ವಿದ್ಯಾರ್ಥಿನಿಯರಿಗೆ 'ಬೇಬಿ ಐ ಲವ್ ಯು' ಎಂದು ಸಂದೇಶ ಕಳುಹಿಸಿದ್ದ ಸ್ವಯಂಘೋಷಿತ ದೇವ ಮಾನವ! ದಿಲ್ಲಿಯ ಶೃಂಗೇರಿ ಮಠದ ಶಿಕ್ಷಣ ಸಂಸ್ಥೆಯ ಸ್ವಾಮಿಯಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ

Sep 26, 2025 - 12:41
 0  300
ವಿದ್ಯಾರ್ಥಿನಿಯರಿಗೆ 'ಬೇಬಿ ಐ ಲವ್ ಯು' ಎಂದು ಸಂದೇಶ ಕಳುಹಿಸಿದ್ದ ಸ್ವಯಂಘೋಷಿತ ದೇವ ಮಾನವ!  ದಿಲ್ಲಿಯ ಶೃಂಗೇರಿ ಮಠದ ಶಿಕ್ಷಣ ಸಂಸ್ಥೆಯ ಸ್ವಾಮಿಯಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ
Photo credit: NDTV

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯ ವಸಂತ್ ಕುಂಜ್‌ನಲ್ಲಿರುವ ಶೃಂಗೇರಿ ಮಠದ ಅಧೀನದಲ್ಲಿರುವ ಶ್ರೀ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್ಮೆಂಟ್ ಸಂಸ್ಥೆಯ ನಿರ್ದೇಶಕ ಹಾಗೂ ಸ್ವಯಂಘೋಷಿತ ದೇವ ಮಾನವ ಸ್ವಾಮಿ ಚೈತನ್ಯಾನಂದ ಸರಸ್ವತಿ (ಅಸಲಿ ಹೆಸರು ಪಾರ್ಥ ಸಾರಥಿ, ವಯಸ್ಸು 52) ವಿರುದ್ಧ ಅನೇಕ ಮಹಿಳಾ ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ಆರೋಪ ಹೊರಿಸಿರುವ ಹಿನ್ನೆಲೆಯಲ್ಲಿ ತನಿಖೆ ತೀವ್ರಗೊಳ್ಳುತ್ತಿದೆ.

 2025ರ ಆಗಸ್ಟ್‌ನಲ್ಲಿ ದಾಖಲಾದ ಎಫ್‌ಐಆರ್ ಪ್ರಕಾರ, ಒಡಿಶಾ ಮೂಲದ ಈ ಸ್ವಯಂಘೋಷಿತ ದೇವ ಮಾನವ, ವಿದ್ಯಾರ್ಥಿನಿಯರಿಗೆ ಅನಗತ್ಯ ಸಂದೇಶಗಳನ್ನು ಕಳುಹಿಸಿ, ವೈಯಕ್ತಿಕವಾಗಿ ಭೇಟಿಯಾಗಲು ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಒಂದು ವೇಳೆ ಪ್ರತಿಕ್ರಿಯಿಸದಿದ್ದರೆ ಅಂಕ ಕಡಿತ ಹಾಗೂ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆಂಬ ಗಂಭೀರ ಆರೋಪ ಹೊರಬಿದ್ದಿದೆ.

ಈಗ ಬಹಿರಂಗವಾಗಿರುವ ವಾಟ್ಸಾಪ್ ಸಂದೇಶಗಳಲ್ಲಿ "ಬೇಬಿ", "ಐ ಲವ್ ಯು", "ನಾನು ನಿಮ್ಮನ್ನು ಇಷ್ಟಪಡುತ್ತೇನೆ" ಮುಂತಾದ ವೈಯಕ್ತಿಕ ಸಂದೇಶಗಳು ಪತ್ತೆಯಾಗಿವೆ.

2024ರ ಡಿಸೆಂಬರ್‌ನಲ್ಲಿ ಹಾಸ್ಟೆಲ್‌ನಲ್ಲಿ ಬಿದ್ದು ಗಾಯಗೊಂಡ ವಿದ್ಯಾರ್ಥಿನಿಯೊಬ್ಬಳಿಗೆ ಎಕ್ಸ್‌ರೇ ವರದಿಯನ್ನು ತನ್ನ ವೈಯಕ್ತಿಕ ಫೋನ್‌ಗೆ ಕಳುಹಿಸುವಂತೆ ಒತ್ತಾಯಿಸಿದ್ದ. ಆ ಬಳಿಕ ಆತನ ಅನುಚಿತ ಸಂವಹನಗಳು ಆರಂಭವಾಗಿದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ. 2025ರ ಮಾರ್ಚ್‌ನಲ್ಲಿ ಹೊಸ BMW ಕಾರಿಗೆ ಧಾರ್ಮಿಕ ಪೂಜೆಯ ನೆಪದಲ್ಲಿ ವಿದ್ಯಾರ್ಥಿನಿಯನ್ನು ನಿವಾಸಕ್ಕೆ ಕರೆಸಿಕೊಂಡಿದ್ದ ಎಂದು ವರದಿಯಾಗಿದೆ.

ಹೋಳಿ ಹಬ್ಬದ ಸಂದರ್ಭದಲ್ಲಿ ಸ್ವಯಂಘೋಷಿತ ದೇವ ಮಾನವ ಸ್ವಾಮಿ ಚೈತನ್ಯಾನಂದ ಸರಸ್ವತಿಗೆ ವಿದ್ಯಾರ್ಥಿನಿಯರು ಮೊದಲು ಬಣ್ಣ ಹಚ್ಚುವಂತೆ ಒತ್ತಡ ಹೇರಲಾಗಿತ್ತು ಎಂದು ತಿಳಿದು ಬಂದಿದೆ.

ಜೂನ್ 2025ರಲ್ಲಿ ಋಷಿಕೇಶ ಪ್ರವಾಸದ ಸಮಯದಲ್ಲಿಯೂ ವಿದ್ಯಾರ್ಥಿನಿಯರು ಕಿರುಕುಳಕ್ಕೆ ಒಳಗಾಗಿದ್ದಾರು. ವಿರೋಧ ವ್ಯಕ್ತಪಡಿಸಿದವರಿಗೆ ಪರೀಕ್ಷೆಗೆ ಕುಳಿತುಕೊಳ್ಳುವುದನ್ನು ನಿರ್ಬಂಧಿಸಿ, ಕೆಲವರ ಅಂಕಗಳನ್ನು ಕಡಿಮೆ ಮಾಡಲಾಗಿದೆ ಎಂಬುದು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ.

 ತನಿಖಾಧಿಕಾರಿಗಳ ಪ್ರಕಾರ, ಸುಮಾರು 50 ವಿದ್ಯಾರ್ಥಿನಿಯರ ಫೋನ್ ದಾಖಲೆಗಳು ಮತ್ತು ಚಾಟ್‌ಗಳು, ಕಳೆದ 16 ವರ್ಷಗಳ ಅವಧಿಯಲ್ಲಿ ನಡೆದಿರುವ ಕಿರುಕುಳ ಮತ್ತು ಬೆದರಿಕೆಗಳನ್ನು ತೋರಿಸುತ್ತವೆ.

 ಪೊಲೀಸ್ ದಾಖಲೆಗಳ ಪ್ರಕಾರ 2009 ಮತ್ತು 2016ರಲ್ಲಿಯೂ ಸರಸ್ವತಿ ವಿರುದ್ಧ ಇಂತಹ ದೂರುಗಳು ದಾಖಲಾಗಿದ್ದವು ಎಂದು ಸೂಚಿಸುತ್ತವೆ. ಆದರೆ ಆ ಸಂದರ್ಭಗಳಲ್ಲಿ ಆರೋಪಿಯು ಪ್ರಭಾವ ಹಾಗೂ ತನ್ನ ಸಂಪರ್ಕ ಬಳಸಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.

ಈ ಪ್ರಕರಣದಲ್ಲಿ 17 ವಿದ್ಯಾರ್ಥಿನಿಯರು ಜಂಟಿಯಾಗಿ ಡಿಫೆನ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರಂಭದಲ್ಲಿ ಲಂಡನ್‌ನಲ್ಲಿದ್ದಾನೆಂದು ತಿಳಿದಿದ್ದ ಸರಸ್ವತಿ, ನಂತರ ಆಗ್ರಾದಲ್ಲಿ ಪತ್ತೆಯಾಗಿದ್ದು ಬಳಿಕ ತಲೆಮರೆಸಿಕೊಂಡಿದ್ದಾನೆ. ದಿಲ್ಲಿ ಪೊಲೀಸರು ದಿಲ್ಲಿ, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಆತನಿಗಾಗಿ ಶೋಧ ಕಾರ್ಯಾಚರಣೆ ನಡೆಸಿ, ದೇಶ ಬಿಟ್ಟು ಹೋಗದಂತೆ ಲುಕ್‌ಔಟ್ ನೋಟಿಸ್ ಹೊರಡಿಸಿದ್ದಾರೆ. ಆದರೆ ಆರೋಪಿ ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0