ಹಿರಿಯ ಸಾಹಿತಿ ಮತ್ತು ವೈದ್ಯರಾದ ಡಾ.ಕೆ.ಬಿ. ಸೂರ್ಯಕುಮಾರ್ ಅವರಿಗೆ ದಿ. ಬಿ.ಎಸ್ ಗೋಪಾಲಕೃಷ್ಣ ದತ್ತಿ ಪ್ರಶಸ್ತಿ

Feb 1, 2026 - 12:52
 0  195
ಹಿರಿಯ ಸಾಹಿತಿ ಮತ್ತು ವೈದ್ಯರಾದ ಡಾ.ಕೆ.ಬಿ. ಸೂರ್ಯಕುಮಾರ್ ಅವರಿಗೆ   ದಿ. ಬಿ.ಎಸ್ ಗೋಪಾಲಕೃಷ್ಣ ದತ್ತಿ ಪ್ರಶಸ್ತಿ

ಮಡಿಕೇರಿ; ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪುರುಷ ಸಾಹಿತಿಗಳಿಗೆ ಮೀಸಲಾಗಿ ಇಟ್ಟಿರುವ ಪ್ರತಿಷ್ಠಿತ ದತ್ತಿ "ದಿ. ಬಿ.ಎಸ್ ಗೋಪಾಲಕೃಷ್ಣ ದತ್ತಿ ಪ್ರಶಸ್ತಿ" ಯು ಜಿಲ್ಲೆಯ ಹಿರಿಯ ಸಾಹಿತಿ ಮತ್ತು ವೈದ್ಯರಾದ ಡಾ.ಕೆ.ಬಿ. ಸೂರ್ಯಕುಮಾರ್ ರವರು ರಚಿಸಿದ "ವೈದ್ಯ ಕಂಡ ವಿಸ್ಮಯ " ವಿಭಿನ್ನ ವಿಶ್ವದ ಇಣುಕು ನೋಟ ಕೃತಿಯು ಪುರಸ್ಕೃತ ಗೊಂಡಿದೆ.

ಜಿಲ್ಲೆಯ ದೈನಿಕ ಶಕ್ತಿ ಪತ್ರಿಕೆಯ ಸ್ಥಾಪಕ ಸಂಪಾದಕರಾದ ಬಿ.ಎಸ್ ಗೋಪಾಲಕೃಷ್ಣ ರವರ ಹೆಸರಿನಲ್ಲಿ ಅವರ ಪುತ್ರರು ಸ್ಥಾಪಿಸಿರುವ ಈ ದತ್ತಿಯ ದ್ವಿತೀಯ ಪ್ರಶಸ್ತಿ ಇದಾಗಿದ್ದು, ಈ ದತ್ತಿ ಪ್ರಶಸ್ತಿಯ ಆಯ್ಕೆಗಾಗಿ ಜಿಲ್ಲೆಯ ಪುರುಷ ಬರಹಗಾರರು ಸಲ್ಲಿಸಿದ್ದ ಕೃತಿಗಳನ್ನು ಜಿಲ್ಲೆಯ ಹಿರಿಯ ಮೂರು ಸಾಹಿತಿಗಳು ಪ್ರತ್ಯೇಕವಾಗಿ ಈ ಪುಸ್ತಕಗಳನ್ನು ಪರಿಶೀಲಿಸಿ ನೀಡಿದ ಅಂಕಗಳನ್ನು ಜಿಲ್ಲಾ ಸಮಿತಿ ಒಟ್ಟುಗೂಡಿಸಿ ಅತಿ ಹೆಚ್ಚು ಅಂಕ ಪಡೆದ "ವೈದ್ಯ ಕಂಡ ವಿಸ್ಮಯ" ವಿಭಿನ್ನ ವಿಶ್ವದ ಇಣುಕು ನೋಟ ಕೃತಿಯ ಲೇಖಕರಾದ ಡಾ. ಸೂರ್ಯಕುಮಾರ್ ರವರು ಪಡೆದುಕೊಂಡಿದ್ದಾರೆ.

 ಡಾ ಕೆ.ಬಿ. ಸೂರ್ಯಕುಮಾರ್ ರವರು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ 18 ವರ್ಷಗಳ ಕಾಲ ವೈದ್ಯಕೀಯ ವಿಭಾಗ ಮತ್ತು ವಿಧಿವಿಜ್ಞಾನ ಪರಿಣಿತರಾಗಿ ಕೆಲಸ ಮಾಡಿರುತ್ತಾರೆ. 90ರ ದಶಕದಲ್ಲಿ ಕರ್ನಾಟಕದ ಆರೋಗ್ಯ ಇಲಾಖೆಯಲ್ಲಿ ಇದ್ದ ಏಕೈಕ ವಿಧಿ ವಿಜ್ಞಾನ ಪರಿಣಿತರು ಇವರು. ಕೊಡಗು, ಹಾಸನ, ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ನಡೆದ ಅಸ್ವಾಭಾವಿಕ ಮರಣಗಳಲ್ಲಿ ಸ್ಥಳ ಪರೀಕ್ಷೆ ನಡೆಸಿ ಪೊಲೀಸರಿಗೆ ಅನೇಕ ಕೊಲೆಗಳನ್ನು ಭೇದಿಸಲು ಸಹಾಯ ಮಾಡಿದ್ದಾರೆ.

 ಕೊಡಗು ಸರಕಾರಿ ವೈದ್ಯರ ಸಂಘ ಮತ್ತು ಕೊಡಗು ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಮಡಿಕೇರಿಯಲ್ಲಿ ವಾಸವಿರುವ ಇವರು ಸುಳ್ಯ ಕೆ.ವಿ.ಜಿ ಮೆಡಿಕಲ್ ಕಾಲೇಜಿನ ವಿಧಿ ವಿಜ್ಞಾನ ವಿಭಾಗದಲ್ಲಿ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಂದೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗುವುದು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ ಮುನೀರ್ ಅಹ್ಮದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0