ಜುಲೈ 7 ಹಾಗೂ 8 ರಂದು ಬೆಂಗಳೂರಿನಲ್ಲಿ ರಾಜ್ಯ ಶರಣ ಸಾಹಿತ್ಯ ಸಮ್ಮೇಳನ
ಮಡಿಕೇರಿ : ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ಜುಲೈ 7 ಹಾಗೂ 8 ರಂದು ಬೆಂಗಳೂರಿನ ವಿಜಯನಗರದ ಸುಜ್ಞಾನ ಮಂಟಪದಲ್ಲಿ ಜರುಗಲಿದೆ.
ಹನ್ನೆರಡನೆ ಶತಮಾನದ ಬಸವಾದಿ ಶರಣರು ರಚಿಸಿದ ವಚನಗಳ ಸಾರವನ್ನು ನಾಡಿನಾದ್ಯಂತ ಮನೆ ಹಾಗೂ ಮನಗಳಿಗೆ ಪಸರಿಸುವ ಉದ್ದೇಶದೊಂದಿಗೆ ಸುತ್ತೂರು ವೀರ ಸಂಸ್ಥಾನ ಮಠದ 23 ನೇ ಜಗದ್ಗುರುಗಳಾದ ಡಾ.ರಾಜೇಂದ್ರ ಸ್ವಾಮೀಜಿ 1986 ರಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸ್ಥಾಪಿಸಿದರು. ಕನ್ನಡ ಸಾಹಿತ್ಯದ ತಾಯಿ ಬೇರಿನಂತಿರುವ ವಚನ ಸಾಹಿತ್ಯವನ್ನು ಪ್ರಬಲವಾಗಿ ಜನಮಾನಸದಲ್ಲಿ ಬಿತ್ತುವ ಕಾಯಕ ಮಾಡುತ್ತಿರುವ ಶರಣ ಸಾಹಿತ್ಯ ಪರಿಷತ್ತು ರಾಜ್ಯದ ಎಲ್ಲಾ ಜಿಲ್ಲೆಗಳು ಅಲ್ಲದೇ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಘಟಕಗಳನ್ನು ಹೊಂದಿದೆ.
ಹಾಗೆಯೇ ಎಲ್ಲೆಡೆ ಜಿಲ್ಲಾ ಸಮ್ಮೇಳನಗಳ ಮೂಲಕ ವಚನ ಸಾಹಿತ್ಯದ ಹರಿವು ಸಾಗುತ್ತಿದೆ. ಹಾಗೆಯೇ ಇದೇ ಜುಲೈ ತಿಂಗಳ 7 ಮತ್ತು 8 ರಂದು ರಾಜ್ಯ ಮಟ್ಟದ ಶರಣ ಸಾಹಿತ್ಯ ಸಮ್ಮೇಳನ ಬೆಂಗಳೂರಿನಲ್ಲಿ ಜರುಗುತ್ತಿದ್ದು ಸುತ್ತೂರು ಶ್ರೀಗಳಾದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹಾಗೂ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ವಿ.ಸೋಮಣ್ಣ, ರಾಜ್ಯ ಕ್ಯಾಬಿನೆಟ್ ಸಚಿವ ಎಂ.ಬಿ.ಪಾಟೀಲ್ ಮೊದಲಾದ ಗಣ್ಯರು ಭಾಗವಹಿಸುತ್ತಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳು, ವಿಚಾರ ಸಂಕಿರಣಗಳು ನಡೆಯಲಿವೆ.
ರಾಜ್ಯದ ಮೂಲೆ ಮೂಲೆಗಳಲ್ಲಿ ಇರುವ ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರು ಹಾಗೂ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು ದಾಸೋಹ, ವಸತಿ ಮತ್ತಿತರ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗುತ್ತಿದ್ದು ಶರಣ ಸಾಹಿತ್ಯದ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಬೇಕೆಂದು ಶರಣ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಹಾಗೂ ಕೊಡಗು ಜಿಲ್ಲಾ ಅಧ್ಯಕ್ಷ ಕೆ.ಎಸ್.ಮೂರ್ತಿ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಕೋರಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0

