ಕೊಡಗಿನ ವಿವಿಧ ಭಾಗಗಳಲ್ಲಿ ಆನೆಗಳ ಹಾವಳಿ ಮಿತಿಮೀರಿದ್ದು ರೈತಾಪಿ ವರ್ಗದವರು ಸಂಕಷ್ಟ ಎದುರಿಸುತ್ತಿದ್ದಾರೆ; ಕೆ.ಹೆಚ್ ಹನೀಫ್

ಕೊಡಗಿನ ವಿವಿಧ ಭಾಗಗಳಲ್ಲಿ ಆನೆಗಳ ಹಾವಳಿ ಮಿತಿಮೀರಿದ್ದು ರೈತಾಪಿ ವರ್ಗದವರು ಸಂಕಷ್ಟ ಎದುರಿಸುತ್ತಿದ್ದಾರೆ; ಕೆ.ಹೆಚ್ ಹನೀಫ್

ವಿರಾಜಪೇಟೆ:ಕೊಡಗಿನ ವಿವಿಧ ಭಾಗಗಳಲ್ಲಿ ಆನೆಗಳ ಹಾವಳಿ ಮಿತಿಮೀರಿದ್ದು ರೈತಾಪಿ ವರ್ಗದವರು ಸಂಕಷ್ಟದಲ್ಲಿದ್ದಾರೆ ಎಂದು ಕರ್ನಾಟಕ ಕಾಫಿ ರೈತರ ಸಂಘದ ಸಂಚಾಲಕ ಮೈತಾಡಿ ಗ್ರಾಮದ ಕೆ.ಹೆಚ್ ಹನೀಫ್ ಹೇಳಿದರು.

 ಸಂಘದ ವತಿಯಿಂದ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ಮಾತನಾಡಿದ ಹನೀಫ್ ಅವರು, ಜಿಲ್ಲೆಯಲ್ಲಿರುವ ಅರಣ್ಯ ವ್ಯಾಪ್ತಿಯ ಅಂಚಿನಲ್ಲಿರುವ ಗ್ರಾಮಗಳ ರೈತರ ಬದುಕು ವನ್ಯಪ್ರಾಣಿಗಳೊಂದಿಗೆ ಹೋರಾಡುವುದರಲ್ಲಿಯೇ ಕಾಲ ಕಳೆದು ಹೋಗುತ್ತಿದ್ದು, ಕಷ್ಟಪಟ್ಟು ಬೆಳೆ ಬೆಳೆದರೂ ಅದು ಕೊಯ್ಲು ತನಕ ಉಳಿಯುತ್ತದೆ ಎಂಬ ನಂಬಿಕೆ ರೈತರಿಗಿಲ್ಲದಾಗಿದೆ. ಅರಣ್ಯದಿಂದ ಕಾಡಾನೆಗಳು ನುಸುಳಿಕೊಂಡು ನಾಡಿನತ್ತ ಬರುತ್ತಿವೆ. ಕೆಲವು ರೈತರು ತಾವು ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳುವ ಸಲುವಾಗಿ ಜಮೀನಿನ ಸುತ್ತ ಬೇಲಿ ನಿರ್ಮಿಸಿದ್ದರೂ ಕಾಡಾನೆಗಳು ಅದನ್ನು ತುಳಿದು ಬರುತ್ತವೆ.

ಸಾವಿರಾರು ರೂಪಾಯಿ ಖರ್ಚು ಮಾಡಿದ ಬೆಳೆ ನಾಶವಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಈ ಬಗ್ಗೆ ಅರಣ್ಯಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಿಲ್ಲ. ಅಲ್ಲದೆ ಅರಣ್ಯ ಇಲಾಖೆ ಕಾಡಾನೆಗಳು ನಾಶ ಮಾಡುವ ಬೆಳೆಗಳಿಗೆ ಅಲ್ಪ ಪರಿಹಾರ ನೀಡುವ ಬದಲು ಕಾಡಾನೆಗಳು ಅರಣ್ಯದಿಂದ ದಾಟಿ ನಾಡಿಗೆ ಬಾರದಂತೆ ನೋಡಿಕೊಳ್ಳುವ ಕೆಲಸ ಮಾಎಬೇಕಿದೆ. ಆದರೆ ಅವರು ನಾಟಕ ಮಾಡಿಕೊಂಡು ಮಾದ್ಯಮಕ್ಕೆ ಪೋಸ್ ಕೊಟ್ಟು ಕಾಲಹರಣ ಮಾಡುತ್ತಾರೆ ಎಂದು ಆರೋಪಿಸಿದರು.

 ಇಲ್ಲಿ ರೈತರ ಸಂಕಷ್ಟ ಕೇಳುವವರು ಯಾರು? ಒಮ್ಮೆ ಕಾಡಾನೆಗಳು ಜಮೀನಿಗೆ ನುಗ್ಗಿದರೆ ಕೇವಲ ಬೆಳೆಯನ್ನಷ್ಟೆ ಹಾಳು ಮಾಡುವುದಿಲ್ಲ. ಜಮೀನಿಗೆ ಅಳವಡಿಸಿದ ಸೋಲಾರ್ ಬೇಲಿ, ಪಂಪ್ ಸೆಟ್, ತಂತಿಬೇಲಿಯನ್ನೆಲ್ಲ ಹಾಳು ಮಾಡುತ್ತವೆ. ಇದರಿಂದ ಬೆಳೆಯೊಂದಿಗೆ ಸಾವಿರಾರು ರೂಪಾಯಿ ನಷ್ಟವಾಗುತ್ತವೆ. ನಾವು ಕೃಷಿಯಿಂದಲೇ ಜೀವನ ನಿರ್ವಹಣೆ ಮಾಡಬೇಕಾಗಿದೆ. ಹೀಗಿರುವಾಗ ಫಸಲು ಬರುವಾಗಲೇ ಕಾಡಾನೆಗಳು ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡಿದರೆ ಜೀವನ ಮಾಡುವುದಾದರೂ ಹೇಗೆ. ಇದಕ್ಕೆ ಉತ್ತರ ಅರಣ್ಯ ಇಲಾಖೆಯೇ ಹೇಳಬೇಕಾಗಿದೆ.

ವಿರಾಜಪೇಟೆಯ ಮಲ್ಲಮಟ್ಟಿ ಮೈತಾಡಿ ಹಾಲುಗುಂದ, ಬೆಳ್ಳರಿಮಾಡು, ಚೆಂಬೇಬೆಳ್ಳೂರು, ದೇವಣಗೇರಿ, ಭಟ್ಟಮಕ್ಕಿ ಪ್ರದೇಶದಲ್ಲಿ ಆನೆಯೊಂದು ತೋಟಗಳಿಗೆ ನುಗ್ಗಿ ಹತ್ತಾರು ವರ್ಷಗಳಿಂದ ರೈತರು ಬೆಳೆದ ಬೆಳೆಗಳನ್ನು, ತೆಂಗಿನ ಮರಗಳನ್ನು, ಬಾಳೆ ಗಿಡಗಳನ್ನು, ಕಾಫಿ ಗಿಡಗಳನ್ನು ನಾಶ ಮಾಡಿದೆ. ಬಾಳೆ ತೋಟದಲ್ಲಿ ಒಂದೇ ಒಂದು ಬಾಳೆ ಗಿಡಗಳು ಕಾಣಿಸುವುದಿಲ್ಲ. ಈ ಒಂಟಿಸಲಗವನ್ನು ಹಿಡಿಯಿರಿ ಎಂದರೆ ಅರಣ್ಯ ಇಲಾಖೆ ಅದನ್ನು ಬಿಟ್ಟು ಬೇರೆ ಆನೆಗಳನ್ನು ಹಿದಿದಿದ್ದಾರೆ. ಆನೆ ಓಡಿಸುವ ನಾಟಕವಾಡಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಿಸಿ ಸುಮ್ಮನಾಗುತ್ತಾರೆ. ಅರಣ್ಯ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

  ನಾಗರೀಕ ಸಮಿತಿ ಸಂಚಾಲಕ ಡಾ. ಐ.ಆರ್. ದುರ್ಗಾಪ್ರಸಾದ್ ಮಾತನಾಡಿ, ಆನೆಗಳ ಉಪಟಳದಿಂದ ನಿತ್ಯ ಈ ರೀತಿ ದುರ್ಘಟನೆಗಳಾಗಿದ್ದು ಬೇಸತ್ತ ರೈತರು ನೂರಾರು ಎಕರೆ ಗದ್ದೆಗಳನ್ನು ಪಾಳು ಬಿಟ್ಟಿದ್ದಾರೆ. ನಿತ್ಯೋಪಯೋಗಿ ಸರಕುಗಳ ನಿರಂತರ ಬೆಲೆ ಏರಿಕೆಯೊಂದಿಗೆ ವಿದ್ಯಾಭ್ಯಾಸ ರಂಗದಲ್ಲಿ, ವೈದ್ಯಕೀಯ ರಂಗದಲ್ಲಿ ಕಾರ್ಪೊರೇಟ್ ಹಿಡಿತಕ್ಕೆ ಸರಕಾರ ಅನುವು ಮಾಡಿಕೊಟ್ಟು ಈ ರಂಗವು ಬಹಳ ದುಬಾರಿಯಾಗಿದೆ. ಹೀಗಾಗಿ ಸಾಮಾನ್ಯ ರೈತನಿಗೆ ಕುಟುಂಬ ನಿರ್ವಹಣೆ ದುಸ್ತರವಾಗುತ್ತಿದೆ. ಈ ಸಂದರ್ಭದಲ್ಲಿ ಆನೆ ದಾಳಿಯಿಂದ ಉಂಟಾಗುವ ನಷ್ಟದಿಂದ ರೈತರು ದಿಕ್ಕು ಕಾಣದವರ ಹಾಗೆ ಆಗಿದೆ. ಈ ದಾಳಿಯಿಂದ ಅವರು ಚೇತರಿಸಿಕೊಳ್ಳಲು ವರ್ಷಗಳೇ ಬೇಕು. ಅಷ್ಟರಲ್ಲಿ ಮತ್ತೆ ಮತ್ತೆ ಆಘಾತಗಳು ಅವರನ್ನು ನಿರಂತರ ಕಾಡುತ್ತಲೇ ಇದೆ. ಸರಕಾರಗಳು, ಮಂತ್ರಿಗಳು, ರೈತರೊಳಗೊಂಡು ಸಾಮಾನ್ಯ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಜನರು ಸಂಕಷ್ಟದಲ್ಲಿ ಪರಿತಪಿಸುತ್ತಿದ್ದರೆ ಅಧಿಕಾರದಲ್ಲಿರುವವರು ಜನರ ಹಣದಲ್ಲಿ ಐಶಾರಾಮಿ ಜೀವನ ನಡೆಸುತ್ತಾ ಜನರಿಗೆ ಸುಳ್ಳು ಭರವಸೆಗಳನ್ನು ಕೊಡುತ್ತಾ ಕಾಲ ಹರಣ ಮಾಡುತ್ತಿದ್ದಾರೆ. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ರೈತರನ್ನು ಕಾಡುತ್ತಿರುವ ಆನೆಗಳ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಆನೆ ದಾಳಿಯಿಂದ ಯಾರಾದರೂ ಸತ್ತರೆ ಅಧಿಕಾರಿಗಳೊಂದಿಗೆ ಬಂದು ಚೆಕ್ಕು ಕೊಟ್ಟು ಮೊಸಳೆ ಕಣ್ಣೀರು ಸುರಿಸಿ ಹೋಗುತ್ತಾರೆ. ಇದರಿಂದ ರೈತರು ಬೇಸತ್ತಿದ್ದಾರೆ. ಅರಣ್ಯ ಇಲಾಖೆಯವರು ಕೂಡಲೇ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ಅರಣ್ಯ ಇಲಾಖೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಹೇಳಿದರು.

 ಚಾಮಿಯಾಲದ ಕೆ.ಎ. ಹಂಸ ಮಾತನಾಡಿ, ತೋಟದಲ್ಲಿ ನಷ್ಟ ಬಂದರೆ ಭಿಕ್ಷೆ ಕೊಟ್ಟಂತೆ ಕ್ಷುಲ್ಲಕ ಮೊತ್ತ ಕೊಡುತ್ತಾರೆ. ಒಂದು ಲಕ್ಷ ನಷ್ಟವಾದರೆ ಸಾವಿರ ರೂ ನಷ್ಟ ಪರಿಹಾರ ಕೊಟ್ಟು ತಾವೇನು ದೊಡ್ಡ ಉಪಕಾರ ಮಾಡಿದಂತೆ ನಟಿಸಿ ಅಧಿಕಾರಿಗಳು ಸುಮ್ಮನಾಗುತ್ತಾರೆ. ದಾಳಿಗೊಳಗಾದ ಗಿಡ, ಮರಗಳನ್ನು ಮತ್ತೆ ಅದೇ ಮಟ್ಟಕ್ಕೆ ಬೆಳೆಸಲು ರೈತ ವರ್ಷಗಟ್ಟಲೆ ಕಾಯಬೇಕು. ಸಾಕಷ್ಟು ಖರ್ಚು ಮಾಡಬೇಕು ಈ ನಷ್ಟದಿಂದ ಕುಸಿದ ಅವನ ಜೀವನ ನಿರ್ವಹಣೆಯ ಬಗ್ಗೆ ಸರಕಾರ ಕೇಳುವುದಿಲ.್ಲ ಹಾಗಾಗಿ ಕಾಡನ್ನು ಮತ್ತು ಅದರಲ್ಲಿರುವ ಪ್ರಾಣಿ ಪಕ್ಷಿಗಳನ್ನು ಕಾಪಾಡುವ ತಹಬದಿಯಲ್ಲಿರುವ ಜವಾಬ್ದಾರಿ ಸರಕಾರದ್ದೆ ಆಗಿದೆ ತಮ್ಮ ಹೊಡೆತನದಲ್ಲಿರುವ ಪ್ರಾಣಿಗಳಿಂದ ಯಾರಿಗಾದರೂ ತೊಂದರೆಯಾದರೆ ಅದಕ್ಕೆ ಸರಕಾರವೇ ಹೊಣೆಯಾಗಿದೆ ಎಂದರು.

 ಕರ್ನಾಟಕ ಕಾಫಿ ರೈತ ಸಂಘದ ಸಹ ಸಂಚಾಲಕ ಟಿ.ಟಿ. ಉದಯಕುಮಾರ್ ಮಾತನಾಡಿ, ಸರಕಾರ ರೈತರ ನಷ್ಟಕ್ಕೆ ಪರಿಹಾರ ಕೊಡಬೇಕು. ಅರಣ್ಯ ಮತ್ತು ಅದರಲ್ಲಿರುವ ಪ್ರಾಣಿಗಳ ಬಗ್ಗೆ ಎಚ್ಚರವಹಿಸಿ ಜನರಿಗೆ ಅವುಗಳಿಂದ ಉಪದ್ರವಾಗದಂತೆ ನೋಡಿಕೊಳ್ಳಬೇಕು. ರೈತರ ತಾಳ್ಮೆಯನ್ನು ಅವರ ದೌರ್ಬಲ್ಯವೆಂದು ಸರಕಾರ ಭಾವಿಸುವುದು ಬೇಡ. ಪರಿಸ್ಥಿತಿ ಹೀಗೆ ಮುಂದುವರಿದರೆ ಸರಕಾರ ರೈತ ಬಂಡಾಯವನ್ನು ಎದುರಿಸಬೇಕಾಗುತ್ತದೆ ಎಂದರು.