ಸೋಮವಾರಪೇಟೆ; ಪಟ್ಟಣ ಪಂಚಾಯಿತಿ 2026/27ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆ

Feb 17, 2026 - 16:15
 0  111
ಸೋಮವಾರಪೇಟೆ; ಪಟ್ಟಣ ಪಂಚಾಯಿತಿ 2026/27ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆ

ಸೋಮವಾರಪೇಟೆ: ಇಲ್ಲಿನ ಪಟ್ಟಣ ಪಂಚಾಯಿತಿ 2026/27ನೇ ಸಾಲಿನ ಆಯವ್ಯಯ ತಯಾರಿಸುವ ಸಲುವಾಗಿ ಪೂರ್ವಭಾವಿ ಸಭೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಮುಂದಿನ ಸಾಲಿನ ಬಜೆಟ್‌ನಲ್ಲಿ, ರಸ್ತೆ, ಕುಡಿಯುವ ನೀರು, ಚರಂಡಿ, ಪಾರ್ಕ್ ಸೇರಿದಂತೆ ವಿವಿಧ ಸೌಲಭ್ಯಗಳು ಹಾಗೂ ಅಭಿವೃದ್ಧಿಗಾಗಿ ರೂ. ೨೦ಕೋಟಿ ವೇಚ್ಚದ ವಿವಿಧ ಯೋಜನೆಗಳನ್ನು ಗುರುತಿಸಲಾಗಿದೆ. ಸರ್ಕಾರ ಮತ್ತು ಕಂದಾಯ ಸೇರಿದಂತೆ ವಿವಿಧ ಮೂಲಗಳಿಂದ ಹಣ ಸಂಗ್ರಹಿಸಲು ನಿರ್ಧರಿಸಲಾಗಿದೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿದ್ದು, ಮುಂದಿನ ಸಾಲಿನ ಬಜೆಟ್‌ನಲ್ಲಿ ರಸ್ತೆ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಹೆಚ್ಚಿನ ನಿಧಿ ಮೀಸಲಿಡುವಂತೆ ಪಂಚಾಯಿತಿ ಮಾಜಿ ಅಧ್ಯಕ್ಷೆ ಲೀಲಾ ನಿರ್ವಾಣಿ ಸಲಹೆ ನೀಡಿದರು. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎರಡು ಪಾರ್ಕ್ಗಳು ನಿರ್ವಹಣೆಯಿಲ್ಲದೆ, ಪಾಳು ಬಿದ್ದಿವೆ. ಅವುಗಳ ನಿರ್ವಹಣೆಗೆ ಹೆಚ್ಚಿನ ಹಣ ಇಡುವಂತೆ ಮಾಜಿ ಸದಸ್ಯೆ ಶೀಲಾ ಡಿಸೋಜ ತಿಳಿಸಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಕಟ್ಟಡಗಳು ಬೇನಾಮಿಯಾಗಿ ನಿರ್ಮಿಸುತ್ತಿದ್ದು, ಪಂಚಾಯಿತಿಗೆ ನಷ್ಟವಾಗುತ್ತಿದೆ. ಅದನು ತಡೆಯಬೇಕೆಂದು ಸೋಮವಾರಪೇಟೆ ಸೂಡ ಅಧ್ಯಕ್ಷ ಕೆ.ಎ. ಆದಮ್ ತಿಳಿಸಿದರು. ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆನೆಕೆರೆ ಮತ್ತು ಕಟ್ಟೆ ಬಸವೇಶ್ವರ ದೇವಾಲಯದ ಬಳಿಯ ಕೆರೆಗಳನ್ನು ಅಭಿವೃದ್ಧಿ ಪಡಿಸಲು ವಿಸ್ತೃತವಾದ ಯೋಜನೆ ರೂಪಿಸಬೇಕಾಗಿದೆ,ಜಿಲ್ಲಾ ಉಸ್ತುವಾರಿ ಸಚಿವರು ಸಣ್ಣನೀರಾವರಿ ಇಲಾಖೆ ಸಚಿವರೂ ಆಗಿರುವುದರಿಂದ ಶಾಸಕರ ಮೂಲಕ ಸಚಿವರ ಗಮನ ಸೆಳೆಯುವಂತೆಯೂ, ಕೆರೆಗಳ ಒತ್ತುವಾರಿಯಾಗಿರುವ ಸಾಧ್ಯತೆ ಇರುವುದರಿಂದ ಅದನ್ನು ಸರ್ವೆ ಮಾಡಿಸಿ, ಅಭಿವೃದ್ಧಿಪಡಿಸಬೇಕೆಂದು ಪತ್ರಕರ್ತ ಹಾಗೂ ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಮಾಜಿ ಸದಸ್ಯ ಎಸ್.ಮಹೇಶ್ ಮುಖ್ಯಾಧಿಕಾರಿಗೆ ತಿಳಿಸಿದರು.

 ಪುರಾತನ ಇತಿಹಾಸವಿರುವ ಕರ್ಕಳ್ಳಿಯ ಕಟ್ಟೇಬಸವೇಶ್ವರ ಕೆರೆಯನ್ನು ನಗರೋತ್ಥಾನ ಯೋಜನೆ ಯಡಿಯಲ್ಲಿ ಅಭಿವೃದ್ಧಿ ಪಡಿಸಲು 18.4ಲಕ್ಷ ಹಣ ನೀಡಲಾಗಿದ್ದರೂ ಗುತ್ತಿಗೆದಾರನ ಅಸಡ್ಡೆಯಿಂದ ಇಂದು ಕೆರೆಗೆ ಎಲ್ಲಾ ಜನರು ಮಣ್ಣು,ಕಸ,ಬೃಹತ್ ಮರದಬೇರುಗಳನ್ನು ತಂದು ಹಾಕಿ ಕೆರೆಯನ್ನು ಹೇಳಹೆಸರಿಲ್ಲದಂತೆ ಮಾಡುತ್ತಿದ್ದಾರೆ ಆದರೆ ಪಂಚಾಯಿತಿ ಅಧಿಕಾರಿಗಳು ಕಂಡುಕಾಣದಂತೆ ಕುಳಿತಿದ್ದಾರೆ ಎಂದರು.

ಈಗಾಗಲೇ ತಾಲ್ಲೂಕಿನ ೨೦ ಕೆರೆಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗೆ ರೂ. ೨೦ ಕೋಟಿ ಸರ್ಕಾರದಿಂದ ಕೇಳಲಾಗಿದೆ. ಆನೆಕೆರೆ ಸರ್ವೆ ಮಾಡಿಸಿ, ಅಭಿವೃದ್ಧಿ ಪಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಹಾಗೆಯೇ ಕಟ್ಟೆ ಬಸವೇಶ್ವರ ದೇವಾಲಯ ಬಳಿಯ ಕೆರೆಯ ಒತ್ತುವರಿ ತೆರವುಗಳಿಸಿ ಅಭಿವೃದ್ಧಿಗೆ ಸೂಕ್ರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಧಿಕಾರಿ ಸಭೆಗೆ ತಿಳಿಸಿದರು. 

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಂಬೇಡ್ಕರ್ ಭವನ ಯಾವುದೇ ನಿರ್ವಹಣೆಯಿಲ್ಲದೆ, ಪಾಳುಬಿದ್ದಂತಾಗಿದೆ. ಅದನ್ನು ಯಾರು ನಿರ್ವಹಣೆ ಮಾಡುತ್ತಿದ್ದಾರೆ ಎಂದು ತಿಳಿದಿಲ್ಲ. ಸಭೆ ಸಮಾರಂಭಗಳಿಗೆ ಭವನವನ್ನು ನೀಡಿದರೂ, ಅದರಿಂದ ಬರುವ ಲಾಭದ ವಿಷಯ ಯಾರಿಗೂ ತಿಳಿಯುತ್ತಿಲ್ಲ. ಆದುದ್ದರಿಂದ ಕೂಡಲೇ ಅಂಬೇಡ್ಕರ್ ಭವನದ ಸಮಿತಿಯೊಂದನ್ನು ಮಾಡಿ ಸರಿಯಾಗಿ ನಿರ್ವಹಣೆ ಮಾಡುವಂತೆ ಮೀನಕುಮಾರಿ ಮತ್ತು ಎಸ್.ಆರ್. ವಸಂತ್ ತಿಳಿಸಿದರು.

ಮುಂದಿನ ದಿನಗಳಲ್ಲಿ ಸಮಿತಿ ರಚಿಸುವುದರೊಂದಿಗೆ ಅದರ ಅಭಿವೃದ್ಧಿಗೆ ಕ್ರಮತೆಗೆದುಕೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದರು. ಪಟ್ಟಣದಲ್ಲಿ ಕಸವಿಲೇವಾರಿಗೆ ಅಗತ್ಯಕ್ರಮ ಕೈಗೊಳ್ಳಬೇಕು,ಪರಿಸರ ರಕ್ಷಣೆಯ ದೃಷ್ಟಿಯಿಂದ ತಮ್ಮ ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಶ್ರಮದಾನನಡೆಸಲಾಗುವುದೆಂದು ನಿವೃತ್ತ ಸೈನಿಕರಾದ ಚಂದ್ರಕುಮಾರ್ ತಿಳಿಸಿದರು.

ಸಭೆಯಲ್ಲಿ ಆರೋಗ್ಯ ನಿರೀಕ್ಷಕ ಜಾಸಿಂಖಾನ್,ಲೆಕ್ಕಾಧಿಕಾರಿ ಭಾವನ,ವಿಷಯ ಸಂಗ್ರಾಹಕಿ ರೂಪ ಮಹೇಂದ್ರ ಸೇರಿದಂತೆ ಪಂಚಾಯ್ತಿ ಸಿಬ್ಬಂದಿಗಳು,ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ತಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0