ತೊರೆನೂರು ಪ್ರೌಢಶಾಲೆಯಲ್ಲಿ ಗಮನ ಸೆಳೆದ ವಿಜ್ಞಾನ ವಸ್ತು ಪ್ರದರ್ಶನ: ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಕೊಳ್ಳಲು ಬಿಇಓ ಕೃಷ್ಣಪ್ಪ ಕರೆ
ಕುಶಾಲನಗರ, ನ.30: ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಹೆಚ್ಚು ಆಸಕ್ತಿ ಹಾಗೂ ಕುತೂಹಲ ಹೊಂದಬೇಕು. ಇದರಿಂದ ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಿ ಉತ್ತಮ ಭವಿಷ್ಯ ರೂಪಿಸಿ ಕೊಳ್ಳಲು ಸಾಧ್ಯ ಎಂದು ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಕರೆ ನೀಡಿದರು.
ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 2025-26 ನೇ ಸಾಲಿನ ರಾಷ್ಟ್ರೀಯ ಆವಿಷ್ಕಾರ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಕುಶಾಲನಗರ ತಾಲ್ಲೂಕಿನ ತೊರೆನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಮೂಲಕ ವಿಜ್ಞಾನದ ಕೌತುಕ ವಿನೂತನ ಪ್ರಯೋಗಗಳ ಮೂಲಕ ಸ್ಥಳೀಯ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವ ಮೂಲಕ ವಿಜ್ಞಾನ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು. ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಂಡರೆ ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳಬಹುದು ಎಂದರು.
ರಾಷ್ಟ್ರೀಯ ಆವಿಷ್ಕಾರದ ಮುಖ್ಯ ಉದ್ದೇಶ ಕುರಿತು ಮಾಹಿತಿ ನೀಡಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಇಂತಹ ವಿಜ್ಞಾನ ವಸ್ತು ಪ್ರದರ್ಶನವು ವಿದ್ಯಾರ್ಥಿಗಳನ್ನು ಗಣಿತ , ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳಲ್ಲಿ ಕುತೂಹಲವನ್ನು ಹೆಚ್ಚಿಸಿ ಅವರನ್ನು ಸಂಶೋಧನಾತ್ಮಕ ಪ್ರಯೋಗಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದಾಗಿದೆ ಎಂದರು.
ವಿಜ್ಞಾನ ಆವಿಷ್ಕಾರವು ಮನುಕುಲಕ್ಕೆ ಸಹಕಾರಿಯಾಗಿದ್ದರೆ, ವಿಜ್ಞಾನಿಗಳ ಆವಿಷ್ಕಾರಗಳು ಮನುಕುಲಕ್ಕೆ ಅದ್ವಿತೀಯ ಆಕರಗಳಾಗುತ್ತವೆ ಎಂದರು.
ಶಾಲಾ ಮುಖ್ಯ ಶಿಕ್ಷಕ ಬಿ.ಆರ್.ಸತ್ಯನಾರಾಯಣ ಮಾತನಾಡಿ, ಈ ವಸ್ತು ಪ್ರದರ್ಶನವು ಮಕ್ಕಳ ಪ್ರತಿಭೆ ಅನಾವರಣಕ್ಕೊಂದು ಉತ್ತಮ ವೇದಿಕೆಯಾಗಿದೆ. ಮಕ್ಕಳು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಜ್ಞಾನ ಶಿಕ್ಷಕಿ ಬಿ.ಪಿ.ಸವಿತ, ಈ ವಸ್ತು ಪ್ರದರ್ಶನವು ಮಕ್ಕಳಲ್ಲಿ ವಿಜ್ಞಾನ ಕಲಿಕೆಗೆ ಸಹಕಾರಿಯಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ.ಸಿ.ಅಧ್ಯಕ್ಷ ಟಿ.ಎಚ್.ಗಣೇಶ್ ಮಾತನಾಡಿ, ಮಕ್ಕಳ ವಸ್ತು ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಅಣ್ಣಯ್ಯ, ಉಪಾಧ್ಯಕ್ಷೆ ಸುಷ್ಮಾ, ಸದಸ್ಯರಾದ ರವಿಚಂದ್ರ, ದಿನೇಶ್, ತೊರೆನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಭಾಗ್ಯಲಕ್ಷ್ಮಿ, ಶಿರಂಗಾಲ ಸರ್ಕಾರಿ ಪ್ರೌಢಶಾಲೆಯ ಹಿರಿಯ ಶಿಕ್ಷಕಿ ಶೈಲಜಾ ಸಂಪನ್ಮೂಲ ಶಿಕ್ಷಕಿಯರಾದ ಹೆಬ್ಬಾಲೆ ಶಾಲೆಯ ಶಿಕ್ಷಕಿ ರಮ್ಯ , ಚಿಕ್ಕ ಅಳುವಾರ ಶಾಲೆಯ ಶಿಕ್ಷಕಿ ರೇಖಾ, ಶಿಕ್ಷಕರು ಇದ್ದರು.
ಶಿಕ್ಷಕ ಜಿ.ಶ್ರೀಹರ್ಷ ನಿರ್ವಹಿಸಿದರು. ಶಿಕ್ಷಕ ಟಿ.ಬಿ.ಮಂಜುನಾಥ್ ವಂದಿಸಿದರು.
ಗಮನ ಸೆಳೆದ ವಿಜ್ಞಾನ ಪ್ರದರ್ಶನ:: ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿಜ್ಞಾನ ಶಿಕ್ಷಕಿ ಬಿ.ಪಿ.ಸವಿತ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ವಿಜ್ಞಾನ ವಿಷಯಕ್ಕೆ ಸಂಬಂದಿಸಿದಂತೆ ನಾನಾ ರೀತಿಯ ವಿಜ್ಞಾನ ಮಾದರಿಗಳು, ಪ್ರಯೋಗಗಳನ್ನು ಪ್ರದರ್ಶಿಸುವ ಮೂಲಕ ಭಾಗವಹಿಸಿದ್ದ ಗಣ್ಯರು, ವಿದ್ಯಾರ್ಥಿಗಳು, ಪೋಷಕರ ಮೆಚ್ಚುಗೆ ಗಳಿಸಿದರು. ವಸ್ತು ಪ್ರದರ್ಶನದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಪರಮಾಣುಗಳ ರಚನೆ, ವಿದ್ಯುತ್ಕಾಂತೀಯ ಕ್ರೇನ್, ಪರಿಸರ ಮಾಲಿನ್ಯ ನಿಯಂತ್ರಣ, ರಕ್ತ ಶುದ್ಧೀಕರಣ, ಸ್ವಯಂ ಚಾಲಿತ ಗಡಿ ಕಾಯುವ ಯಂತ್ರ, ಸೌರಶಕ್ತಿ ಬಳಕೆ, ಜಲಶಕ್ತಿ, ಬಾಹ್ಯಾಕಾಶ ಕ್ಷೇತ್ರ, ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ, ಸ್ವಯಂ ಚಾಲಿತ ಹನಿ ನೀರಾವರಿ ಪದ್ಧತಿ, ಜೀವಶಾಸ್ತ್ರ ಸೇರಿದಂತೆ ನಾನಾ ಬಗೆಯ ವಿಜ್ಞಾನ ಮಾದರಿ ಪ್ರದರ್ಶನ ಆಕರ್ಷಕವಾಗಿತ್ತು ಮತ್ತು ವಿದ್ಯಾರ್ಥಿಗಳು, ಪೋಷಕರು ಹಾಗೂ ವೀಕ್ಷಕರ ಗಮನ ಸೆಳೆಯಿತು.