ರಾಜ್ಯ ಬಜೆಟ್;ಕೊಡಗು ಜಿಲ್ಲೆಗೆ ಸಿಕ್ಕಿದ್ದೇನು?
admincoorgdaily

ಮಡಿಕೇರಿ;ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದಲ್ಲಿ ಐತಿಹಾಸಿಕ 17ನೇ ಬಾರಿ ರಾಜ್ಯ ಬಜೆಟ್ ಮಂಡಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಕೊಡಗಿಗೆ ಸಿಕ್ಕಿದ್ದೇನು!; ಕ್ರೀಡಾ ತವರೂರು ಕೊಡಗು ಜಿಲ್ಲೆಗೆ ಈ ಬಾರಿಯ ಬಜೆಟ್‌ನಲ್ಲಿ ನಲ್ಲಿ ಕ್ರೀಡಾ ಕ್ಷೇತ್ರಕ್ಕೆ, ಮಕ್ಕಳ ಕ್ರೀಡಾ ಪ್ರತಿಭೆಯನ್ನು ಪ್ರೋತ್ಸಾಹಿಸಲು ಸುಸಜ್ಜಿತ ಕ್ರೀಡಾ ತರಬೇತಿ ವಸತಿ ನಿಲಯವನ್ನು ವಿರಾಜಪೇಟೆಯಲ್ಲಿ ಕ್ರಮಕೈಗೊಳ್ಳಲಾಗುವುದೆಂದು ಘೋಷಿಸಲಾಗಿದೆ.ಆದರೆ ಅನುದಾನ ಘೋಷಿಸಿಲ್ಲ. ಬಿಟ್ಟಂಗಾಲದಲ್ಲಿ ಈಗಾಗಲೇ ಕ್ರೀಡಾ ತರಬೇತಿ ವಸತಿ ನಿಲಯ ನಿರ್ಮಾಣಕ್ಕೆ ಜಾಗ ಕೂಡ ಗುರುತಿಸಲಾಗಿದೆ.
2023ರ ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಾಪೋಕ್ಲುವಿನಲ್ಲಿ ನಡೆದ ಕೊಡವ ಹಾಕಿ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ಘೋಷಿಸಿದ್ದರು.ಆದರೆ ಕೊಡವ ಅಭಿವೃದ್ಧಿ ನಿಗಮ ಬರೀ ಘೋಷಣೆಗೆ ಸೀಮಿತವಾಗಿತ್ತು. ಇದುವರೆಗೆ ಕೊಡವ ಅಭಿವೃದ್ಧಿ ನಿಗಮ ಕಾರ್ಯರೂಪಕ್ಕೆ ಬಂದಿಲ್ಲ.
ಈ ಬಾರಿಯ ಬಜೆಟ್ ನಲ್ಲಿ ಕೊಡವ ಸಮುದಾಯದ ಆರ್ಥಿಕ ಏಳಿಗೆಗಾಗಿ ಪ್ರತ್ಯೇಕ ನಿಗಮಗಳನ್ನು ಸ್ಥಾಪಿಸಲಾಗಿದೆ ಎಂದು ಉಲ್ಲೇಖಿಸಿಲಾಗಿದೆ. ಈ ನಿಗಮಗಳ ಮೂಲಕ ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದೆಂದು ಘೋಷಿಸಲಾಗಿದೆ.ಈ ಬಾರಿಯ ಬಜೆಟ್ ನಲ್ಲಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ ಎಂದು ಘೋಷಿಸಿದ್ದು,ಹಲವು ದಶಕಗಳ ಕನಸು ನನಸಾಗಿದೆ.
ಮಾನವ-ವನ್ಯಪ್ರಾಣಿ ಸಂಘರ್ಷವನ್ನು ತಡೆಗಟ್ಟುವ ಉದ್ದೇಶದಿಂದ ಮಾನವ-ವನ್ಯಪ್ರಾಣಿ ಸಂಘರ್ಷ ಕಡಿಮೆ 'ಕರ್ನಾಟಕ ನಿವಾರಣಾ ಕಾರ್ಯತಂತ್ರ ಯೋಜನೆ'ಯನ್ನು ಅನುಷ್ಠಾನಗೊಳಿಸಲು ಮುಂದಿನ ಐದು ವರ್ಷದಲ್ಲಿ 1,500 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 269 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.ಈ ಯೋಜನೆಯೂ ಕೊಡಗು ಜಿಲ್ಲೆಗೆ ಪ್ರಯೋಜನಕಾರಿಯಾಗಿದೆ.
2026-27ನೇ ಸಾಲಿನ ಆಯವ್ಯಯ ,ಕಾರ್ಮಿಕ ಇಲಾಖೆಯಿಂದ ಹಂತ-2ರಲ್ಲಿ ವಿರಾಜಪೇಟೆಯಲ್ಲಿ ಶ್ರಮಿಕ ವಸತಿ ಶಾಲೆ ನಿರ್ಮಿಸಲು ಉದ್ದೇಶಸಿಸಲಾಗಿದೆ. ಉಳಿದಂತೆ ಕೊಡಗು ಜಿಲ್ಲೆಗೆ ಪ್ರತ್ಯೇಕ ಯೋಜನೆಯ ಘೋಷಣೆಯಾಗಿಲ್ಲ.