ಪದೇ ಪದೇ ತವರಿಗೆ ಹೋಗುತ್ತಿದ್ದ ಪತ್ನಿಯ ಮೇಲೆ ಅನುಮಾನ: ಪತಿ ಮಾಡಿದ್ದೇನು ಗೊತ್ತೇ!

Nov 23, 2025 - 18:19
 0  2k
ಪದೇ ಪದೇ ತವರಿಗೆ ಹೋಗುತ್ತಿದ್ದ ಪತ್ನಿಯ ಮೇಲೆ ಅನುಮಾನ: ಪತಿ ಮಾಡಿದ್ದೇನು ಗೊತ್ತೇ!

ಕೋಲಾರ, ನ. 23: ತವರು ಮನೆಗೆ ಆಗಾಗ ತೆರಳುತ್ತಿದ್ದ ಕಾರಣಕ್ಕೆ ಅನುಮಾನ ಪಟ್ಟು ಪತ್ನಿಯನ್ನು ಕುತ್ತಿಗೆ ಹಿಸುಕಿ ಹತ್ಯೆಗೈದ ಪತಿ ಬಂಧಿತನಾಗಿರುವ ಘಟನೆ ಜಿಲ್ಲೆಯ ಜನ್ನಘಟ್ಟ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮೃತರ ಪೋಷಕರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿ ಶಿವರಾಜ್ನನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರ ಪ್ರಕಾರ, ಆಟೋ ಚಾಲಕನಾದ ಶಿವರಾಜ್ ಮತ್ತು ಮೃತ ಕಾವ್ಯಾ ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿಗೆ ಏಳು ವರ್ಷದ ಮಗಳು ಇದ್ದಾಳೆ. ಗಂಡ–ಹೆಂಡತಿ ನಡುವೆ ಕೆಲಕಾಲದಿಂದ ಜಗಳ ನಡೆಯುತ್ತಿದ್ದುದಾಗಿ ನೆರೆಹೊರೆಯವರು ತಿಳಿಸಿದ್ದಾರೆ. ಹೆಂಡತಿ ತವರಿಗೆ ಹೋಗುವುದು, ಗಂಡು ಮಗುವಿಲ್ಲದಿರುವುದು ಹಾಗೂ ತವರಿನಿಂದ ಹಣ ತಂದುಕೊಡಬೇಕೆಂಬ ಒತ್ತಡ—ಇವೆಲ್ಲ ಕಾರಣಗಳಿಗೆ ದಾಂಪತ್ಯದಲ್ಲಿ ಕಲಹ ಹೆಚ್ಚಾಗಿತ್ತು.

ನವೆಂಬರ್ 21ರ ಮಧ್ಯಾಹ್ನ ದಂಪತಿಗಳ ನಡುವೆ ನಡೆದ ವಾಗ್ವಾದದಿಂದ ಗಲಾಟೆ ಗಂಭೀರಗೊಂಡು, ಕಾವ್ಯಾ ಪ್ರತಿರೋಧಿಸಿದಾಗ ಕೋಪೋದ್ರಿಕ್ತನಾದ ಶಿವರಾಜ್ ಆಕೆಯನ್ನು ನೆಲಕ್ಕೆ ಬೀಳಿಸಿ ಎದೆ ಮೇಲೆ ಕುಳಿತು ಕತ್ತುಹಿಸುಕಿ ಕೊಂದಿದ್ದಾನೆಂದು ಎಂದು ತಿಳಿದು ಬಂದಿದೆ. ನಂತರ ಸಂಜೆವರೆಗೆ ಹೊರಗೆ ಸುತ್ತಾಡಿ, ಮನೆಗೆ ಬಂದು ಹೆಂಡತಿ ಉಸಿರಾಡುತ್ತಿಲ್ಲವೆಂದು ನಾಟಕವಾಡಿ ನೆರೆಮನೆಯವರ ನೆರವಿನಿಂದ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದ ಎನ್ನಲಾಗಿದೆ. ಆದರೆ ವೈದ್ಯರು, ಮಹಿಳೆ ಮೃತಪಟ್ಟು ನಾಲ್ಕೈದು ಗಂಟೆಗಳಾಗಿವೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಮೃತಳ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಶಿವರಾಜ್ನನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆರಂಭದಲ್ಲಿ ಸಹಜ ಸಾವಿನಂತೆ ತೋರಿಸಲು ಯತ್ನಿಸಿದ ಆರೋಪಿ, ನಂತರ ಪತ್ನಿಯನ್ನು ಕೊಂದಿರುವುದು ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

What's Your Reaction?

Like Like 2
Dislike Dislike 0
Love Love 1
Funny Funny 0
Angry Angry 2
Sad Sad 3
Wow Wow 1