ಅರೆಭಾಷೆ ಸಾಂಸ್ಕೃತಿಕ ಸಂಭ್ರಮ - 2026 ;ಸಂಸ್ಕೃತಿ,ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ,ಮತ್ತು ಬೆಳವಣಿಗೆಗೆ‌ ಪೂರಕ; ಸದಾನಂದ ಮಾವಜಿ

May 9, 2026 - 15:49
 0  171
ಅರೆಭಾಷೆ ಸಾಂಸ್ಕೃತಿಕ ಸಂಭ್ರಮ - 2026 ;ಸಂಸ್ಕೃತಿ,ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ,ಮತ್ತು ಬೆಳವಣಿಗೆಗೆ‌ ಪೂರಕ; ಸದಾನಂದ ಮಾವಜಿ

ಮಡಿಕೇರಿ;"ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಮ್ಮ ದೇಶದಲ್ಲಿ ಬಹುಸಂಸ್ಕೃತಿ ಮತ್ತು ಸೌಹಾರ್ದತೆಯೇ ನಮ್ಮ ಅಸ್ಮಿತೆ, ಬಹು ಸಂಸ್ಕೃತಿ ಉತ್ಸವಗಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಮತ್ತು ಬೆಳವಣಿಗೆಗೆ ಪೂರಕ" ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಸದಾನಂದ ಮಾವಜಿ ನುಡಿದರು.

 ಅವರು ಅಕಾಡೆಮಿಯ ಸಹಯೋಗದೊಂದಿಗೆ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ ಇದರ ಆಶ್ರಯದಲ್ಲಿ ನಡೆದ ಅರೆಭಾಷೆ ಸಾಂಸ್ಕೃತಿಕ ಸಂಭ್ರಮ - 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

 ಮುಂದುವರಿದು ಮಾತನಾಡಿದ ಅವರು ಬಹು ಸಂಸ್ಕೃತಿ ಉತ್ಸವದ ಅಡಿಯಲ್ಲಿ ಅರೆಭಾಷಿಕರು ಕಡಿಮೆ ಇರುವಂತಹ ಸ್ಥಳದಲ್ಲಿ ಅರೆಭಾಷೆ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಂಡು ಭಾಷೆಯ ಸೊಬಗು, ಸೊಗಡು ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರೆಭಾಷೆ ಸಾಂಸ್ಕೃತಿಕ ಸಂಭ್ರಮ -2026 ಇದರ ಅಧ್ಯಕ್ಷರಾಗಿರುವ ವಕೀಲ ಶ್ರೀ ಉಮೇಶ್ ಕುಮಾರ್ ವೈ ಅವರು ಹಲವು ಭಾಷೆಗಳು ಹಲವು ಸಂಸ್ಕೃತಿಗಳು ನಮ್ಮ ದೇಶದ ವಿಶಿಷ್ಟತೆ. ಪ್ರಪಂಚದ ಇತರ ಯಾವುದೇ ದೇಶದಲ್ಲಿ ಇಂತಹ ವೈವಿಧ್ಯತೆಯನ್ನು ಕಾಣಲು ಸಾಧ್ಯವಿಲ್ಲ ಎಂದು ನುಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ, ಚಿಣ್ಣರಲೋಕ ಸೇವಾ ಬಂಧು (ರಿ) ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ಆರು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಕರಾವಳಿ ಕಲೋತ್ಸವ - 2026 ಪ್ರಯುಕ್ತ ತುಳು, ಕೊಂಕಣಿ, ಬ್ಯಾರಿ ಹಾಗೂ ಅರೆಭಾಷೆ ಅಕಾಡೆಮಿಗಳ ಸಹಯೋಗದೊಂದಿಗೆ ಬಹುಸಂಸ್ಕೃತಿ ಉತ್ಸವ ಮತ್ತು ಆಹಾರ ಮೇಳದ ಪ್ರಯುಕ್ತ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಅರೆಭಾಷೆ ಸಾಂಸ್ಕೃತಿಕ ಸಂಭ್ರಮ - 2026 ಕಾರ್ಯಕ್ರಮ ಬಂಟ್ವಾಳ ತಾಲೂಕಿನ ಬಿ.ಸಿ. ರೋಡಿನಲ್ಲಿರುವ ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಬಿ.ಸಿ. ರೋಡಿನ ವಕೀಲರಾದ ಶ್ರೀ ಅಶ್ವನಿ ಕುಮಾರ್ ರೈ, ಪುತ್ತೂರು ಒಕ್ಕಲಿಗರ ಗೌಡ ಸೇವಾಸಂಘದ ಅಧ್ಯಕ್ಷರಾದ ಶ್ರೀ ಕೆ. ಸುಂದರ ಗೌಡ ನಡುಬೈಲು, ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಶ್ರೀ ಸಿ. ಕುಶಾಲಪ್ಪ ಗೌಡ, ಅನಂತಾಡಿ ವಲಯ ಒಕ್ಕಲಿಗರ ಯಾನೆ ಗೌಡರ ಸಂಘದ ಅಧ್ಯಕ್ಷರಾದ ಶ್ರೀ ಪುರಂದರ ಗೌಡ, ಶ್ರೀ ಲಿಂಗಪ್ಪ ಗೌಡ ಅಳಿಕೆ ಹಾಗೂ ಅರೆಭಾಷೆ ಅಕಾಡೆಮಿ ಸದಸ್ಯರಾದ ಡಾ. ಜ್ಞಾನೇಶ್ ಎನ್.ಎ, ಶ್ರೀಮತಿ ಚಂದ್ರಾವತಿ ಬಡ್ಡಡ್ಕ, ಶ್ರೀಮತಿ ಲತಾಪ್ರಸಾದ್ ಕುದ್ಪಾಜೆ, ಶ್ರೀ ಕಾರ್ಯಪ್ಪ ಪಿ.ಎಸ್ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತೇವು ತಾರನಾಥ ಕೊಟ್ಟಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರೆಭಾಷೆ ಅಕಾಡೆಮಿ ಸದಸ್ಯರಾದ ಡಾ. ಜ್ಞಾನೇಶ್ ಎನ್.ಎ ಸ್ವಾಗತಿಸಿದರು. ಶ್ರೀಮತಿ ಧರ್ಮಾವತಿ ಪಿ.ಬಿ ವಂದಿಸಿದರು. ಪೂಜಾಶ್ರೀ ವಿತೇಶ್ ಕೋಡಿ ಕಾರ್ಯಕ್ರಮ ನಿರೂಪಿಸಿದರು.

ಕವಿಗೋಷ್ಠಿ: ಸಭಾ ಕಾರ್ಯಕ್ರಮದ ಬಳಿಕ ಶ್ರೀ ಯಶವಂತ ಕುಡೇಕಲ್ಲು ಇವರ ಅಧ್ಯಕ್ಷತೆಯಲ್ಲಿ ಅರೆಭಾಷೆ ಕವಿಗೋಷ್ಠಿ ನಡೆಯಿತು. ಕವಿಗಳಾದ ಉದಯ ಭಾಸ್ಕರ್ ಸುಳ್ಯ, ಕುಸುಮಾಕರ ಅಂಬೆಕಲ್ಲು, ಜೀವನ್ ಪುರ ಮರ್ಕಂಜ, ಚಂದ್ರಾವತಿ ಬಡ್ಡಡ್ಕ, ಹೇಮಲತಾ ಕಜೆಗದ್ದೆ ಹಾಗೂ ಡಾ. ತಾರಾ ಗಣೇಶ್ ಇವರುಗಳು ಕವನ ವಾಚಿಸಿದರು. 

ಸಾಂಸ್ಕೃತಿಕ ಕಾರ್ಯಕ್ರಮ:

ನಂತರ ನಡೆದ ಅರೆಭಾಷೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹಳ ಸುಂದರವಾಗಿ ಮೂಡಿಬಂದಿದ್ದು ಸಭಿಕರ ಮನರಂಜಿಸಿದವು. ರಮೇಶ್ ಮೆಟ್ಟಿನಡ್ಕ ಇವರು ಅರೆಭಾಷೆ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿದರು. ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪ್ರಸ್ತುತಪಡಿಸಿದ ಅರೆಭಾಷೆ ನೃತ್ಯರೂಪಕ ಕೆರೆಗೆ ದಾನ ಬಹಳ ಚೆನ್ನಾಗಿ ಮೂಡಿಬಂದಿತು.

ವಿದ್ವಾನ್ ದೀಪಕ್ ಕುಮಾರ್ ಪುತ್ತೂರು ಅವರ ನಿರ್ದೇಶನದ ರೂಪಕಕ್ಕೆ ವಿದುಷಿ ಪ್ರೀತಿಕಲಾ ಪುತ್ತೂರು ಸಂಗೀತ ನೀಡಿದ್ದರೆ ಹೇಮಲತಾ ಕಜೆಗದ್ದೆ ಅವರು ಅರೆಭಾಷೆ ಸಾಹಿತ್ಯ ನೀಡಿದ್ದರು. ಸ್ವರ‌ ಬೆಟ್ಟಂಪಾಡಿ‌ ತಂಡದಿಂದ ಅರೆಭಾಷೆ ಹಾಡಿಗೆ ನೃತ್ಯ, ಸಿದ್ಧವೇಶ ತಂಡ ಪೇರಾಲು, ಅಂಬ್ರೋಟಿ ಇವರಿಂದ ಸಿದ್ಧವೇಷ ನೃತ್ಯ ಪ್ರದರ್ಶನ ಹಾಗೂ ಸುಳ್ಯದ ಕಲಾವಿದರಿಂದ ಅರೆಭಾಷೆ ಪೊಳ್ಮೆ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0