ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಗಣತಿ ನಮೂನೆ ವಿತರಣೆಯಲ್ಲಿ ಶೇ.99 ರಷ್ಟು ಸಾಧನೆ: ಸೋಮಶೇಖರ್
ಮಡಿಕೇರಿ ಜು.14:-ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‍ಐಆರ್) ಕಾರ್ಯವು ಜಿಲ್ಲೆಯಾದ್ಯಂತ ನಡೆಯುತ್ತಿದೆ. ಆ ದಿಸೆಯಲ್ಲಿ ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 552 ಮತಗಟ್ಟೆಗಳ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ‘ಗಣತಿ ನಮೂನೆ’ಯನ್ನು ಮತದಾರರಿಗೆ ವಿತರಿಸುವ ಕಾರ್ಯವನ್ನು ಶೇ.99 ರಷ್ಟು ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಿಳಿಸಿದ್ದಾರೆ.
ಮತದಾರರಿಂದ ಭರ್ತಿ ಮಾಡಿದ ಗಣತಿ ನಮೂನೆಯನ್ನು ಸಂಗ್ರಹಿಸಿ ಬಿಎಲ್‍ಒ ಆಪ್‍ನಲ್ಲಿ ಡಿಜಿಟಲೀಕರಣ ಮಾಡಲಾಗುತ್ತಿದೆ. ಮನೆ ಮನೆಗೆ ಭೇಟಿ ನೀಡುವ ಕಾರ್ಯವು ಜುಲೈ, 29 ರವರೆಗೆ ನಡೆಯಲಿದೆ. ಜೊತೆಗೆ ಡಿಜಿಟಲೀಕರಣ ಕಾರ್ಯವೂ ಸಹ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದ್ದಾರೆ.
‘ಆನ್‍ಲೈನ್ ಮೂಲಕವೂ ಸಹ ಗಣತಿ ನಮೂನೆಯನ್ನು 952 ಮಂದಿ ಮತದಾರರು ಸಲ್ಲಿಸಿದ್ದಾರೆ. ಹಾಗೆಯೇ ಜಿಲ್ಲೆಯಲ್ಲಿ 70 ಗೈರು, 2228 ಕುಟುಂಬಗಳು ಸ್ಥಳಾಂತರ, 1629 ಮರಣ, 274 ಡೂಪ್ಲಿಕೇಟ್, 14 ಇತರೆ ಒಟ್ಟು 4,215 ಮತದಾರರ ಸಂಖ್ಯೆಯನ್ನು ಹೊಂದಿದೆ ಎಂದು ಜಿಲ್ಲಾಧಿಕಾರಿ ಅವರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.’
ಜಿಲ್ಲೆಯಲ್ಲಿ ಎರಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 4,68,657 ಮತದಾರರು ಇದ್ದು, 4,68,657 ಗಣತಿ ನಮೂನೆ ಮುದ್ರಣವಾಗಿದ್ದು, ಇದರಲ್ಲಿ 4,63,301 ಗಣತಿ ನಮೂನೆಯನ್ನು ವಿತರಿಸಿ, 1,21,226 ಗಣತಿ ನಮೂನೆಯನ್ನು ಮತದಾರರಿಂದ ಸಂಗ್ರಹಿಸಿ ಡಿಜಿಟಲೀಕರಣ ಮಾಡಿ. ಗಣತಿ ನಮೂನೆ ವಿತರಣೆಯಲ್ಲಿ ಶೇ.98.86 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸೋಮಶೇಖರ್ ಅವರು ತಿಳಿಸಿದ್ದಾರೆ.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‍ಐಆರ್) ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ನೋಡಲ್ ಅಧಿಕಾರಿಗಳು ಮೇಲ್ವಿಚಾರಣೆ ಕಾರ್ಯದ ಬಗ್ಗೆ ಹಲವು ನಿರ್ದೇಶನ ನೀಡಿದರು.
ಬೂತ್ ಮಟ್ಟದ ಅಧಿಕಾರಿಗಳು ಚುನಾವಣಾ ಆಯೋಗದ ನಿರ್ದೇಶನದಂತೆ ಮನೆ ಮನೆಗೆ ಭೇಟಿ ನೀಡಿ ಮತದಾರರ ಗಣತಿ ನಮೂನೆ ವಿತರಿಸುವುದರ ಜೊತೆಗೆ ನಿಯಮಗಳನ್ನು ಪಾಲಿಸಬೇಕು ಎಂದರು.
ಮುಖ್ಯ ಚುನಾವಣಾಧಿಕಾರಿ ಅವರ ಕಚೇರಿಯಿಂದ ನೀಡಿರುವ ಸ್ಟಿಕ್ಕರ್‍ಗಳನ್ನು ಅಂಟಿಸಿರುವ ಬಗ್ಗೆ ಪರಿಶೀಲಿಸುವುದು, ಲಾಕ್ ಆಗಿರುವ ಮನೆಗಳಿಗೆ ಕನಿಷ್ಠ ಮೂರು ಬಾರಿ ಭೇಟಿ ನೀಡಿರುವ ಬಗ್ಗೆ ಪರಿಶೀಲಿಸುವುದು ಅತ್ಯಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಮತದಾರರಿಂದ ಗಣತಿ ನಮೂನೆ ಪಡೆದು ಬಿಎಲ್‍ಒ ಆಪ್‍ನಲ್ಲಿ ಕ್ರಮಬದ್ಧವಾಗಿ ಡಿಜಿಟಲೀಕರಣ ಮಾಡಿರುವ ಬಗ್ಗೆ ಪರಿಶೀಲಿಸಬೇಕು. ಚುನಾವಣಾ ಆಯೋಗದ ನಿರ್ದೇಶನದಂತೆ ನಿಗದಿತ ಸಮಯದೊಳಗೆ ಡಿಜಿಟಲೀಕರಣ ಪೂರ್ಣಗೊಳಿಸಿ ನೋಡಲ್ ಅಧಿಕಾರಿಗಳು ಮೇಲ್ವಿಚಾರಣೆ ಮಾಡುವುದು ಅತ್ಯಗತ್ಯವಾಗಿದೆ. ಹಾಗೆಯೇ ಬಿಎಲ್‍ಒ ಕೇಂದ್ರಗಳು ಹಾಗೂ ಮತದಾರರ ಕೇಂದ್ರಗಳಲ್ಲಿ ವಿಶೇಷ ಶಿಬಿರ ಏರ್ಪಡಿಸುವಂತಾಗಬೇಕು ಎಂದು ಸಲಹೆ ಮಾಡಿದರು.
ಬಿಎಲ್‍ಒಗಳು ಮತದಾರರ ಸ್ಥಳಾಂತರ, ಯಾರಾದರೂ ನಿಧನ ಹೊಂದಿದ್ದಲ್ಲಿ ಮಾಹಿತಿ ನೀಡುವುದು ಹಾಗೆಯೇ ಇತರೆ ಪ್ರಕರಣಗಳು ಇದ್ದಲ್ಲಿ ಮತ್ತಿತರ ಬಗ್ಗೆ ಪರಿಶೀಲಿಸಬೇಕಿದೆ ಎಂದರು.
ಬಿಎಲ್‍ಒಗಳು ಬಿಎಲ್‍ಎ ಸಭೆಯನ್ನು ಮಾಡಿರುವ ಬಗ್ಗೆ ಖಾತರಿ ಪಡಿಸಿಕೊಳ್ಳುವುದು. ಡಿಜಿಟಲೀಕರಣ ಸಂಬಂಧಿಸಿದಂತೆ ವಿಶೇಷ ಕ್ಯಾಂಪ್‍ಗಳನ್ನು ಮಾಡಿರುವ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಯಾವುದೇ ರೀತಿಯ ದೂರುಗಳಿಗೆ ಸಂಬಂಧಿಸಿದಂತೆ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡ ಬಗ್ಗೆ ಮಾಹಿತಿ ಒದಗಿಸಬೇಕು. ಗಣತಿ ನಮೂನೆ ಹಾಗೂ ದಾಖಲೆಗಳನ್ನು ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳ ಕಚೇರಿಗೆ ಸಲ್ಲಿಸಿರುವ ಬಗ್ಗೆ ಪರಿಶೀಲಿಸಬೇಕು. ಚುನಾವಣಾ ಆಯೋಗವು ನೀಡಿರುವ ಸೂಚನೆಗಳಂತೆ ಬಿಎಲ್‍ಒಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ನೋಡಲ್ ಅಧಿಕಾರಿಗಳು ಗಮನಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಭಾರತ ಚುನಾವಣಾ ಆಯೋಗವು ನೀಡಿರುವ ಸೂಚನೆಯಂತೆ ಬಿಎಲ್‍ಒಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ನೋಡಲ್ ಅಧಿಕಾರಿಗಳು ಗಮನಿಸಬೇಕು ಎಂದರು.
ರಾಜಕೀಯ ಪಕ್ಷಗಳ ಸಭೆ ಏರ್ಪಡಿಸಿ, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಮಾಹಿತಿ ನೀಡುವುದು ಅತ್ಯಗತ್ಯ. ರಾಜಕೀಯ ಪಕ್ಷಗಳ ಸಹಕಾರ ಜೊತೆಗೆ ವಿಶೇಷವಾಗಿ ಹಾಡಿಗಳಲ್ಲಿ ವಿಶೇಷ ಕ್ಯಾಂಪ್ ಏರ್ಪಡಿಸಿ ಗಣತಿ ನಮೂನೆಗಳನ್ನು ಭರ್ತಿ ಮಾಡಲು ಹಾಗೂ ಡಿಜಿಟಲೀಕರಣ ಮಾಡಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸೋಮಶೇಖರ್ ಅವರು ಹೇಳಿದರು.
ವಿತರಿಸಲು ಬಾಕಿ ಇರುವ ಗಣತಿ ನಮೂನೆಗಳನ್ನು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ವಿತರಿಸಲು, ಗುರುತು ಮಾಡಲು ಕ್ರಮವಹಿಸುವುದು. ಜೊತೆಗೆ ಯಾವುದೇ ಕಾರ್ಯ ವಿಧಾನ ತಪ್ಪಾಗದಂತೆ ಎಲ್ಲಾ ದಾಖಲೆಗಳನ್ನು ನಿರ್ವಹಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.
ಭಾರತ ಚುನಾವಣಾ ಆಯೋಗವು ನೀಡಿರುವ ವೇಳಾ ಪಟ್ಟಿಯಂತೆ ಎಲ್ಲಾ ಚುನಾವಣಾ ಕೆಲಸಗಳನ್ನು ಪೂರ್ಣಗೊಳಿಸಲು ಸಂಪೂರ್ಣವಾಗಿ ಅಧಿಕಾರಿಗಳು ತೊಡಗಿಸಿಕೊಂಡು ಕ್ಷೇತ್ರ ಮಟ್ಟದಲ್ಲಿ ಯಾವುದೇ ಸಮಸ್ಯೆಗಳು ಬಾರದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣಾ ಕಾರ್ಯವನ್ನು ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ನಿರ್ದೇಶನ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಹನಾ ಎಸ್.ಹಾದಿಮನಿ ಅವರು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧಿಸಿದಂತೆ ಹಲವು ನಿರ್ದೇಶನ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ಇದ್ದರು
What's Your Reaction?
Like
0
Dislike
0
Love
0
Funny
0
Angry
0
Sad
0
Wow
0

