್ಥಿತವಾಗಿ ಸಂಗ್ರಹಿಸಿದರು. ಇದರಿಂದ ಜಲಾಶಯದ ಪರಿಸರ ಸ್ವಚ್ಛವಾಗುವುದರ ಜೊತೆಗೆ, ತ್ಯಾಜ್ಯ ನಿರ್ವಹಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವೂ ಲಭಿಸಿತು.

ಈ ಮಹತ್ವದ ಸ್ವಚ್ಛತಾ ಅಭಿಯಾನವು ಶಾಲೆಯ ದೂರದೃಷ್ಟಿಯ ನಾಯಕರಾದ ಪ್ರಾಂಶುಪಾಲರಾದ ಕರ್ನಲ್ ಅಮರ್ ಜಿತ್ ಸಿಂಗ್, ಆಡಳಿತ ಅಧಿಕಾರಿಗಳಾದ ವಿಂಗ್ ಕಮಾಂಡರ್ ಪಿ ಪ್ರಕಾಶ್ ರಾವ್ ಮತ್ತು ಉಪ ಪ್ರಾಂಶುಪಾಲರು ಹಾಗೂ ಎನ್ ಸಿ ಸಿ ಕಮಾಂಡಿಂಗ್ ಅಧಿಕಾರಿ ಸ್ಕ್ವಾಡ್ರನ್ ಲೀಡರ್ ಮಹಮ್ಮದ್ ಶಾಜಿ ಅವರ ಸಕ್ರಿಯ ಮಾರ್ಗದರ್ಶನ ಮತ್ತು ಪ್ರೋತ್ಸಾಹದೊಂದಿಗೆ ನಡೆಯಿತು.

 ಪರಿಸರ ಮತ್ತು ಸಾಮಾಜಿಕ ಜವಾಬ್ದಾರಿಯ ಕುರಿತು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಶಾಲೆಯ ಬದ್ಧತೆಯನ್ನು ಈ ಕಾರ್ಯಕ್ರಮ ಪ್ರತಿಬಿಂಬಿಸುತ್ತದೆ. ಜೊತೆಗೆ ಶಾಲೆಯ ಎನ್ ಸಿ ಸಿ ಘಟಕದ ಲೆಫ್ಟಿನೆಂಟ್ ವಿಬಿನ್ ಕುಮಾರ್, ಎಫ್/ ಒ ಮಂಜಪ್ಪ ಜಿ ಕೆ, ಎಫ್/ಒ ವೆಂಕಟ ರಮಣ ವೈ, ಟಿ/ಒ ಪ್ರತಿಭಾ ಕಲ್ಯಾಣಿ, ಸುಬೇದಾರ್ ಬಲ್ ಬೀರ್ ಸಿಂಗ್, ಹವಾಲ್ದಾರ್ ಪ್ರವೀಣ್ ಪಕಾಲೆ ಭಾಗವಹಿಸಿದ್ದರು. ಪ್ರಸ್ತುತ ಅಭಿಯಾನವನ್ನು ಹಾರಂಗಿ ಜಲಾಶಯದ ಪ್ರವಾಸಿಗರು ಮತ್ತು ಸ್ಥಳೀಯರು ಶಾಲಾ ವಿದ್ಯಾರ್ಥಿಗಳ ಈ ಶ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0