ವಿರಾಜಪೇಟೆ;ಮೇ 26ರಂದು ನುಡಿ ಉತ್ಸವದ ರಾಷ್ಟ್ರಮಟ್ಟದ ವಿಚಾರ ಸಂಕಿರಣ

May 6, 2026 - 20:00
 0  105
ವಿರಾಜಪೇಟೆ;ಮೇ 26ರಂದು ನುಡಿ ಉತ್ಸವದ ರಾಷ್ಟ್ರಮಟ್ಟದ ವಿಚಾರ ಸಂಕಿರಣ

ವಿರಾಜಪೇಟೆ: ಕೊಡಗಿನ ನುಡಿ ಉತ್ಸವ ಸಮಿತಿ, ಕೊಡಗು ವಿಶ್ವವಿದ್ಯಾಲಯ ಮತ್ತು ಕಾವೇರಿ ಕಾಲೇಜು ವಿರಾಜಪೇಟೆ ಇವರ ಸಹಭಾಗಿತ್ವದಲ್ಲಿ ಮೇ 26ರಂದು ವಿರಾಜಪೇಟೆಯ ಕಾವೇರಿ ಕಾಲೇಜಿನಲ್ಲಿ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ವಿರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಜಿ.ವೀಣಾ ಮಾಹಿತಿ ನೀಡಿದರು. 

ವಿರಾಜಪೇಟೆ ಪತ್ರಕರ್ತರ ವೇದಿಕೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು "ಗಡಿ ಪ್ರದೇಶಗಳ ಪಠ್ಯಕ್ರಮದಲ್ಲಿ ಕನ್ನಡ ಭಾಷಾ ಶಿಕ್ಷಣ ಸ್ವರೂಪ, ಭಾಷಾ ನೀತಿ ಹಾಗೂ ಬಹುಭಾಷಾ ವಾಸ್ತವಿಕತೆಗಳ ಮರುಚಿಂತನೆ" ಎಂಬ ಪರಿಕಲ್ಪನೆಯ ಕುರಿತು ಹಮ್ಮಿಕೊಂಡಿರುವ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದ ಉದ್ಘಾಟನೆಯನ್ನು ಕೊಡಗು ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಅಶೋಕ ಸಂಗಪ್ಪ ಆಲೂರ ರವರು ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಕಾವೇರಿ ಎಜುಕೇಷನ್ ಸೊಸೈಟಿ (ರಿ)ಯ ಅಧ್ಯಕ್ಷರಾದ ಎಂ‌. ಎಸ್. ಮುತ್ತಣ್ಣ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿವಿರಾಜಪೇಟೆ ಶಾಸಕ ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ. ಎಸ್. ಪೊನ್ನಣ್ಣರವರು ಭಾಗವಹಿಸಲಿದ್ದಾರೆ . 

ಈ ವಿಚಾರ ಸಂಕಿರಣದಲ್ಲಿ ಪ್ರಾಥಮಿಕ ಶಾಲಾ ಹಂತದ ಕನ್ನಡ ಬೋಧಕರಿಂದ ಹಿಡಿದು ಪ್ರೌಢಶಾಲಾ, ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಪದವಿಗಳ ಕನ್ನಡ ಭಾಷಾ ಬೋಧಕರು (ಅಥವಾ ತತ್ಸಮಾನ) ಭಾಷಾ ತಜ್ಞರುಗಳು, ಬರಹಗಾರರು, ಕವಿಗಳು, ಕನ್ನಡ ಭಾಷಾ ಅಧ್ಯಯನ ಕೇಂದ್ರಗಳ, ಸ್ವಾಯತ್ತ ಸಂಸ್ಥೆಗಳ ಪದನಾಮ ಹೊಂದಿರುವ ಯಾವುದೇ ಸಂಪನ್ಮೂಲ ವ್ಯಕ್ತಿಗಳು, ಸಂಶೋಧನಾ ಅಭ್ಯರ್ಥಿಗಳು, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮತ್ತು ಕನ್ನಡ ಪರ ಹೋರಾಟದ ನಾಯಕರು ಪಾಲ್ಗೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಯಾವುದೇ ನೋಂದಣಿ ಶುಲ್ಕವಿರುವುದಿಲ್ಲ. ವಿಚಾರ ಸಂಕಿರಣದಲ್ಲಿ ಭಾಗವಹಿಸುವವರಿಗೆ ಆಹಾರದ ವ್ಯವಸ್ಥೆಯೊಂದಿಗೆ, ಪ್ರಮಾಣ ಪತ್ರ ಹಾಗೂ ಉಚಿತ ಕಿಟ್ ನೀಡಲಾಗುವುದು ಎಂದರು. 

ಸುದ್ದಿ ಗೋಷ್ಟಿ ಉದ್ದೇಶಿಸಿ ಮಾತನಾಡಿದ ನುಡಿ ಉತ್ಸವ ಸಮಿತಿ ಅಧ್ಯಕ್ಷ ಅರ್ಜುನ್‌ ಮೌರ್ಯ ವಿಚಾರ ಗೋಷ್ಠಿ-೧ ೧೧:೪೦ ಗಂಟೆ ಯಿಂದ ೧೨:೪೦ ಗಂಟೆ ವರೆಗೆ ನಡೆಯಲಿದ್ದು, ಭಾರತ ಸರ್ಕಾರದ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ನಿಕಟಪೂರ್ವ ಯೋಜನಾ ನಿರ್ದೇಶಕರಾದ ಪ್ರೊ. ಬಿ. ಶಿವರಾಮ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲ್ಲಿದ್ದು, ಸಂಪನ್ಮೂಲ ವ್ಯಕ್ತಿಯಾಗಿ ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್ ಡೀಮ್ಡ್ ಟು ಬಿ ಯೂನಿವರ್ಸಿಟಿಯ ಭಾಷೆ ಮತ್ತು ಸಾಹಿತ್ಯ ವಿಭಾಗದ ನಿರ್ದೇಶಕರು ಹಾಗೂ ಪ್ರಖ್ಯಾತ ಬರಹಗಾರರಾದ ಡಾ. ಮುಸ್ತಾಫ ಕೆ. ಹೆಚ್. ಅವರು ಭಾಗವಹಿಸಲಿದ್ದಾರೆ ಎಂದರು.

ವಿಚಾರ ಗೋಷ್ಠಿ-೨ ೧೨:೪೦ ಗಂಟೆಯಿಂದ ರ ೧:೪೦ ಗಂಟೆ ವರೆಗೆ ನಡೆಯಲಿದೆ. ಕನ್ನಡದ ಹಿರಿಯ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಹುಚ್ಚೇಗೌಡರು ಅಧ್ಯಕ್ಷತೆ ವಹಿಸಲಿದ್ದು, ಕೇರಳ ರಾಜ್ಯದ ಕಣ್ಣೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಮಂಡಳಿ ಸದಸ್ಯರೂ, ಬರಹಗಾರ ಡಾ. ರತ್ನಾಕರ ಮಲ್ಲಮೂಲೆ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕೊಡಗು ವಿಶ್ವವಿದ್ಯಾಲಯದ ಅಂತಿಮ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ, ಕಳೆದ ಮೂರನೇ ಹಾಗೂ ನಾಲ್ಕನೇ ಸೆಮಿಸ್ಟರ್ ನಲ್ಲಿ ಕನ್ನಡ ಭಾಷೆಯಲ್ಲಿ ಶೇ. ೧೦೦% ರಷ್ಟು ಅಂಕ ತೆಗೆದುಕೊಂಡವರನ್ನು ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.

ವಿಚಾರ ಸಂಕಿರಣ ನೋಂದಣಿಗಾಗಿ www.nudiuthsava.in. ಭೇಟಿ ಮಾಡಲು ಅಥವಾ ನುಡಿ ಉತ್ಸವದ ಕಾರ್ಯದರ್ಶಿ ಲಿಖಿತ್ ರೈ 9008150824 ಹಾಗೂ ವಿಚಾರ ಸಂಕಿರಣದ ಸಂಯೋಜಕರಾದ ಸುನಿಲ್ ಕುಮಾರ್ 9741992917 ಸಂಪರ್ಕಿಸಲು ವಿನಂತಿಸಲಾಗಿದೆ ಎಂದರು.

 ಸಮಾರೋಪ ಅಧಿವೇಶನದ ಕುರಿತು ಮಾಹಿತಿ ನೀಡಿದ ನುಡಿ ಉತ್ಸವ ಸಮಿತಿಯ ಸಂಯೋಜಕರಾದ ಅಬ್ದುಲ್ ರೆಹಮಾನ್ ಕೊಡಗು ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಸುರೇಶ್ ಎಂ. ಅವರ ಅಧ್ಯಕ್ಷತೆ ವಹಿಸಲಿದ್ದು, ಪ್ರಖ್ಯಾತ ಸಾಹಿತಿಗಳು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕರಾದ ಡಾ. ಮಹಾಲಿಂಗು ಕಲ್ಕುಂದ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ, ಕಾವೇರಿ ಎಜುಕೇಷನ್ ಸೊಸೈಟಿ(ರಿ)ಯ ಗೌರವ ಕಾರ್ಯದರ್ಶಿ ಕೆ. ಪಿ. ಬೋಪಣ್ಣ ಅವರು ಭಾಗವಹಿಸಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಕಾವೇರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಬಿ.ಬಿ.ಸುನಿಲ್ ಕುಮಾರ್ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0