ಕಸದ ರಾಶಿಯಲ್ಲಿ ಸಿಕ್ಕ ₹10 ಲಕ್ಷವನ್ನು ಮಾಲೀಕರಿಗೆ ಹಿಂತಿರುಗಿಸಿದ ನೈರ್ಮಲ್ಯ ಕಾರ್ಯಕರ್ತೆ

Nov 24, 2025 - 10:03
 0  2.5k
ಕಸದ ರಾಶಿಯಲ್ಲಿ ಸಿಕ್ಕ ₹10 ಲಕ್ಷವನ್ನು ಮಾಲೀಕರಿಗೆ ಹಿಂತಿರುಗಿಸಿದ ನೈರ್ಮಲ್ಯ ಕಾರ್ಯಕರ್ತೆ
Photo credit: Etv bharath

ಪುಣೆ: ಕಸದ ರಾಶಿಯಲ್ಲಿ ಸಿಕ್ಕಿದ್ದ 10 ಲಕ್ಷ ರೂಪಾಯಿ ನಗದು ಚೀಲವನ್ನು ಅದರ ಮಾಲೀಕರಿಗೆ ಹಿಂತಿರುಗಿಸಿದ ನೈರ್ಮಲ್ಯ ಕಾರ್ಯಕರ್ತೆ ಅಂಜು ಮಾನೆ ಅವರ ಪ್ರಾಮಾಣಿಕ ನಡೆ ನಗರದಾದ್ಯಂತ ಶ್ಲಾಘನೆಗೆ ಪಾತ್ರವಾಗಿದೆ.

ಸದಾಶಿವ ನಗರ ಪ್ರದೇಶದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ನೈರ್ಮಲ್ಯ ಕಾರ್ಯಕರ್ತೆಯಾಗಿರುವ ಅಂಜು, ನ.20ರ ಬೆಳಗ್ಗೆ ಕಸ ಸಂಗ್ರಹಿಸುವ ವೇಳೆ ಔಷಧಿಯ ಚೀಲವೊಂದು ರಸ್ತೆಬದಿಯಲ್ಲಿ ಬಿದ್ದಿರುವುದು ಗಮನಿಸಿ, ಕಸದ ಜೊತೆಗೆ ತನ್ನ ತಳ್ಳುಗಾಡಿಯಲ್ಲಿ ಇಟ್ಟಿದ್ದರು. ನಂತರ ಚೀಲವನ್ನು ತೆರೆದಾಗ ಅದರೊಳಗೆ ಕಂತೆಗಟ್ಟಲೆ ನಗದು ಇರುವುದನ್ನು ಕಂಡು, ಹಣ ಕಳೆದುಕೊಂಡವರ ಕುರಿತು ವಿಚಾರಣೆ ಆರಂಭಿಸಿದ್ದರು.

ಈ ವೇಳೆ, ಆತಂಕದಿಂದ ಹಣ ಹುಡುಕುತ್ತಿದ್ದ ವ್ಯಕ್ತಿಯೊಬ್ಬರೊಂದಿಗೆ ಮಾತನಾಡಿದಾಗ, ತಾನೇ ತಪ್ಪಾಗಿ ಹಣದ ಚೀಲವನ್ನು ತ್ಯಾಜ್ಯದ ಜೊತೆ ಬಿಸಾಡಿದ್ದಾಗಿ ಅವರು ತಿಳಿಸಿದ್ದಾರೆ. ವಿವರಗಳು ಹೊಂದಿಕೆಯಾಗಿದ್ದರಿಂದ, ಅಂಜು ಮಾನೆ ಅವರು 10 ಲಕ್ಷ ರೂ. ಇರುವ ಚೀಲವನ್ನು ಯಾವುದೇ ಸ್ವಾರ್ಥವಿಲ್ಲದೆ ಹಿಂತಿರುಗಿಸಿದರು.

ಅಂಜು ಅವರ ಈ ಪ್ರಾಮಾಣಿಕ ನಡೆಗೆ ಪ್ರದೇಶದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಹಣ ಕಳೆದುಕೊಂಡ ವ್ಯಕ್ತಿಯೇ ಅವರಿಗೆ ಒಂದು ಸೀರೆ ಹಾಗೂ ಸ್ವಲ್ಪ ನಗದು ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

“ವಿಶೇಷ ವಸ್ತುಗಳು ಕಸದ ಜೊತೆ ಬಂದಾಗ ನಾನು ಜನರಿಗೆ ತಿಳಿಸುತ್ತೇನೆ. ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎನ್ನುವುದು ನನ್ನ ನಂಬಿಕೆ,” ಎಂದು ಅಂಜು ಹೇಳಿದ್ದಾರೆ.

What's Your Reaction?

Like Like 10
Dislike Dislike 0
Love Love 3
Funny Funny 2
Angry Angry 0
Sad Sad 0
Wow Wow 3